ಉಡುಪಿಗೆ ಪಿಪಿಪಿ ಮಾದರಿ ಸರ್ಕಾರಿ ಮೆಡಿಕಲ್ ಕಾಲೇಜು ಘೋಷಿಸಿದ ಮುಖ್ಯಮಂತ್ರಿ ಬೊಮ್ಮಾಯಿ

ಅಜ್ಜರಕಾಡು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು.
IMG-20210812-WA0031
Published on

ಉಡುಪಿ: ಜಿಲ್ಲೆಗೆ ಪಿಪಿಪಿ ಮಾದರಿಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅಜ್ಜರಕಾಡು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 250 ಹಾಸಿಗೆಗಳ ಜಿಲ್ಲಾ ಆಸ್ಪತ್ರೆ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಜನರ ಹಲವು ದಶಕಗಳ ಬೇಡಿಕೆಯಂತೆ ಜಿಲ್ಲಾ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಅದೇ ರೀತಿ ಸರ್ಕಾರ ಇತ್ತೀಚಿಗೆ ರೂಪಿಸಿದ ಪಿಪಿಪಿ ಮಾದರಿ ಮೆಡಿಕಲ್ ಕಾಲೇಜುಗಳ ಪಟ್ಟಿಯಲ್ಲಿ ಉಡುಪಿ ಜಿಲ್ಲೆಯು ಇರಲಿದೆ. ಇದಕ್ಕೆ ನಾನೇ ಸ್ವತಹ ಬಂದು ಅಡಿಗಲ್ಲು ಹಾಕುತ್ತೇನೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

200 ಬೆಡ್ ಗಳ ಬಿ ಆರ್ ಎಸ್ ಆಸ್ಪತ್ರೆಯನ್ನು ಸರ್ಕಾರವೇ ವಹಿಸಿಕೊಳ್ಳಲು ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಇದರಿಂದ ಈ ಭಾಗದ ಜನರಿಗೆ ನಿರಂತರ ಆರೋಗ್ಯ ಸೇವೆ ಲಭಿಸಲಿದೆ ಎಂದರು.

ಶಾಸಕ ರಘುಪತಿ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ , ಇಂಧನ  ಇಲಾಖೆ ಸಚಿವ ವಿ.ಸುನೀಲ್ ಕುಮಾರ್, ಸಮಾಜ ಕಲ್ಯಾಣ ಮತ್ತು  ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕ  ಲಾಲಾಜಿ ಆರ್ ಮೆಂಡನ್, ಉಡುಪಿ  ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ  ಎ.ರಾಘವೇಂದ್ರ ಕಿಣಿ, ಉಡುಪಿ ನಗರಸಭೆ ಅಧ್ಯಕ್ಷೆ  ಸುಮಿತ್ರಾ  ನಾಯಕ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net