ಜನ್ಮಾಷ್ಟಮಿಗೆ ಸಜ್ಜಾಗಿದೆ ಕೃಷ್ಣನಗರಿ ಉಡುಪಿ

Ashtami
ಶ್ರೀಕೃಷ್ಣ ಲೀಲೋತ್ಸವದ ಮೊಸರು ಕುಡಿಕೆಯ ಮಡಿಕೆಗಳಿಗೆ ಚಿತ್ತಾರ ಬಿಡಿಸುವ ಕಾರ್ಯದಲ್ಲಿ ನಿರತರಾಗಿರುವ ಬ್ರಹ್ಮಾವರದ ಮಂಜುನಾಥ ಆಚಾರ್ಯ ಮತ್ತು ತಂಡ.
Published on

ಉಡುಪಿ: ಕರೊನಾ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಗೆ ಅನುಸಾರ ಈ ಬಾರಿಯೂ ಕೃಷ್ಣ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪೂಜೆಗಳು ಸಂಪ್ರದಾಯಬದ್ಧವಾಗಿ ನಡೆಯಲಿವೆ. ಸೋಮವಾರ ಬೆಳಗ್ಗೆ ಮಹಾಪೂಜೆಗೆ ಮೊದಲು ಶ್ರೀಕೃಷ್ಣ ದೇವರಿಗೆ ಪರ್ಯಾಯ ಪೀಠಾಧೀಶ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಲಕ್ಷ ತುಳಸಿ ಅರ್ಚನೆ ನಡೆಸಲಿದ್ದಾರೆ. ಸೂರ್ಯಶಾಲೆಯಲ್ಲಿ ಸ್ಯಾಕ್ಸೋಫೋನ್, ನಾಗಸ್ವರ ಮತ್ತು ಕೊಳಲು ವಾದನ ಕಛೇರಿ ನಡೆಯಲಿದೆ. ಭಕ್ತರಿಗೆ ರಾತ್ರಿ 12.30ಕ್ಕೆ ಕನಕನ ಕಿಂಡಿ ಎದುರುಗಡೆ ಮತ್ತು ಮಧ್ವ (ವಸಂತ) ಮಂಟಪದಲ್ಲಿ ಅಘರ್Â ಪ್ರದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಂಗಳವಾರ ಮಧ್ಯಾಹ್ನ 3.30ಕ್ಕೆ ವಿಟ್ಲಪಿಂಡಿ ರಥೋತ್ಸವ ನಡೆಯಲಿದ್ದು, ಈ ಬಾರಿಯೂ ಅಷ್ಟಮಠದ ಸ್ವಾಮೀಜಿ, ಮಠದ ಸಿಬ್ಬಂದಿ ಮಾತ್ರ ಪಾಲ್ಗೊಳ್ಳಬಹುದಾಗಿದೆ.

ದರ್ಶನಕ್ಕೆ ಅವಕಾಶ: ಅಷ್ಟಮಿಯಂದು ಸೋಮವಾರ ಬೆಳಗ್ಗೆ 8ರಿಂದ ಸಾಯಂಕಾಲ 6 ಗಂಟೆಯವರೆಗೆ, ವಿಟ್ಲಪಿಂಡಿಯಂದು ಮಂಗಳವಾರ ಬೆಳಗ್ಗೆ 7.30ರಿಂದ ಮಧ್ಯಾಹ್ನ 1 ಗಂಟೆವರೆಗೆ, ನಂತರ ಸಾಯಂಕಾಲ 5 ಗಂಟೆಯಿಂದ ಕೃಷ್ಣ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕೃಷ್ಣನ ಮೃಣ್ಮಯ ಮೂರ್ತಿ: ವಿಟ್ಲಪಿಂಡಿ ಉತ್ಸವದಲ್ಲಿ ರಥದಲ್ಲಿ ಸ್ಥಾಪಿಸಲು ಕೃಷ್ಣನ ಮೃಣ್ಮಯ ಮೂರ್ತಿ ರಚಿಸಲಾಗಿದೆ. ಭಾಗೀರಥಿ ಜಯಂತಿಯಂದು ಕೃಷ್ಣಮಠದ ಉತ್ಸವಮೂರ್ತಿ ಗರ್ಭಗುಡಿ ಸೇರುತ್ತದೆ. ಹೀಗಾಗಿ ಚಾತುರ್ವಸ್ಯ ವ್ರತ ಕಾಲದಲ್ಲಿ ಉತ್ಸವಗಳು ನಡೆಯುವುದಿಲ್ಲ. ಮತ್ತೆ ಉತ್ಥಾನ ದ್ವಾದಶಿಯಂದು ಉತ್ಸವ ಮೂರ್ತಿಯನ್ನು ಹೊರತರಲಾಗುತ್ತದೆ. ರಥೋತ್ಸವಗಳು ಪ್ರಾರಂಭವಾಗುತ್ತವೆ. ಆದರೆ ವಿಟ್ಲಪಿಂಡಿ ಉತ್ಸವದಲ್ಲಿ ರಥೋತ್ಸವ ನಡೆಯುವುದರಿಂದ ಮಣ್ಣಿನ ಮೂರ್ತಿಯನ್ನು ನಿರ್ವಿುಸಿ ಮೆರವಣಿಗೆ ಬಳಿಕ ಮಧ್ವಸರೋವರದಲ್ಲಿ ವಿಸರ್ಜಿಸಲಾಗುತ್ತದೆ. ಶತಮಾನ ದಿಂದಲೂ ಈ ಸಂಪ್ರದಾಯವನ್ನು ಪಾಲಿಸಲಾಗುತ್ತಿದೆ.

ಮೊಸರು ಕುಡಿಕೆಗೆ ಗುರ್ಜಿ: ವಿಟ್ಲಪಿಂಡಿ ಉತ್ಸವದಲ್ಲಿ ಮೊಸರುಕುಡಿಕೆ ಒಡೆಯಲು ರಥಬೀದಿಯಲ್ಲಿ ಗುರ್ಜಿಗಳನ್ನು ನಿಲ್ಲಿಸಲಾಗುತ್ತಿದೆ. ಮರದ ತ್ರಿಕೋನಾಕೃತಿಯ 13 ಗುರ್ಜಿಗಳನ್ನು ನಿರ್ವಿುಸಿ ಮೊಸರು ಕುಡಿಕೆಗೆ ಸಿದ್ಧತೆ ನಡೆಸಲಾಗುತ್ತಿದೆ. ಶ್ರೀಕೃಷ್ಣ ಮಠದಲ್ಲಿ ಗೋವುಗಳನ್ನು ನೋಡಿಕೊಳ್ಳುವ ಗೋವಳರು ಮೊಸರುಕುಡಿಕೆ ಒಡೆಯುತ್ತಾರೆ. ರಥಬೀದಿ ತೆಂಕಪೇಟೆ ಮತ್ತು ಕನಕಗೋಪುರದ ಕೆಳಗೆ ಎರಡು ದಿಕ್ಕುಗಳಲ್ಲಿ ಬೃಹತ್ ಮಂಟಪದ ಗುರ್ಜಿ ನಿರ್ವಿುಸಲಾಗಿದೆ.

40 ಸಾವಿರ ಚಕ್ಕುಲಿ 80 ಸಾವಿರ ಲಾಡು: ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲು 40 ಸಾವಿರ ಚಕ್ಕುಲಿ ಮತ್ತು 80 ಸಾವಿರ ಉಂಡೆ ತಯಾರಿ ಪ್ರಾರಂಭವಾಗಿದೆ. ‘ಅನ್ನಬ್ರಹ್ಮ’ದಲ್ಲಿ 50ಕ್ಕೂ ಹೆಚ್ಚು ಬಾಣಸಿಗರು ಚಕ್ಕುಲಿ, ಅರಳುಂಡೆ, ನೆಲಕಡ್ಲೆ ಲಾಡು, ಕಡ್ಲೆ ಹಾಗೂ ಎಳ್ಳು ಉಂಡೆ, ಶುಂಠಿ, ಗೋಡಂಬಿ ಲಾಡು ತಯಾರಿಸುತ್ತಿದ್ದಾರೆ. 30ರಂದು ಬೆಳಗ್ಗೆ 9.30ಕ್ಕೆ ಭೋಜನಶಾಲೆಯಲ್ಲಿ ಕೃಷ್ಣದೇವರ ಸಮರ್ಪಣೆಗಾಗಿ ತಯಾರಿಸುವ ಭಕ್ಷ್ಯ್ಕಾಗಿ ಲಡ್ಡಿಗೆ ಮುಹೂರ್ತ ನಡೆಯಲಿದೆ. ಪರ್ಯಾಯ ಈಶಪ್ರಿಯ ತೀರ್ಥ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.

ಕೋವಿಡ್-19 ಹಿನ್ನೆಲೆಯಲ್ಲಿ ಸಾಂಪ್ರದಾಯಿಕವಾಗಿ ಉತ್ಸವ, ಪೂಜೆ ನಡೆಸುವಂತೆ ಎಲ್ಲ ದೇವಸ್ಥಾನಗಳಿಗೆ ಸೂಚನೆ ನೀಡಲಾಗಿದೆ. ಕೃಷ್ಣಮಠದಲ್ಲಿ ಮಂಗಳವಾರ ವಿಟ್ಲಪಿಂಡಿ ರಥೋತ್ಸವದಲ್ಲಿ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶವಿಲ್ಲ. ಕಳೆದ ವರ್ಷದಂತೆ ಸಂಪ್ರದಾಯಬದ್ಧವಾಗಿ ಉತ್ಸವ ಇರಲಿದೆ. ಮಂಗಳವಾರ ರಥಬೀದಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವಿದೆ.

| ಜಿ. ಜಗದೀಶ್ ಜಿಲ್ಲಾಧಿಕಾರಿ, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net