

ವಿಜಯವಾಣಿ ಸುದ್ದಿಜಾಲ ಉಡುಪಿ
ವಿಧಾನ ಪರಿಷತ್ ಚುನಾವಣೆಯ ನೈಋತ್ಯ ಪದವೀಧರರ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಉಡುಪಿ ಮಾಜಿ ಶಾಸಕ ಕೆ.ರಘುಪತಿ ಭಟ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂಬ ಮಾಹಿತಿ ಲಭಿಸಿದೆ.
ರಾಜ್ಯ ಬಿಜೆಪಿಯ ಶಿಸ್ತು ಸಮಿತಿಯ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಅವರು, ರಘುಪತಿ ಭಟ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದು, ಈ ಕ್ರಮದ ಅನುಮೋದನೆಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಸಹಿ ಬಾಕಿ ಇದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ನೈಋತ್ಯ ಪದವೀಧರ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುತ್ತೀರಿ. ಇದು ಪಕ್ಷದ ಶಿಸ್ತು ಉಲ್ಲಂನೆ ಮಾಡಿದಂತಾಗಿದೆ. ಹೀಗಾಗಿ ಈ ಪತ್ರ ತಲುಪಿದ ಎರಡು ದಿನದೊಳಗೆ ಸಮಿತಿಗೆ ಸ್ಪಷ್ಟನೆ ನೀಡುವಂತೆ ರಘುಪತಿ ಭಟ್ ಅವರಿಗೆ ಮೇ 22ರಂದು ನೋಟಿಸ್ ರವಾನಿಸಲಾಗಿದೆ.
ಮೂರು ಬಾರಿ ಉಡುಪಿ ಕ್ಷೇತ್ರದ ಶಾಸಕರಾಗಿದ್ದರೂ ಸಹ ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಘುಪತಿ ಭಟ್ ಅವರಿಗೆ ಟಿಕೆಟ್ ನೀಡದೆ, ಮೀನುಗಾರ ಸಮುದಾಯದ ಹಾಗೂ ಪಕ್ಷದ ಕಾರ್ಯಕರ್ತರೂ ಆಗಿದ್ದ ಯಶ್ಪಾಲ್ ಸುವರ್ಣ ಅವರಿಗೆ ಟಿಕೆಟ್ ನೀಡಲಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದರೂ ಸಹ ರಘುಪತಿ ಭಟ್, ಯಶ್ಪಾಲ್ ಅವರ ಪರವಾಗಿ ಪ್ರಚಾರ ನಡೆಸಿ, ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಳಿಕ ಅವರು ನೈಋತ್ಯ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್ ಕೇಳಿದ್ದರು. ಪಕ್ಷದ ರಾಜ್ಯದ ನಾಯಕರೂ ಸಹ ಸಮ್ಮತಿ ನೀಡಿದ್ದರು. ಇದರಿಂದ ಕಳೆದ 10 ತಿಂಗಳಿಂದ ಅವರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಡಾ. ಧನಂಜಯ ಸರ್ಜಿ ಅವರಿಗೆ ಟಿಕೆಟ್ ನೀಡಿದ್ದರಿಂದ ರಘುಪತಿ ಭಟ್ ಪಕ್ಷದ ವಿರುದ್ಧವೇ ಸಿಡಿದೆದ್ದರು.
40 ವರ್ಷದಿಂದ ಕರಾವಳಿ ಭಾಗಕ್ಕೆ ಎಂಎಲ್ಸಿ ಟಿಕೆಟ್ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಪಕ್ಷಾಂತರಿಗೆ ಹಾಗೂ ಬಿಜೆಪಿ ವಿರುದ್ಧ ಶಾಂತಿ ಯಾತ್ರೆ ಮಾಡಿದ್ದ ವ್ಯಕ್ತಿಗೆ ಟಿಕೆಟ್ ನೀಡಿರುವುದನ್ನು ರಘುಪತಿ ಭಟ್ ನೇರವಾಗಿಯೇ ಖಂಡಿಸಿದ್ದರು. ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದರು. ಇದು ಬಂಡಾಯವಲ್ಲ. ಕರಾವಳಿ ಭಾಗದ ಕಡೆಗಣನೆ ಮಾಡಿದ್ದರಿಂದ ಹಾಗೂ ನನಗೆ ಕೆಲಸ ಮಾಡಬೇಕೆಂಬ ಉತ್ಸುಕತೆಯಿಂದ, ಪಕ್ಷದ ಕಾರ್ಯಕರ್ತರಿಗಾಗಿ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದರು. ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಪಕ್ಷದಿಂದ ಉಚ್ಚಾಟಿಸಿದರೂ ಸಹ ಬಿಜೆಪಿಯಲ್ಲಿಯೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲಕುಮಾರ್ ಸತತ ಎರಡು ದಿನ ಭಟ್ ಅವರ ಉಡುಪಿಯ ಮನೆಗೆ ಆಗಮಿಸಿ, ಮನ ಒಲಿಸುವ ಯತ್ನ ಮಾಡಿದ್ದರೂ ಸಹ ಅವರು ಸಮ್ಮತಿಸಿರಲಿಲ್ಲ.
ನನಗೆ ಈವರೆಗೂ ಪಕ್ಷದ ಶಿಸ್ತು ಸಮಿತಿಯಿಂದ ಯಾವುದೇ ನೋಟಿಸ್ ಬಂದಿಲ್ಲ. ಅದು ನನ್ನ ಕೈಸೇರಿದ ಬಳಿಕ ಸಮಿತಿಯ ಮುಂದೆ ಹಾಜರಾಗಿ ನನ್ನ ಬಂಡಾಯ ಸ್ಪರ್ಧೆಯ ವಿಚಾರ, ನನಗಾದ ಅನ್ಯಾಯ ಹಾಗೂ ಪಕ್ಷದಲ್ಲಿ ಈಗ ಆಗುತ್ತಿರುವ ಅವ್ಯವಸ್ಥೆಯ ಕುರಿತು ತಿಳಿಸುತ್ತೇನೆ. ಆದರೆ, ಇಷ್ಟೆಲ್ಲ ಆದ ಬಳಿಕವೂ ನಾನು ಪಕ್ಷೇತರ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ.
ಕೆ.ರಘುಪತಿ ಭಟ್. ಮಾಜಿ ಶಾಸಕ, ಉಡುಪಿ