

ಉಡುಪಿ: ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ ಜಿಲ್ಲಾ ಪಂಚಾಯಿತಿ ಹಾಗೂ ರಾಮನಗರ ಜಿಲ್ಲಾ ತೆಂಗು ಮತ್ತು ಮಾವು ರೈತ ಉತ್ಪಾದಕರ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ರಾಮನಗರ ಜಿಲ್ಲೆ ರೈತರಿಂದ ನೈಸರ್ಗಿಕವಾಗಿ ಮಾಗಿಸಿರುವ 12ಕ್ಕೂ ಅಧಿಕ ಮಾವಿನ ತಳಿಗಳ ಪ್ರದರ್ಶನ ಮಾರಾಟ ಮೇಳ ಮೇ 16 ರಿಂದ 19 ರವರೆಗೆ ಆಯೋಜಿಸಲಾಗಿದ್ದು, ರಾಮನಗರ ಜಿಲ್ಲೆಯ ರುಚಿಕರ ಹಣ್ಣಿನ ರಾಜನ ಸ್ವಾದಕ್ಕೆ ಉಡುಪಿ ಜನತೆ ಫಿದಾ ಆಗಿದ್ದಾರೆ.
ರಾಮನಗರ ಜಿಲ್ಲಾ ತೆಂಗು ಮತ್ತು ಮಾವು ರೈತ ಉತ್ಪಾದಕರ ಸಂಸ್ಥೆ ಸದಸ್ಯರು ರತ್ನಗಿರಿ, ಬಾದಾಮಿ, ರಸಪುರಿ, ಮಲಗೋವಾ, ತೋತಾಪುರಿ, ಸಿಂಧೂರ, ಸಕ್ಕರೆಗುತ್ತಿ, ಬೈಗಂಪಳ್ಳಿ, ಮಂಗಂಪಳ್ಳಿ, ಆಮ್ರಪಳ್ಳಿ, ಮಲ್ಲಿಕಾ, ಸಿರಿ, ಇಮಾಂ ಪಸಂದ್, ಅಲ್ಫೋನ್ಸಾ ಮೊದಲಾದ ತಳಿಗಳ ಮಾವುಗಳನ್ನು ಮಾರಾಟ ಮಾಡುತ್ತಿದ್ದಾರೆ. ಮಾವು ಮೇಳದಲ್ಲಿ ಸಕ್ಕರೆಗುತ್ತಿ ಹಾಗೂ ಇಮಾಂ ಪಸಂದ್ ಮಾವು ವಿಶೇಷ ಆಕರ್ಷಣೆಯಾಗಿದೆ. ಸಕ್ಕರೆಗುತ್ತಿಗೆ ಕೆಜಿಗೆ 300 ರೂ., ಇಮಾಂ ಪಸಂದ್ಗೆ ಕೆಜಿಗೆ 400 ರೂ. ಗರಿಷ್ಠ ದರ, ತೋತಾಪುರಿ ಕೆ.ಜಿಗೆ 50 ರೂ. ಕನಿಷ್ಠ ದರವಿದೆ. 20 ಸ್ಟಾಲ್ಗಳನ್ನು ತೆರೆಯಲಾಗಿದ್ದು, 40 ಟನ್ ಮಾವು ರಾಮನಗರದಿಂದ ತರಲಾಗಿದೆ.
ರಾಮನಗರದಲ್ಲಿ ಸುಮಾರು 33 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಇದರಲ್ಲಿ 20 ಸಾವಿರ ಎಕ್ರೆಯಲ್ಲಿ ಕರ್ನಾಟಕದ ಪ್ರಸಿದ್ಧ ತಳಿ ಬಾದಾಮಿ (ಅಲ್ಫೋನ್ಸ್) ಮಾವುಗಳನ್ನು ಬೆಳೆಯುತ್ತಾರೆ. ರೈತ ಉತ್ಪಾದಕ ಸಂಸ್ಥೆ ರಚನೆಯಾದ ಬಳಿಕ ಕೇಂದ್ರ ಸರ್ಕಾರದ ಅಪೇಡಾ (ಅಗ್ರಿಕಲ್ಚರ್ ಆ್ಯಂಡ್ ಪ್ರೊಸೆಸ್ಡ್ ಫುಡ್ ಪ್ರೊಡಕ್ಟ್ ಎಕ್ಸಫೋರ್ಟ್ ಡೆವಲಪಮೆಂಟ್ ಅಥಾರಿಟಿ) ಮೂಲಕ ವಿದೇಶಕ್ಕೆ ರವಾನಿಸಲಾಗುತ್ತಿದೆ. ಮಾವು ಬೆಳೆಯಲು ಎಕ್ರೆಗೆ ಸುಮಾರು 20 ರಿಂದ 25 ಸಾವಿರದವರೆಗೆ ಖರ್ಚು ಬರುತ್ತದೆ. ಈ ಬಾರಿ ಮಳೆ ಇಲ್ಲದ ಕಾರಣ ಶೇ.50ರಷ್ಟು ಬೆಳೆ ನಷ್ಟವಾಗಿದೆ. ಮಂಡಿಯಲ್ಲೂ ಹೆಚ್ಚಿನ ಬೆಲೆ ಲಭಿಸುತ್ತಿಲ್ಲ. ಮೊದಲ ದಿನ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎನ್ನುತ್ತಾರೆ ಮಾವು ಬೆಳೆಗಾರ ರವಿಕುಮಾರ್.
ಮೇಳ ಉದ್ಘಾಟನೆ ಕಾರ್ಯಕ್ರಮ
ದೊಡ್ಡಣಗುಡ್ಡೆ ತೋಟಗಾರಿಕಾ ಕ್ಷೇತ್ರಲ್ಲಿ ಮಾವು ಮಾರಾಟ ಮೇಳವನ್ನು ಜಿಲ್ಲಾಧಿಕಾರಿ ಡಾ ಕೆ.ವಿದ್ಯಾಕುಮಾರಿ ಉದ್ಘಾಟಿಸಿದರು. ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹೇಮಂತ್ ಕುಮಾರ್ ಹಾಗೂ ಸಹಾಯಕ ನಿರ್ದೇಶಕ ನಿಧೀಶ್ ಮತ್ತಿತರರು ಉಪಸ್ಥಿತರಿದ್ದರು.