

ಉಡುಪಿ: ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಚುನಾವಣೆ ಮತ ಎಣಿಕೆ ಕಾರ್ಯ ಬ್ರಹ್ಮಗಿರಿಯ ಸೇಂಟ್ ಸಿಸಿಲೀಸ್ ಶಿಕ್ಷಣ ಸಂಸ್ಥೆಯ ಒಟ್ಟು 8 ಕೊಠಡಿಗಳಲ್ಲಿ ಅಭ್ಯರ್ಥಿಗಳು ಹಾಗೂ ಅವರ ಏಜೆಂಟರ ಸಮ್ಮುಖ ನಡೆಯುತ್ತಿದ್ದು, ಕ್ಷಣ ಕ್ಷಣದ ಅಪ್‌ಡೇಟ್ ಇಲ್ಲಿದೆ…
ಗುರುರಾಜ್ ಗಂಟಿಹೊಳೆ(ಬಿಜೆಪಿ): 98628
ಗೋಪಾಲ ಪೂಜಾರಿ(ಕಾಂಗ್ರೆಸ್): 82475
ಕಿರಣ್ ಕುಮಾರ್ ಕೊಡ್ಗಿ(ಬಿಜೆಪಿ): 102424
ದಿನೇಶ್ ಹೆಗ್ಡೆ(ಕಾಂಗ್ರೆಸ್): 60868
ಯಶ್‌ಪಾಲ್ ಸುವರ್ಣ(ಬಿಜೆಪಿ): 97079
ಪ್ರಸಾದ್‌ರಾಜ್ ಕಾಂಚನ್(ಕಾಂಗ್ರೆಸ್): 64303
ಗುರ್ಮೆ ಸುರೇಶ್ ಶೆಟ್ಟಿ(ಬಿಜೆಪಿ): 80559
ವಿನಯಕುಮಾರ್ ಸೊರಕೆ(ಕಾಂಗ್ರೆಸ್): 67555
ವಿ.ಸುನೀಲ್ ಕುಮಾರ್(ಬಿಜೆಪಿ): 77028
ಉದಯ್‌ಕುಮಾರ್ ಶೆಟ್ಟಿ(ಕಾಂಗ್ರೆಸ್):72426
ಪ್ರಮೋದ್ ಮುತಾಲಿಕ್(ಪಕ್ಷೇತರ): 4508
ಕಾರ್ಕಳ ವಿಧಾನಸಭಾ ಕ್ಷೇತ್ರ ಚುನಾವಣೆ ಆರಂಭದಿಂದಲೂ ಕರಾವಳಿ ಜಿಲ್ಲೆಗಳ ಜನರು ಸೇರಿದಂದು ರಾಜ್ಯದ ಜನತೆಯ ಗಮನ ಸೆಳೆದಿದ್ದು, ಜನರು ಕುತೂಹಲದಿಂದ ಚುನಾವಣಾ ಫಲಿತಾಂಶ ಎದುರು ನೋಡುತ್ತಿದ್ದರು. ಈ ಬಾರಿ ಕಾರ್ಕಳ ಕ್ಷೇತ್ರ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದ್ದು, ಕೊನೆಗೂ ಬಿಜೆಪಿ ಅಭ್ಯರ್ಥಿ ವಿ.ಸುನೀಲ್ ಕುಮಾರ್ ಗೆಲುವಿನ ನಗೆ ಬೀರಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಶ್‌ಪಾಲ್ ಸುವರ್ಣ ಗೆಲುವು ಸಾಧಿಸಿದ್ದಾರೆ.
ಮತ ಎಣಿಕಾ ಕೇಂದ್ರದಿಂದ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳು ಹೊರ ನಡೆದಿದ್ದಾರೆ. ಬೈಂದೂರು ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಪೂಜಾರಿ, ಕುಂದಾಪುರ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಹೆಗ್ಡೆ ಮತ ಎಣಿಕಾ ಕೇಂದ್ರದಿಂದ ಹೊರ ನಡೆದಿದ್ದಾರೆ. ಮತ ಎಣಿಕೆ ಕೇಂದ್ರದಿಂದ ಮೌನಕ್ಕೆ ಶರಣಾಗಿ ವಾಪಸ್ ತೆರಳಿದ್ದಾರೆ
ಕಾಲಿಗೆ ಮೊಬೈಲ್ ಕಟ್ಟಿಕೊಂಡು ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಬೈಂದೂರು ಬಿಜೆಪಿ ಏಜೆಂಟ್ ಕಾಲಿಗೆ ದ್ವಾರದಲ್ಲೇ ತಡೆದು ಪೊಲೀಸರು ವಾಪಾಸು ಕಳುಹಿಸಿದ್ದಾರೆ. ಬಲಗಾಲಿನಲ್ಲಿ ಮೊಬೈಲ್ ನ್ನು ಕಟ್ಟಿಕೊಂಡು ಕೇಸರಿ ಶಾಲನ್ನು ಧರಿಸಿಕೊಂಡು ಪೊಲೀಸರ ಕಣ್ಣು ತಪ್ಪಿಸಲು ಯತ್ನಿಸಿದ್ದ ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಪರವಾದ ಬಿಜೆಪಿ ಏಜೆಂಟ್ ಸದಾಶಿವ ಕಂಚಿಗೋಡು ಎಂಬಾತನನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚಿಂದ್ರ ಹಾಕೆ ದ್ವಾರದಲ್ಲೇ ತಡೆಹಿಡಿದು ವಾಪಾಸು ಕಳುಹಿಸಿದರು
ಉಡುಪಿ ಜಿಲ್ಲೆಯ 5 ಕ್ಷೇತ್ರಗಳಲ್ಲಿ 8,18,485 ಮತದಾರರು 35 ಮಂದಿ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಿದ್ದು, ಯಾರು ವಿಜಯಮಾಲೆ ಧರಿಸಿ, ವಿಧಾನಸಭೆ ಪ್ರವೇಶಿಸಲಿದ್ದಾರೆ ಎಂಬುದು ಇಂದು ತಿಳಿಯಲಿದೆ.
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 9, ಕುಂದಾಪುರದಲ್ಲಿ 5, ಉಡುಪಿಯಲ್ಲಿ 7, ಕಾಪುವಿನಲ್ಲಿ 5 ಹಾಗೂ ಕಾರ್ಕಳದಲ್ಲಿ 9 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಎಲ್ಲ 5 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಆಮ್ ಆದ್ಮಿ ಪಕ್ಷ 4, ಎಸ್‌ಡಿಪಿಐ-1, ಕೆಆರ್‌ಎಸ್-1, ಉತ್ತಮ ಪ್ರಜಾಕೀಯ ಪಕ್ಷ- 4, ರಾಷ್ಟ್ರೀಯ ಸಮಾಜದಳ 1, ರಿಪಬ್ಲಿಕನ್ ಪಾರ್ಟಿ 1 ಹಾಗೂ 8 ಮಂದಿ ಪಕ್ಷೇತರರು ಕಣದಲ್ಲಿದ್ದಾರೆ.
2018ರ ಚುನಾವಣೆಯಲ್ಲಿ ಬಿಜೆಪಿ ಎಲ್ಲ ಐದು ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಮಾಡಿದ್ದು, ಈ ಬಾರಿ ಬಿಜೆಪಿ ಓಟಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡಿದೆ. ಕಾಂಗ್ರೆಸ್ ಪರವಾಗಿ ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್ ಮೊದಲಾದವರು ಪ್ರಚಾರಕ್ಕೆ ಆಗಮಿಸಿದ್ದಾರೆ. ಬಿಜೆಪಿ ಪರವಾಗಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಷಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಪ್ರಚಾರದಲ್ಲಿ ಭಾಗವಹಿಸಿದ್ದರು.
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಹೊಸಮುಖಗಳಿಗೆ ಮಣೆ ಹಾಕಿದ್ದು, ಬಿಜೆಪಿ ಹಾಲಿ ಶಾಸಕರ ಬದಲಿಗೆ ಉಡುಪಿಯಲ್ಲಿ ಯಶ್‌ಪಾಲ್ ಸುವರ್ಣ, ಕಾಪುವಿನಲ್ಲಿ ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರದಲ್ಲಿ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಕ್ಷೇತ್ರದಲ್ಲಿ ಗುರುರಾಜ್ ಗಂಟಿಹೊಳೆ ಅವರನ್ನು ಕಣಕ್ಕೆ ಇಳಿಸಿದೆ. ಕಾರ್ಕಳದಲ್ಲಿ ಇಂಧನ ಸಚಿವ ಸುನೀಲ್ ಕುಮಾರ್ ನಾಲ್ಕನೇ ಬಾರಿಗೆ ಪುನರಾಯ್ಕೆ ಬಯಸಿದ್ದಾರೆ. ಕಾಂಗ್ರೆಸ್ ಉಡುಪಿಯಲ್ಲಿ ಪ್ರಸಾದ್‌ರಾಜ್ ಕಾಂಚನ್, ಕುಂದಾಪುರದಲ್ಲಿ ದಿನೇಶ್ ಹೆಗ್ಡೆ, ಕಾರ್ಕಳದಲ್ಲಿ ಉದಯ್‌ಕುಮಾರ್ ಶೆಟ್ಟಿ ಅವರಿಗೆ ಟಿಕೆಟ್ ನೀಡಿದೆ. ಕಾಪು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ವಿನಯಕುಮಾರ್ ಸೊರಕೆ ಗೆದ್ದರೆ 2ನೇ ಬಾರಿ ಇಲ್ಲಿ ಶಾಸಕರಾಗಲಿದ್ದಾರೆ. ಬೈಂದೂರಿನಲ್ಲಿ ಗೆದ್ದರೆ ಗೋಪಾಲ ಪೂಜಾರಿ 5ನೇ ಬಾರಿ ಶಾಸಕರಾಗಲಿದ್ದಾರೆ.