ಸೆ.22ರಿಂದ ರಾಜಾಂಗಣದಲ್ಲಿ 'ಉಡುಪಿ ದಸರಾ' ವೈಭವ

11
Published on

ಬೈಕಾಡಿ ಸುಪ್ರಸಾದ ಶೆಟ್ಟಿ ಮಾಹಿತಿ

ನವದುರ್ಗೆ, ಶಾರದಾ ವಿಗ್ರಹಗಳ ಪ್ರತಿಷ್ಠಾಪನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ಹಾಗೂ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಉಡುಪಿ ಆಶ್ರಯದಲ್ಲಿ ಸಮಿತಿಯ ದಶಮ ವರ್ಷದ ಹಿನ್ನೆಲೆಯಲ್ಲಿ ಈ ವರ್ಷದಿಂದ ಉಡುಪಿ ದಸರಾ ಆರಂಭಿಸಲಾಗುತ್ತಿದೆ. ನವದುರ್ಗೆಯರು ಹಾಗೂ ಶಾರದಾ ವಿಗ್ರಹಗಳ ಪ್ರತಿಷ್ಠಾಪನೆಯೊಂದಿಗೆ ಸೆ.22ರಿಂದ ಅ.2ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಬೈಕಾಡಿ ಸುಪ್ರಸಾದ ಶೆಟ್ಟಿ ಮಾಹಿತಿ ನೀಡಿದರು.

ಉಡುಪಿಯ ಗೀತಾಮಂದಿರದಲ್ಲಿ ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಸೆಪ್ಟೆಂಬರ್​ 19ರಂದು ಸಂಜೆ ನಡೆದ ಉಡುಪಿ ದಸರಾ ಹಾಗೂ ಮಧ್ವ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಪ್ರತಿದಿನವೂ ಧಾರ್ಮಿಕ ಸಭೆ

ಸೆ.22ರಂದು ಬೆಳಗ್ಗೆ 9:30ಕ್ಕೆ ಶ್ರೀ ಶಾರದೆ ಹಾಗೂ ನವದುರ್ಗೆಯರ ಮಣ್ಣಿನ ವಿಗ್ರಹ ಪ್ರತಿಷ್ಠೆ ಮಾಡಲಾಗುವುದು. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ನಡೆಯಲಿದೆ. ಸಂಜೆ 5:30ಕ್ಕೆ ಪರ್ಯಾಯ ಸುಗುಣೇಂದ್ರ ಹಾಗೂ ಸುಶ್ರೀಂದ್ರ ಶ್ರೀಗಳು ಉಡುಪಿ ದಸರಾ ಹಾಗೂ ಧಾರ್ಮಿಕ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಪ್ರತಿದಿನ ಸಂಜೆಯೂ ಧಾರ್ಮಿಕ ಸಭೆ, ಖ್ಯಾತ ಕಲಾವಿದರಿಂದ ನಾಟಕ, ಯಕ್ಷಗಾನ, ಭರತನಾಟ್ಯ, ಪ್ರವಚನ ಸೇರಿದಂತೆ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ಶೋಭಾ ಯಾತ್ರೆ, ಜಲಸ್ತಂಭನ

22
ಸೆ.25ರಂದು ಸಂಜೆ 4 ಗಂಟೆಗೆ ಮಾತೃ ಸಂಗಮ-ವೀರರಾಣಿ ಅಬ್ಬಕ್ಕಳ 500ನೇ ಜಯಂತಿ ಹಾಗೂ ಸಂಜೆ 6 ಗಂಟೆಗೆ ದುರ್ಗಾ ನಮಸ್ಕಾರ, ಅ.1ರಂದು ಬೆಳಗ್ಗೆ 9 ಕ್ಕೆ ಸಾಮೂಹಿಕ ಚಂಡಿಕಾ ಯಾಗ ನಡೆಯಲಿದೆ. ಅ.3ರಂದು ಸಂಜೆ 4 ಗಂಟೆಗೆ ನವದುರ್ಗೆಯರು ಹಾಗೂ ಶಾರದಾ ವಿಗ್ರಹಗಳೊಂದಿಗೆ ಉಡುಪಿ ಶ್ರೀಕೃಷ್ಣನ ಸನ್ನಿಧಿಯಿಂದ ಮಲ್ಪೆಯ ವಡಬಾಂಢೇಶ್ವರ ಬಲರಾಮ ದೇಗುಲದವರೆಗೆ ಭವ್ಯ ಶೋಭಾ ಯಾತ್ರೆ ನಡೆಯಲಿದೆ. 35ಕ್ಕೂ ಅಧಿಕ ಟ್ಯಾಬ್ಲೋಗಳು ಪಾಲ್ಗೊಳ್ಳಲಿದ್ದು, ದೇವಿಯರ ನವ ವಿಗ್ರಹ ಹಾಗೂ ಶಾರದಾ ವಿಗ್ರಹಗಳ ಜಲಸ್ತಂಭನ ನಡೆಯಲಿದೆ ಎಂದು ಸುಪ್ರಸಾದ ಶೆಟ್ಟಿ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಗೌರವ ಸಲಹೆಗಾರ ಪ್ರಸನ್ನ ಆಚಾರ್ಯ, ಉಪಾಧ್ಯಕ್ಷೆಯರಾದ ಪದ್ಮಾ ರತ್ನಾಕರ, ವೀಣಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ರಮೇಶ ಭಟ್​, ರಾಧಾಕೃಷ್ಣ ಮೆಂಡನ್​, ತಾರಾ ಯು. ಆಚಾರ್ಯ, ಕೋಶಾಧಿಕಾರಿ ಸತೀಶಕುಮಾರ್​ ಇದ್ದರು.

ಅ.2ರಂದು ಮಧ್ವ ಜಯಂತಿ

ಪರ್ಯಾಯ ಸುಗುಣೇಂದ್ರ ಶ್ರೀ ಮಾತನಾಡಿ, ಈ ಬಾರಿಯ ನವರಾತ್ರಿಯು ಉಡುಪಿ ದಸರಾ ಆಗಿ ಜ್ಞಾನಗಳ ರಾತ್ರಿಯಾಗಿರಲಿದೆ. ಮೈಸೂರು ದಸರಾ, ಉಚ್ಚಿಲ ದಸರಾ ಅಥವಾ ಮಂಗಳೂರಿನ ಕುದ್ರೋಳಿ ದಸರಾದಂತೆಯೇ ಉಡುಪಿ ದಸರಾ ನಡೆಯಲಿದೆ. ಎಲ್ಲ ದೇವರುಗಳ ಆರಾಧನೆ ನಡೆಯುವುದು ನವರಾತ್ರಿಯ ವಿಶೇಷತೆಯಾಗಿದೆ. ಅ.2ರಂದು ವಿಜಯದಶಮಿಯ ದಿನ ಮಧ್ವಾಚಾರ್ಯರ ಜಯಂತಿಯನ್ನೂ ಆಚರಿಸಲಾಗುತ್ತಿದೆ. ನವರಾತ್ರಿಯ ದಿನಗಳಲ್ಲಿ ಶ್ರೀಕೃಷ್ಣನಿಗೆ ಲಕ್ಷ್ಮೀಯ ವಿವಿಧ ಅಲಂಕಾರ ಮಾಡಿ ಪೂಜಿಸಲಾಗುವುದು ಎಂದು ತಿಳಿಸಿದರು.

ಮಧ್ವ ಜಯಂತಿ ನಿಮಿತ್ತ ಅ.2ರಂದು ಸಂಜೆ 4 ಗಂಟೆಗೆ ರಾಜಾಂಗಣದಲ್ಲಿ ಆಧುನಿಕ ಜೀವನದಲ್ಲಿ ಮಧ್ವ ಸಿದ್ಧಾಂತದ ಪ್ರಸ್ತುತತೆ ಕುರಿತು ಉಪನ್ಯಾಸ ನಡೆಯಲಿದೆ. ನಿತ್ಯ ಜೀವನ, ಆಧುನಿಕ ವಿಜ್ಞಾನ ಹಾಗೂ ಆನಂದದಲ್ಲಿ ಮಧ್ವ ಸಿದ್ಧಾಂತದ ಕುರಿತು ವಿದ್ವಾನ್​ ಕೃಷ್ಣರಾಜ ಕುತ್ಪಾಡಿ, ಡಾ. ಪ್ರತೋಷ ಎ.ಪಿ., ಡಾ. ಸುದರ್ಶನ ವಿವರಿಸಲಿದ್ದಾರೆ. | ಮುರಳಿ ತಂತ್ರಿ. ಮಧ್ವ ಜಯಂತಿಯ ಆಯೋಜಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net