

ವಿಜಯವಾಣಿ ಸುದ್ದಿಜಾಲ ಉಡುಪಿ
ಜಾತಿ ಗಣತಿಯ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಮೊದಲು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಾಗೂ ಈ ವಿಚಾರವಾಗಿ ಪ್ರತಿಭಟಿಸಲು ಅವಕಾಶ ಕೊಡುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಶಿಕ್ಷಕರ ಸಂಘವು ಗಣತಿಯ ಪ್ರಥಮ ದಿನವಾದ ಸೋಮವಾರದಂದು ಸಮೀಕ್ಷೆ ಕಾರ್ಯಕ್ಕೆ ತೆರಳಿರಲಿಲ್ಲ.
ಈ ವಿಚಾರವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿದ್ದ ಶಿಕ್ಷಕರು ತಮಗೆ ಪ್ರತಿಭಟಿಸಲು ಅವಕಾಶ ನೀಡುವಂತೆ ಆಗ್ರಹಿಸಿ ಮನವಿ ನೀಡಿದರು. ಈ ವೇಳೆ ಎಸ್ಪಿ ಹರಿರಾಂ ಶಂಕರ್ ಅವರು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರೊಂದಿಗೆ ಮಾತನಾಡಿ ಶಿಕ್ಷಕರ ಬೇಡಿಕೆ ಈಡೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳವಾರ ಒಂದಿಷ್ಟು ಶಿಕ್ಷಕರು ಮಾತ್ರ ಸಮೀಕ್ಷೆ ಕಾರ್ಯದಲ್ಲಿ ಭಾಗವಿಸಿದ್ದು, ಬಹುಸಂಖ್ಯಾತ ಶಿಕ್ಷಕರು ಹೈಕೋರ್ಟ್ ತೀರ್ಪಿನತ್ತ ಚಿತ್ತ ಇಟ್ಟಿದ್ದಾರೆ.
ಸಮೀಕ್ಷೆ ಕಾರ್ಯಕ್ಕೆ ಗಂಭೀರ ಆರೋಗ್ಯ ಸಮಸ್ಯೆ ಇರುವ ಶಿಕ್ಷಕರನ್ನು ಹಾಗೂ 59 ವರ್ಷ ಮೇಲ್ಪಟ್ಟ ಅಶಕ್ತ ಶಿಕ್ಷಕರನ್ನು ಕೈಬಿಡಬೇಕು. ವಿಕಲಚೇತನ ಶಿಕ್ಷಕರು, ಗರ್ಭಿಣಿಯರಿಗೆ ವಿನಾಯಿತಿ ನೀಡಬೇಕು. ಗಣತಿಗೆ ಗುಣಮಟ್ಟದ ಆ್ಯಪ್ ಸಿದ್ಧಪಡಿಸಿ, ಸೂಕ್ತ ತರಬೇತಿ ನೀಡಬೇಕು. ಗ್ರಾಪಂಗಳ ಮೂಲಕ ಪ್ರತಿ ಮನೆಯವರಿಗೆ ಸಮೀಕ್ಷೆಯ ಮಾಹಿತಿ ನೀಡಬೇಕು. ಶಿಕ್ಷಕರಿಗೆ ಅನುಕೂಲ ಆಗುವಂತೆ ಶಾಲೆಯ ಆಸುಪಾಸಿನಲ್ಲೇ ಗಣತಿಗೆ ನಿಯೋಜಿಸಬೇಕು. ಒಂದು ಮನೆಯಲ್ಲಿ 60 ಕಾಲಂ ಭರ್ತಿ ಮಾಡಬೇಕಿದ್ದು 15 ದಿನಗಳಲ್ಲಿ 150 ಮನೆ ಗಣತಿ ಮಾಡಲು ಅಸಾಧ್ಯವಾಗಿದ್ದರಿಂದ 75 ಮನೆಗೆ ಸೀಮಿತಗೊಳಿಸಬೇಕು. ಬಿಎಲ್ಒ ಕಾರ್ಯಕ್ಕೆ ನಿಯೋಜಿಸಿದ 230 ಶಿಕ್ಷಕರನ್ನು ಗಣತಿಯಿಂದ ಕೈ ಬಿಡಬೇಕು. ಕಳೆದ ಏಪ್ರಿಲ್ನಲ್ಲಿ ನಡೆಸಿದ್ದ ಪ.ಜಾತಿ ಒಳ ಮೀಸಲಾತಿ ಗಣತಿಯ ಗೌರವ ಧನ ಇನ್ನೂ ಕೊಟ್ಟಿಲ್ಲ. ಪ್ರಸ್ತುತ ಗಣತಿ ಕಾರ್ಯ ಮುಗಿದ ತಕ್ಷಣ ಗೌರವ ಧನ ನೀಡಬೇಕು.
ಗಣತಿಯಲ್ಲಿ ತೊಡಗುವ ಶಿಕ್ಷಕರ ಬೇಡಿಕೆ ಈಡೇರಿಸಬೇಕೆಂಬ ಮನವಿಗೆ ಜಿಲ್ಲಾಧಿಕಾರಿಗಳು ಸಮ್ಮತಿ ನೀಡಿದ್ದಾರೆ. ಕೊರತೆಯಾಗುವ ಸುಮಾರು 700 ಮಂದಿಯನ್ನು ಅರಣ್ಯ, ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳಿಂದ ನಿಯೋಜಿಸಲು ಡಿಸಿ ಸ್ವರೂಪಾ ಟಿ.ಕೆ. ಒಪ್ಪಿಕೊಂಡಿದ್ದಾರೆ. ಪ್ರಸ್ತುತ ಸಮೀಕ್ಷೆಯಿಂದ ಬೇಕೋ-ಬೇಡವೋ ಎಂಬ ಹೈಕೋರ್ಟ್ನ ತೀರ್ಪಿಗೆ ಕಾದಿದ್ದೇವೆ. | ಅಂಪಾರು ದಿನಕರ ಶೆಟ್ಟಿ.ಉಡುಪಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣತಿದಾರ ಶಿಕ್ಷಕರ ಬೇಡಿಕೆ ಈಡೇರಿಸಲು ಜಿಲ್ಲಾಡಳಿತದಿಂದ ಸಾಧ್ಯವಾಗುವ ಕ್ರಮ ಕೈಗೊಳ್ಳಲಾಗಿದೆ. ಗರ್ಭಿಣಿಯರು, ಅನಾರೋಗ್ಯದವರು, ಅಂಗವಿಕಲರು ಸೇರಿ ಸುಮಾರು 120 ಶಿಕ್ಷಕರನ್ನು ಪಟ್ಟಿಯಿಂದ ಕೈಬಿಟ್ಟಿದ್ದೇವೆ. ಸರ್ಕಾರದ ಸೂಚನೆಯಂತೆ ಸಮೀಕ್ಷೆ ನಡೆಸುವಂತೆ ಶಿಕ್ಷಕರ ಸಂಘದೊಂದಿಗೆ ಮಾತುಕತೆ ನಡೆಸಿ ಅವರ ಮನ ಒಲಿಸಲಾಗಿದೆ. | ಸ್ವರೂಪಾ ಟಿ.ಕೆ. ಉಡುಪಿ ಜಿಲ್ಲಾಧಿಕಾರಿ.