ಪ್ರಕೃತಿ ವಿಕೋಪ ಜೀವಹಾನಿ ತಪ್ಪಿಸಲು ಅಗತ್ಯ ಕ್ರಮ

udp-29-M.T.Reju meeting 5
Published on

ಉಡುಪಿ: ಮಳೆ, ಗಾಳಿ, ಸಿಡಿಲು ಸೇರಿದಂತೆ ಪ್ರಕೃತಿ ವಿಕೋಪಗಳಿಂದ ಜೀವಹಾನಿ ಉಂಟಾಗದಂತೆ ಅಗತ್ಯವಿರುವ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲೆಯಲ್ಲಿ ಕೈಗೊಳ್ಳಬೇಕು. ವಿಕೋಪ ಸಂದರ್ಭದಲ್ಲಿ ಜನಸಾಮಾನ್ಯರ ಸುರಕ್ಷತೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎಂ.ಟಿ ರೇಜು ಸೂಚನೆ ನೀಡಿದರು.

ಬುಧವಾರ ಮಣಿಪಾಲ ರಜತಾದ್ರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಳೆಗಾಲದಲ್ಲಿ ನೀರು ಹರಿಯುವ ಚರಂಡಿ ಹಾಗೂ ತೋಡುಗಳಲ್ಲಿ ಕಸದರಾಶಿಗಳು ತುಂಬಿ ಕೃತಕ ನೆರೆ ಉಂಟಾಗುವ ಸಾಧ್ಯತೆ ಇರುತ್ತದೆ. ಕುಡಿಯುವ ನೀರಿನ ಸಂಪರ್ಕಗಳಲ್ಲಿಯೂ ಸಹ ಮಿಶ್ರಣವಾಗಿ ಆರೋಗ್ಯ ಸಮಸ್ಯೆಗಳು ಉಂಟಾಗಬಹುದಾಗಿದ್ದು, ಇದನ್ನು ತಡೆಯಲು ಜಿಲ್ಲೆಯ ಎಲ್ಲಾ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳಿಯ ಸಂಸ್ಥೆಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಸಾಮಾನ್ಯವಾಗಿ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಚಿಕಿತ್ಸೆಗೆ ಬೇಕಾಗುವ ಔಷಧ, ಚುಚ್ಚುಮದ್ದು ಇತ್ಯಾದಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಇಟ್ಟುಕೊಳ್ಳಬೇಕು. ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗಗಳು ಉತ್ಪತ್ತಿ, ಹರಡುವಿಕೆ, ಅವುಗಳ ಲಕ್ಷಣ, ಚಿಕಿತ್ಸೆ ಸೇರಿದಂತೆ ಮತ್ತಿತರ ಮಾಹಿತಿಗಳನ್ನು ನೀಡಬೇಕು ಎಂದರು. ಮಳೆಗಾಲದಲ್ಲಿ ಜೋರು ಗಾಳಿಗೆ ಮರಗಳು ರಸ್ತೆಯ ಮೇಲೆ ಉರುಳಿ ಬಿದ್ದು, ಅವಘಡಗಳು ಉಂಟಾಗುತ್ತವೆ. ರಸ್ತೆ ಬದಿಯ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಕಾರ್ಯವನ್ನು ಶೀಘ್ರದಲ್ಲಿಯೇ ಕೈಗೊಳ್ಳಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಳೆದ ಏಪ್ರಿಲ್​ ನಿಂದ ಈವರೆಗೆ 876 ವಿದ್ಯುತ್​ ಕಂಬಗಳು ಗಾಳಿ ಮಳೆಗೆ ಉರುಳಿ ಬಿದ್ದಿದ್ದು, ಇಷ್ಟೊಂದು ಪ್ರಮಾಣದಲ್ಲಿ ಹಾನಿ ಉಂಟಾಗಲು ಕಾರಣವನ್ನು ಕಂಡುಕೊಳ್ಳಬೇಕು. ಒಂದೊಮ್ಮೆ ಗುಣಮಟ್ಟದ ಕೊರತೆ ಬಗ್ಗೆಯೂ ಪರಿಶೀಲಿಸಬೇಕು. ಮಳೆ-ಗಾಳಿಯಿಂದಾಗಿ ವಿದ್ಯುತ್​ ಸಂಪರ್ಕ ಸ್ಥಗಿತಗೊಂಡರೆ ತಕ್ಷಣವೇ ಪುನರ್​ ಸಂಪರ್ಕ ಕಲ್ಪಿಸುವ , ನಿರ್ವಹಣೆ ಕಾರ್ಯ ತುರ್ತಾಗಿ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಶಾಲೆಗಳು ಪುನರಾರಂಭಗೊಂಡಿದ್ದು, ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸಬೇಕು. ಶಾಲಾ ಕಟ್ಟಡಗಳನ್ನು ಅಗತ್ಯವಿದ್ದಲ್ಲಿ ತಕ್ಷಣದಲ್ಲಿಯೇ ದುರಸ್ತಿ ಮಾಡಬೇಕು. ಜಿಲ್ಲೆಯಲ್ಲಿ ಸಾಕಷ್ಟು ಮಳೆಯಾಗುತ್ತಿದ್ದು, ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಿಂಡಿ ಆಣೆಕಟ್ಟುಗಳಿಗೆ ಅಳವಡಿಸಿರುವ ಹಲಗೆಗಳನ್ನು ತೆರುವುಗೊಳಿಸಬೇಕು ಎಂದು ಸೂಚನೆ ನೀಡಿದರು.

ವಾರಾಹಿ ಯೋಜನೆ ಪೂರ್ಣಗೊಳಿಸಿ
ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರನ್ನು ಒದಗಿಸುವ ಜಲಜೀವನ್​ ಮಿಷನ್​ ಯೋಜನೆಯ ಅನುಷ್ಠಾನ ಕಾರ್ಯ ಆದಷ್ಟು ಶೀಘ್ರದಲ್ಲಿಯೇ ಆದ್ಯತೆಯ ಮೇಲೆ ಕೈಗೊಂಡು ಪೂರ್ಣಗೊಳಿಸಬೇಕು. ವಾರಾಹಿ ಡ್ಯಾಂನಿಂದ ಉಡುಪಿ ನಗರಕ್ಕೆ ಕುಡಿಯುವ ನೀರು ಒದಗಿಸುವ ಕಾಮಗಾರಿಯನ್ನು ಸಹ ತ್ವರಿತವಾಗಿ ಕೈಗೊಂಡು ಪೂರ್ಣಗೊಳಿಸಲು ಸೂಚನೆ ನೀಡಿದರು.
ಜಿಲ್ಲೆಯಲ್ಲಿರುವ ತೋಟಗಾರಿಕೆ ಇಲಾಖೆಯ ಜಮೀನು ಪಾಳು ಬಿದ್ದಿವೆ. ಅವುಗಳ ನಿರ್ವಹಣೆ ಮಾಡಲು ಸ್ಥಳಿಯ ಮಹಿಳಾ ಸಂಘಗಳ ಅಥವಾ ಸಂಜೀವಿನಿ ಸಂಘಗಳಿಗೆ ನಿರ್ವಹಣೆ ಮಾಡಿ, ಸೂಕ್ತ ಬೆಳೆಗಳನ್ನು ಬೆಳೆಯಲು ಅವಕಾಶ ಮಾಡಿಕೊಡಬೇಕೆಂದು ಸಲಹೆ ನೀಡಿದರು.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಹೊಸದಾಗಿ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿದೆ. ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಅವುಗಳ ಪ್ರಾರಂಭಕ್ಕೆ ಅಗತ್ಯವಿರುವ ಕಟ್ಟಡ ಸೇರಿದಂತೆ ಮತ್ತಿತರ ಸೌಕರ್ಯಗಳನ್ನು ಕಲ್ಪಿಸುವ ಬಗ್ಗೆ ಪೂರ್ವ ತಯಾರಿ ಮಾಡಿಕೊಂಡು ಪ್ರಸಕ್ತ ಸಾಲಿನ ಆರಂಭದಿಂದಲೇ ಚಾಲ್ತಿ ಆಗುವಂತೆ ನಿಗಾವಹಿಸಬೇಕು ಎಂದರು.
ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಮಾತನಾಡಿ, ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ, ಪ್ರಕೃತಿ ವಿಕೋಪ ನಿರ್ವಹಣೆಗೆ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳು, ಮುಂಗಾರು ಹಂಗಾಮಿಗೆ ರಸಗೊಬ್ಬರ ದಾಸ್ತಾನು, ಬಿತ್ತನೆ ಬೀಜ ರೈತರಿಗೆ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್​ ಬಾಯಲ್​, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್​, ಸಹಾಯಕ ಕಮೀಷನರ್​ ರಶ್ಮಿ, ವನ್ಯಜಿವಿ ವಿಭಾಗದ ಡಿಎಫ್​ಓ ಶಿವರಾಮ ಎಂ. ಬಾಬು, ಡಿಎಫ್​ಓ ಗಣಪತಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net