

ಪ್ರಶಾಂತ ಭಾಗ್ವತ ಉಡುಪಿ
ಗೋವುಗಳ್ಳರು ಹಾಗೂ ಮನೆಗಳಲ್ಲಿ ಕನ್ನ ಹಾಕುವವರ ವಿರುದ್ಧ ಸಮರ ಸಾರಿರುವ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಂ ಶಂಕರ್, ಇದೀಗ ಎಲ್ಲ ಬಗೆಯ ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ಹೊಸ ಯೋಜನೆ ಜಾರಿಗೊಳಿಸಿದ್ದಾರೆ.
ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಪೊಲೀಸ್, ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ದೃಷ್ಟಿ ಕಣ್ಗಾವಲು ನಡೆಸಲಿದೆ. ಅಪರಾಧ ಕೃತ್ಯಗಳಿಗೆ ಮೂಗುದಾರ ಹಾಕಲು ಖಾಕಿ ದೃಷ್ಟಿ ಸಜ್ಜುಗೊಳ್ಳುತ್ತಿದೆ.
ಎಷ್ಟೋ ಕಡೆಗಳಲ್ಲಿ ಸಂಭವಿಸಿದ ಮನೆಗಳ್ಳತನ ಅಥವಾ ಇನ್ನಿತರ ಅಪರಾಧ ಪ್ರಕರಣ ಭೇದಿಸುವಲ್ಲಿ ಸಾಕ್ಷ್ಯಗಳ ಕೊರತೆಯಿಂದಾಗಿ ಆರೋಪಿಗಳನ್ನು ಬಂಧಿಸಲು ವಿಳಂಬವಾಗುತ್ತದೆ. ಪ್ರಮುಖವಾಗಿ ಆಯಕಟ್ಟಿನ ಸ್ಥಳಗಳಲ್ಲಿ ತನಿಖೆಗೂ ತೊಡಕಾಗುತ್ತವೆ. ಹೀಗಾಗಿ ಯಾವುದೇ ಭಾಗದಲ್ಲಿ ಅಪರಾಧ ಕೃತ್ಯ ಅಥವಾ ದುರ್ಘಟನೆ ಸಂಭವಿಸಿದಲ್ಲಿ ಅದನ್ನು ತ್ವರಿತವಾಗಿ ಪತ್ತೆ ಹಚ್ಚಲು ಸಹಾಯಕವಾಗುವಂತೆ ಸಿಸಿ ಕ್ಯಾಮರಾ ಅಳವಡಿಸುವುದು ದೃಷ್ಟಿಯ ಎರಡನೇ ಕಾರ್ಯವಾಗಿದೆ.
ಕಳೆದ ಮೂರ್ನಾಲ್ಕು ವರ್ಷದಿಂದ ಜಿಲ್ಲೆಯಲ್ಲಿ ಮನೆಗಳಿಗೆ ಕನ್ನ ಪ್ರಕರಣ ಹೆಚ್ಚುತ್ತಿದ್ದು, ಚಾಲಾಕಿ ಕಳ್ಳರು ತಪ್ಪಿಸಿಕೊಳ್ಳುತ್ತಿದ್ದಾರೆ. ಇದೀಗ ಸಾರ್ವಜನಿಕ ಭದ್ರತೆ ಹಾಗೂ ಕಳ್ಳರ ಕಡಿವಾಣಕ್ಕೆ ದೃಷ್ಟಿ ಕಣ್ಗಾವಲು ನಡೆಸಲಿದೆ.
ಉಡುಪಿ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ದೃಷ್ಟಿ ಎಂಬ ವಿನೂತನ ಕ್ರಮ ಅಳವಡಿಸುತ್ತಿದ್ದೇವೆ. ರಾಜ್ಯ ಗೃಹ ಇಲಾಖೆಯಿಂದ ಮನೆ ಮನೆಗೆ ಪೊಲೀಸ್ ಎಂಬ ಅಭಿಯಾನವೂ ಆರಂಭಗೊಂಡಿದ್ದು ಅದರೊಟ್ಟಿಗೇ ಪೂರಕವಾಗಿ ದೃಷ್ಟಿ ಕಾರ್ಯ ನಿರ್ವಹಿಸಲಿದೆ. ಅಪರಾಧ ಪ್ರಕರಣ ನಿಯಂತ್ರಣಕ್ಕೆ ಪೊಲೀಸ್ ಇಲಾಖೆಯೊಟ್ಟಿಗೆ ಸಾರ್ವಜನಿಕರು ಹಾಗೂ ಖಾಸಗಿಯವರೂ ಕೈ ಜೋಡಿಸಿದ್ದರಿಂದ ದೃಷ್ಟಿ ಎಂದು ಹೆಸರಿಡಲಾಗಿದೆ. | ಹರಿರಾಂ ಶಂಕರ್. ಜಿಲ್ಲಾ ಪೊಲೀಸ್ ವರಿಷ್ಠ