

ವಿಜಯವಾಣಿ ಸುದ್ದಿಜಾಲ ಉಡುಪಿ
ದೇಶದಲ್ಲಿ ಕಳೆದ ಹತ್ತು ವರ್ಷ ವಿರೋಧ ಪಕ್ಷವೇ ಇರಲಿಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 99 ಸ್ಥಾನ ಗೆದ್ದು ವಿರೋಧ ಪಕ್ಷದ ನಾಯಕನಾಗಿರುವ ರಾಹುಲ್ ಗಾಂಧಿ, ತಾನೇ ದೇಶದ ಪ್ರಧಾನಿ ಎಂಬಂತೆ ವರ್ತಿಸುತ್ತಿದ್ದಾರೆ. ಅಲ್ಲದೆ, ದೇಶದ ಹಿಂದುಗಳನ್ನು ಅವಮಾನಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಸಕಲೇಶಪುರ ಶಾಸಕ, ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಸಿಮೆಂಟ್ ಮಂಜು ಆಕ್ರೋಶ ವ್ಯಕ್ತಪಡಿಸಿದರು.
ಉಡುಪಿಯ ಹೋಟೆಲ್ ಶಾರದಾ ಇಂಟರ್ನ್ಯಾಷನಲ್ನಲ್ಲಿ ಜಿಲ್ಲಾ ಬಿಜೆಪಿ ಶನಿವಾರ ಆಯೋಜಿಸಿದ್ದ ವಿಶೇಷ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು.
ಸಂಸತ್ ಅಧಿವೇಶನದಲ್ಲಿ ರಾಹುಲ್ ಯಾವ ರೀತಿ ವರ್ತಿಸಿದ್ದರು ಎನ್ನುವುದನ್ನು ಈ ದೇಶ ಕಂಡಿದೆ. ಹಿಂದುಗಳೆಂದರೆ ಹಿಂಸೆ ಎನ್ನುವ ಮೂಲಕ ಅವರು ಈ ದೇಶದ ಸಂಸ್ಕೃತಿಯನ್ನೇ ನಿಂದಿಸಿದ್ದಾರೆ. ಪ್ರಧಾನಿ ಮೋದಿ ಅವರ 10 ವರ್ಷದ ಆಡಳಿತದಲ್ಲಿ ಭ್ರಷ್ಟಾಚಾರದ ವಾಸನೆಯೂ ಬಾರದ ರೀತಿಯಲ್ಲಿ ಉತ್ತಮ ಆಡಳಿತ ನೀಡಿದ್ದಾರೆ. ಈ ದೇಶವನ್ನು ವಿಶ್ವಗುರುವನ್ನಾಗಿಸುವ, ಹಿಂದುತ್ವವನ್ನು ರಕ್ಷಿಸುವ ಕಾರ್ಯದೊಂದಿಗೆ ಭಾರತದ ಸಮಗ್ರ ಅಭಿವೃದ್ಧಿಯೇ ಕೇಂದ್ರ ಎನ್ಡಿಎ ಸರ್ಕಾರದ ಉದ್ದೇಶವಾಗಿದೆ ಎಂದರು.
ವಿ.ಪ. ಸದಸ್ಯ ಡಾ. ಧನಂಜಯ ಸರ್ಜಿ ಮಾತನಾಡಿ, ಬಡತನ ನಿವಾರಣೆ, ಯೋಜನೆಗಳ ಸಬಲೀಕರಣ, ಮಹಿಳಾ ಸಶಕ್ತೀಕರಣ ಹಾಗೂ ರೈತರ ಪ್ರಗತಿ ಇವು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಸಕ್ತ ಆಡಳಿತದ 4 ಹೊಸ ನೀತಿಯಾಗಿದೆ. ಆದರೆ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಪಿಕ್ ಪಾಕೆಟ್, ಪಾಪರ್ ಸರ್ಕಾರ ಆಡಳಿತ ನಡೆಸುತ್ತಿದೆ. ಗುಡಿಸಿದರೆ ಕಸವಿರಬಾರದು. ಬಡಿಸಿದರೆ ಹಸಿವಿರಬಾರದು. ವೋಟ್ ಹಾಕಿದರೆ ಕಾಂಗ್ರೆಸ್ ಸರ್ಕಾರ ಇರಬಾರದು. ಇದು ಮುಂದಿನ ಎಲ್ಲ ಚುನಾವಣೆಯಲ್ಲೂ ಕಂಡು ಬರಬೇಕು ಎಂದರು.
ಜಿಲ್ಲಾಧ್ಯಕ್ಷ ಕಿಶೋರಕುಮಾರ್ ಕುಂದಾಪುರ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಯಶ್ಪಾಲ್ ಸುವರ್ಣ, ಕಿರಣಕುಮಾರ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಉಪಸ್ಥಿತರಿದ್ದರು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಲಾಲಾಜಿ ಮೆಂಡನ್, ಜಿಲ್ಲಾ ಬಿಜೆಪಿಯ ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಶಂಕರ ಅಂಕದಕಟ್ಟೆ ವಂದೇ ಮಾತರಂ ಗೀತೆ ಹಾಡಿದರು. ಜಿಲ್ಲಾ ಪ್ರ.ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಶ್ಮಾ ಶೆಟ್ಟಿ ನಿರೂಪಿಸಿದರು. ಜಿಲ್ಲಾ ಕಾರ್ಯದರ್ಶಿ ಉದಯ ಎಸ್. ಕೋಟ್ಯಾನ್ ವಂದಿಸಿದರು.
ದಲಿತರ ಉದ್ಧಾರ ತನ್ನಿಂದ ಮಾತ್ರ ಎಂದು ಅಹಂಕಾರದಲ್ಲಿ ಬಡಾಯಿ ಕೊಚ್ಚಿಕೊಳ್ಳುವ ಸಿಎಂ ಸಿದ್ದರಾಮಯ್ಯ, ದಲಿತರಿಗೆ ಈ ಹಿಂದೆ ಬಿಜೆಪಿ ಸರ್ಕಾರ ಮೀಸಲಿಟ್ಟಿದ್ದ 35.144 ಸಾವಿರ ಕೋಟಿ ರೂ.ನಲ್ಲಿ ಈವರೆಗೆ 25 ಸಾವಿರ ಕೋಟಿ ರೂ.ವನ್ನು ಬಿಟ್ಟಿ ಭಾಗ್ಯಗಳಿಗೆ ಬಳಸಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ನುಂಗಿದ್ದಾರೆ. 9 ಬಾರಿ ಹಣಕಾಸು ಸಚಿವರಾಗಿದ್ದ ಹಾಗೂ ಈಗಲೂ ಹಣಕಾಸು ಸಚಿವರೂ ಆಗಿರುವ ಸಿದ್ಧರಾಮಯ್ಯ ಅವರಿಗೆ ಅಷ್ಟೊಂದು ಹಣ ವರ್ಗಾವಣೆ ಆಗಿರುವುದು ತಿಳಿಯುವುದಿಲ್ಲವೇ? ಸರ್ಕಾರ ರಚನೆಯಾಗಿ ವರ್ಷ ಕಳೆದರೂ ರಾಜ್ಯದ ಶಾಸಕರಿಗೆ ಈವರೆಗೂ ಅನುದಾನ ನೀಡಿಲ್ಲ. ಹಾಲು, ಆಲ್ಕೋಹಾಲು, ಪೆಟ್ರೋಲ್, ವಿದ್ಯುತ್ ಬಿಲ್, ಬಾಂಡ್ ಪೇಪರ್ ಶುಲ್ಕ ಹೆಚ್ಚಿಸಿ ಜನರ ಹೊಟ್ಟೆಮೇಲೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ದೇಶದಲ್ಲಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿ ಆಡಳಿತ ನಡೆಸಿದಂತೆಯೇ ಕರ್ನಾಟಕದಲ್ಲಿ ಈಗ ಸಿದ್ಧರಾಮಯ್ಯ ತುರ್ತು ಪರಿಸ್ಥತಿಯಂತಹ ವಾತಾವಾರಣ ನಿರ್ಮಿಸಿದ್ದಾರೆ. ರಾಜ್ಯ ಕಂಡ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಸಿಮೆಂಟ್ ಮಂಜು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಒಂದಾಗಲೆಲ್ಲ ನೆರೆ-ಬರ ಮತ್ತು ಜನರಿಗೆ ದಾರಿದ್ರ್ಯ ತಪ್ಪುವುದಿಲ್ಲ. ಕೇಂದ್ರ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯ, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರದ ಜಪ ನಡೆಯುತ್ತಿದೆ. ಇಂತಹ ಭ್ರಷ್ಟ ಕಾಂಗ್ರೆಸ್ ಸರ್ಕಾರ ಕೊನೆಗಾಣಿಸಲು ಮುಂದಿನ ಎಲ್ಲ ಚುನಾವಣೆಯಲ್ಲೂ ಬಿಜೆಪಿಯ ಗೆಲುವಿಗೆ ನಾವೆಲ್ಲ ಕಂಕಣಬದ್ಧರಾಗಬೇಕು. ಕಿಶೋರಕುಮಾರ್ ಕುಂದಾಪುರ. ಬಿಜೆಪಿ ಜಿಲ್ಲಾಧ್ಯಕ್ಷ, ಉಡುಪಿ
ಕಾರ್ಯಕಾರಿಣಿ ಸಭೆಯ ಸಮಾರೋಪ ಭಾಷಣ ಮಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಅಭಿವೃದ್ಧಿ ಮತ್ತು ರಾಷ್ಟ್ರೀಯತೆಗೆ ಧಕ್ಕೆ ತರುವ ವಿತಂಡವಾದಿಗಳ ನಡುವೆ ದೇಶದಲ್ಲಿ ಆಡಳಿತ ನಡೆಸಬೇಕಾದ ಸವಾಲು ಬಿಜೆಪಿಗೆ ಎದುರಾಗಿದೆ. ರಾಷ್ಟ್ರ ಹೇಗೆ ಅಭಿವೃದ್ಧಿಯೊಂದಿಗೆ ಸುಭದ್ರವಾಗಿರಬೇಕು, ಜನರು ಹೇಗೆ ಸಬಲೀಕರಣಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹಗಲಿರುಳೂ ದೇಶಕ್ಕಾಗಿ ಚಿಂತನೆ ಮಾಡುತ್ತಾರೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಾಲು ಸಾಲು ಭ್ರಷ್ಟಾಚಾರ ಹೊರಬೀಳುತ್ತಿದೆ ಎಂದರು.
ದಿನಪೂರ್ತಿ ಹಣ, ಅಧಿಕಾರದ ಹಪಾಹಪಿತನ, ದುರಹಂಕಾರದ ವರ್ತನೆ ಕಂಡುಬರುತ್ತಿದೆ. ಇದನ್ನೆಲ್ಲ ನೋಡುವಾಗ ಸಿದ್ದರಾಮಯ್ಯ ಸರ್ಕಾರ ಇನ್ನು ಬಹಳ ದಿನ ಉಳಿಯದು ಎನಿಸುತ್ತಿದೆ. ನಾವುಗಳು ಹೋರಾಟ ಮರೆತಿದ್ದೇವೆ ಎಂದು ಇತ್ತೀಚೆಗೆ ಯಡಿಯೂರಪ್ಪ ಅವರೇ ಬೇಸರ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಶಕ್ತಿಯೇ ಹೋರಾಟ. ಹೀಗಾಗಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಯ ಯುವ ಮೋರ್ಚಾ, ರೈತ ಮೋರ್ಚಾ, ಮಹಿಳಾ ಮೋರ್ಚಾ ಹೀಗೆ ವಿವಿಧ ಮೋರ್ಚಾದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ನ್ಯಾಯಕ್ಕಾಗಿ, ಸಮಾಜದ ಹಿತಕ್ಕಾಗಿ ಬೀದಿಗಿಳಿದು ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ಕಿಶೋರಕುಮಾರ್ ಕುಂದಾಪುರ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ವಿಪ ಸದಸ್ಯ ಡಾ. ಧನಂಜಯ ಸರ್ಜಿ, ರೇಶ್ಮಾ ಶೆಟ್ಟಿ ಇದ್ದರು. ರಾವೇಂದ್ರ ಕುಂದರ್ ವಂದಿಸಿದರು.