

ವಿಜಯವಾಣಿ ಸುದ್ದಿಜಾಲ ಉಡುಪಿ
ಕನ್ನಡಿಗರ ವಿವಿಧ ಬೇಡಿಕೆ ಈಡೇರಿಸುವಂತೆ ಹಾಗೂ ಕರ್ನಾಟಕದಲ್ಲಿ ಕನ್ನಡಿಗರಿಗೇ ಉದ್ಯೋಗ ಅವಕಾಶ ನೀಡುವಂತಾಗಲು ಸರ್ಕಾರ ಸಮಗ್ರ ಕಾಯ್ದೆ ರೂಪಿಸಬೇಕು ಎಂದು ಕನ್ನಡ ರಕ್ಷಣಾ ವೇದಿಕೆಯ (ನಾರಾಯಣ ಗೌಡ ಬಣ) ಉಡುಪಿ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ ಆಗ್ರಹಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಬಳಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬೆಂಬಲದೊಂದಿಗೆ ಸೋಮವಾರ ಉಡುಪಿ ಜಿಲ್ಲಾ ಕರವೇ ಹಮ್ಮಿಕೊಂಡಿದ್ದ ಧರಣಿಯಲ್ಲಿ ಮಾತನಾಡಿದರು.
ಉಡುಪಿಯೂ ಸೇರಿದಂತೆ ಇನ್ನಿತರ ಜಿಲ್ಲೆಗಳಿಗೆ ಹೊರ ರಾಜ್ಯಗಳಿಂದ ಉದ್ಯೋಗ ಅರಸಿ ವಲಸೆ ಬರುವವರ ಸಂಖ್ಯೆ ಹೆಚ್ಚಳವಾಗಿದೆ. ಖಾಸಗಿ ವಲಯಗಳಲ್ಲೂ ಸಹ ಕನ್ನಡಿಗರೇತರರಿಗೆ ಹೆಚ್ಚಿನ ಉದ್ಯೋಗಾವಕಾಶ ನೀಡಲಾಗುತ್ತಿದೆ. ಇದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಖಾಸಗಿ ವಲಯದಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಕನ್ನಡಿಗರಿಗೇ ಶೇ. 100 ಮೀಸಲಾತಿ ನೀಡಬೇಕು. ಇತರ ಗ್ರೂಪ್ಗಳಲ್ಲಿ ಶೇ. 80ರಷ್ಟು ಮೀಸಲಾತಿ ನೀಡುವಂತಾಗಬೇಕು ಎಂದರು.
ಧರಣಿ ಬಳಿಕ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್. ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಕರವೇ ಜಿಲ್ಲಾ ಉಪಾಧ್ಯ ಸಂತೋಷ್ ಕುಲಾಲ್, ಕಾರ್ಯದರ್ಶಿಗಳಾದ ಸಿದ್ದಣ್ಣ ಪೂಜಾರಿ, ಗಣೇಶ್ ಎಸ್. ಸಂಘಟನಾ ಕಾರ್ಯದರ್ಶಿಗಳಾದ ಗೋಪಾಲ್ ದೊರೆ, ಆಲ್ಫೋನ್ಸ್, ಸಾಂಸತಿಕ ಕಾರ್ಯದರ್ಶಿ ಕೃಷ್ಣ ಪಿ., ಮಹಿಳಾ ಘಟಕದ ಜಿಲ್ಲಾಧ್ಯೆ ಗೀತಾ ಪಿ., ಉಪಾಧ್ಯೆ ದೇವಕಿ ಬಾರ್ಕೂರು, ಪ್ರ.ಕಾರ್ಯದರ್ಶಿ ಜ್ಯೋತಿ, ಮೋಹಿನಿ, ಚಂದ್ರಕಲಾ, ಆಶಾ, ಶಶಿಕಲಾ ನವೀನ್, ಅನಿಕಾ, ಗೀತಾ, ಯೋಗೇಶ್ ಕೋಟ್ಯಾನ್, ಸುಂದರ್, ಸುನೀತಾ ಇತರರಿದ್ದರು.
ಕನ್ನಡ ನಾಡಿನಲ್ಲಿ ಕೇಂದ್ರ- ರಾಜ್ಯ ಸರ್ಕಾರ ಹಾಗೂ ಖಾಸಗಿ ವಲಯದಲ್ಲಿ ಎಲ್ಲ ಹಂತದ ಉದ್ಯೋಗಗಳನ್ನು ಕನ್ನಡಿಗರಿಗೇ ನೀಡುವಂತೆ ಒತ್ತಾಯಿಸಿ ಕರವೇ ಹಮ್ಮಿಕೊಂಡ ಧರಣಿಗೆ ಜಿಲ್ಲಾ ಕಸಾಪ ಸಹ ಬೆಂಬಲ ಸೂಚಿಸಿದೆ. ಅವರು, ನಾವು ಇಬ್ಬರೂ ಸಹ ಕನ್ನಡಕ್ಕಾಗಿಯೇ ಕೆಲಸ ಮಾಡುವವರು. ಇದು ಕನ್ನಡ ಮತ್ತು ಕನ್ನಡಿಗರ ವಿಷಯವಾಗಿದ್ದರಿಂದ ನಾವೂ ಧರಣಿಯಲ್ಲಿ ಪಾಲ್ಗೊಂಡಿದ್ದೇವೆ. ನೀಲಾವರ ಸುರೇಂದ್ರ ಅಡಿಗ. ಕಸಾಪ ಉಡುಪಿ ಜಿಲ್ಲಾಧ್ಯಕ್ಷ