

ವಿಜಯವಾಣಿ ಸುದ್ದಿಜಾಲ ಉಡುಪಿ
ಕಾರ್ಯಕರ್ತರ ಶುಭ ಹಾರೈಕೆಗಳು ನನ್ನ ಜವಾಬ್ದಾರಿ ಹೆಚ್ಚಿಸಿದೆ. ಕರವೇ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರ ಆದೇಶದಂತೆ ಉಡುಪಿ ಜಿಲ್ಲೆಯಲ್ಲಿ ಸಂಘಟನೆ ಬಲಪಡಿಸಬೇಕಿದೆ. ನಾಡು-ನುಡಿ, ಕನ್ನಡಪರ ಹೋರಾಟಗಳಿಗೆ ನಾವೆಲ್ಲರೂ ಸದಾ ಸಿದ್ಧರಿರೋಣ ಎಂದು ಕರವೇ ಉಡುಪಿ ಜಿಲ್ಲೆಯ ನೂತನ ಅಧ್ಯಕ್ಷ ಅ.ರಾ ಪ್ರಭಾಕರ ಪೂಜಾರಿ ಕರೆ ನೀಡಿದರು.
ಉಡುಪಿ ಅಂಬಲಪಾಡಿಯಲ್ಲಿ ಮೇ 4ರಂದು ಸಂಜೆ ಆಯೋಜಿಸಿದ್ದ ಕರವೇ ನೂತನ ಜಿಲ್ಲಾಧ್ಯಕ್ಷರ ಅಭಿನಂದನಾ ಕಾರ್ಯಕ್ರಮ, ಪದಾಧಿಕಾರಿಗಳ ಆಯ್ಕೆ ಮತ್ತು ಹೊಸ ಕಾರ್ಯಕರ್ತರ ಸೇರ್ಪಡೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ ಅನಿಲಕುಮಾರ್ ಪೂಜಾರಿ, ಗೌರವಾಧ್ಯಕ್ಷರಾಗಿ ಗೋಪಾಲ ಮೆಂಡನ್ ಮಲ್ಪೆ ಆಯ್ಕೆಯಾದರು. ಐವತ್ತಕ್ಕೂ ಹೆಚ್ಚು ಕಾರ್ಯಕರ್ತರು ಕರವೇ ಸೇರ್ಪಡೆಗೊಂಡರು. ನೂತನ ಜಿಲ್ಲಾಧ್ಯಕ್ಷರಿಗೆ ಮಹಿಳಾ ಅಧ್ಯಕ್ಷೆ ಗೀತಾ ಪಾಂಗಾಳ ಶುಭ ಕೋರಿದರು.
ಕರವೇ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.