26ರಂದು ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನ

Vaidehi
Published on

ಉಡುಪಿ: ಹಂಗಾರಕಟ್ಟೆ ಚೇತನ ಪ್ರೌಢಶಾಲೆಯಲ್ಲಿ ಜ.26ರಂದು ಉಡುಪಿ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ತಿಳಿಸಿದ್ದಾರೆ.

ಬೆಳಗ್ಗೆ 8.30ಕ್ಕೆ ಬ್ರಹ್ಮಾವರ ತಾಪಂ ಅಧ್ಯಕ್ಷೆ ಜ್ಯೋತಿ ಉದಯ ಪೂಜಾರಿ ರಾಷ್ಟ್ರ ಧ್ವಜಾರೋಹಣ ಮಾಡಲಿದ್ದಾರೆ. 10ಕ್ಕೆ ಮಹಿಳಾ ಸಾಧಕಿ ಜಾನಕಿ ಹಂದೆ ಮತ್ತು ಜ್ಯೋತಿ ಕುಲಾಲ್ ಆವರ್ಸೆ ಉದ್ಘಾಟಿಸಲಿದ್ದು, ಹಿರಿಯ ಲೇಖಕಿ ವೈದೇಹಿ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ. ನೀಲಾವರ ಸುರೇಂದ್ರ ಅಡಿಗ ಆಶಯ ಭಾಷಣ ಮಾಡುವರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಾಂಸ್ಕೃತಿಕ ಕಾರ್ಯಕ್ರಮ, ಜಿಪಂ ಅಧ್ಯಕ್ಷ ದಿನಕರ ಬಾಬು ಪುಸ್ತಕ ಮಳಿಗೆ ಉದ್ಘಾಟಿಸುವರು. ಶಾಸಕರಾದ ಪ್ರತಾಪಚಂದ್ರ ಶೆಟ್ಟಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ರಘುಪತಿ ಭಟ್, ಜಿಲ್ಲಾಧಿಕಾರಿ ಜಿ. ಜಗದೀಶ್, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಧ್ಯಾಹ್ನ 12ರಿಂದ ಸಾಯಂಕಾಲ 4ರವರೆಗೆ 4 ಗೋಷ್ಠಿಗಳನ್ನು ಆಯೋಜಿಸಲಾಗಿದ್ದು, 3.45ಕ್ಕೆ ಬಹಿರಂಗ ಅಧಿವೇಶನ ನಡೆಯಲಿದೆ, ಸಾಯಂಕಾಲ 4ಕ್ಕೆ ಸಮಾರೋಪ ಸಮಾರಂಭದಲ್ಲಿ ಲೇಖಕಿ ಆರ್.ಪೂರ್ಣಿಮಾ ಸಮಾರೋಪ ಭಾಷಣ ಮಾಡಲಿದ್ದಾರೆ. ಅಮೃತೇಶ್ವರಿ ದೇವಸ್ಥಾನ ಧರ್ಮದರ್ಶಿ ಆನಂದ ಕುಂದರ್ ಸಾಧಕರನ್ನು ಸನ್ಮಾನಿಸಲಿದ್ದಾರೆ. ಸಮ್ಮೇಳನಾಧ್ಯಕ್ಷೆ ವೈದೇಹಿ ಪ್ರತಿಸ್ಪಂದನ ಭಾಷಣ ಮಾಡಿದ್ದಾರೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ, ದ.ಕ. ಕ.ಸಾ.ಪ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಕಾಸರಗೋಡು ಕಸಾಪ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಆರೂರು ತಿಮ್ಮಪ್ಪ ಶೆಟ್ಟಿ, ಸೂರಾಲು ನಾರಾಯಣ ಮಡಿ, ಭುವನಪ್ರಸಾದ್ ಹೆಗ್ಡೆ, ಭರತ್‌ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net