ಕಡಲ್ಕೊರೆತ ತಡೆ ಕಾಮಗಾರಿಗೆ 15 ಕೋಟಿ ರೂ. ಅನುದಾನ

Lakshmi Hebbalakar Meeting 7
Published on

ಉಡುಪಿ: ಕಡಲ್ಕೊರೆತ ತಡೆಗೆ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯಲ್ಲಿ ತುರ್ತು ಕಾಮಗಾರಿ ನಡೆಸಲು ತಲಾ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಸರ್ಕಾರ ತೀಮಾರ್ನಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷಿ ಹೆಬ್ಬಾಳ್ಕರ್​ ತಿಳಿಸಿದ್ದಾರೆ.

ಬುಧವಾರ ಮಣಿಪಾಲ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಡಲ್ಕೊರೆತ ಸಮಸ್ಯೆಯ ಬಗ್ಗೆ ಕರಾವಳಿಯ ಮೂರು ಜಿಲ್ಲೆಯ ಉಸ್ತುವಾರಿ ಸಚಿವರು, ಕೇಂದ್ರ ಸಚಿವರನ್ನು ಭೇಟಿಯಾಗಲಿದ್ದೇವೆ. ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಒಟ್ಟಾಗಿ ಕ್ರಮ ಕೈಗೊಳ್ಳಬೇಕಿದೆ. ರಾಜ್ಯ ಸರ್ಕಾರ ಡಿಪಿಆರ್​ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದರು.

ಪಿಡಬ್ಲೂಡಿ ಇಲಾಖೆಯಿಂದ ಕಾಲುಸಂಕ
ನರೇಗಾದಲ್ಲಿ ಕಾಲುಸಂಕ ನಿಮಾರ್ಣಕ್ಕೆ ಕೇಂದ್ರ ಸರ್ಕಾರ ಅನುದಾನ ಪಾವತಿಸುತ್ತಿಲ್ಲ. ಹೀಗಾಗಿ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಲೋಕೋಪಯೋಗಿ ಇಲಾಖೆ ಮೂಲಕ 400ಕ್ಕೂ ಅಧಿಕ ಕಾಲುಸೇತುವೆ ನಿಮಾರ್ಣಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದರು.

ಗ್ರಾಮೀಣ ಭಾಗದಲ್ಲಿ ಸರ್ಕಾರಿ ಬಸ್​
ಜಿಲ್ಲೆಯಲ್ಲಿ 209 ರೂಟ್​ಗಳಲ್ಲಿ ಸರ್ಕಾರಿ ಬಸ್​ಗಳು ಓಡಾಡುತ್ತಿವೆ. ಈ ಜಿಲ್ಲೆಯಲ್ಲಿ ಖಾಸಗಿ ಬಸ್​ ಗಳ ಹಾವಳಿ ಹೆಚ್ಚಾಗಿದ್ದು, ಶಕ್ತಿ ಯೋಜನೆ ಜಾರಿಯಾದ ಬಳಿಕ ಸರ್ಕಾರಿ ಬಸ್​ ಗಳಿಗೆ ಬೇಡಿಕೆ ಹೆಚ್ಚಿದೆ. ರಾಜ್ಯದಲ್ಲಿ 3,000 ಹೊಸ ಬಸ್​ ಖರೀದಿ ಮಾಡಲಾಗುತ್ತಿದ್ದು, ಶ್ರೀದಲ್ಲಿ ವಿವಿಧ ಡಿಪ್ಪೋಗಳಿಗೆ ಹಂಚಿಕೆ ಮಾಡಲಾಗುವುದು. ಉಡುಪಿ ಜಿಲ್ಲೆಗೂ ಹೊಸ ಬಸ್ಸುಗಳು ಬರಲಿವೆ ಎಂದರು.

ಸೆಲೆಬ್ರಿಟಿ, ಪಂಕ್ಚರ್​ ಹಾಕುವವನಿಗೂ ಒಂದೇ ಕಾನೂನು
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಾನೂನು ಚೌಕಟ್ಟಿನಲ್ಲಿ ಎಲ್ಲಾ ಆಯಾಮದ ತನಿಖೆ ನಡೆಯುತ್ತಿದೆ. ಈ ದೇಶದಲ್ಲಿ ರಾಷ್ಟ್ರಪತಿ, ಸೆಲಬ್ರೆಟಿ, ಪಂಚರ್​ ಹಾಕುವವನಿಗೂ ಒಂದೇ ಕಾನೂನು. ದೊಡ್ಡವರು ಯಾರೇ ಇದ್ದರೂ ಬಿಡುವ ಪ್ರಶ್ನೆಯೇ ಇಲ್ಲ. ಕಾನೂನು ಎಲ್ಲರಿಗೂ ಒಂದೇ. ಕಾನೂನು ಚೌಕಟ್ಟಿನಲ್ಲಿ ಎಷ್ಟೇ ದೊಡ್ಡವರಿದ್ದರೂ ಶಿಕ್ಷೆಯಾಗುತ್ತದೆ. ನೊಂದ ಕುಟುಂಬಕ್ಕೆ ನ್ಯಾಯ ಸಿಕ್ಕೇ ಸಿಗುತ್ತದೆ. ಈ ಸರ್ಕಾರ ಯಾವ ಭಾಗದ, ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ತಪ್ಪಿತಸ್ಥರಿಗೆ ಖಂಡಿತವಾಗಿ ಶಿಕ್ಷೆಯಾಗಿಯಾಗುತ್ತದೆ, ಸಂತ್ರಸ್ತ ಕುಟುಂಬಕ್ಕೆ ಆರ್ಥಿಕವಾಗಿಯೂ ಬೆಂಬಲ ನೀಡಲಾಗುವುದು ಎಂದರು.

ಸೋಲಿಗೆ ಕಾರಣ ಪರಿಶೀಲನೆ
ಬೆಳಗಾವಿ ಲೋಕಸಭಾ ಸ್ಥಾನದಲ್ಲಿ ಕಾಂಗ್ರೆಸ್​ ಸೋಲಿಗೆ ಕಾರಣ ಏನು ಎಂದು ಈಗಲೂ ಹುಡುಕುತ್ತಾ ಇದ್ದೇವೆ, ಸೋತ ನಂತರ ಯಾರ ಮೇಲೂ ಬೊಟ್ಟು ಮಾಡಬಾರದು. ಬೇರೊಬ್ಬರ ಮೇಲೆ ಬೊಟ್ಟು ಮಾಡುವುದು ನಾಯಕತ್ವದ ಲಕ್ಷಣ ಅಲ್ಲ. ನಮ್ಮ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕು. ಈ ಚುನಾವಣೆ ನನ್ನ ಮಗನಿಗೂ ಒಂದು ಪಾಠ. ನಾನು ಕೂಡ ಎರಡು ಬಾರಿ ಸೋತಿದ್ದೆ, ಗಟ್ಟಿಯಾಗಿ ನಿಂತುಕೊಂಡಿದ್ದೇನೆ ಎಂದರು.

ಗೋ ಬ್ಯಾಕ್​ ಗೊತ್ತಿಲ್ಲ
ಜಿಲ್ಲೆಯಲ್ಲಿ ನನ್ನ ವಿರುದ್ಧ ಗೋ ಬ್ಯಾಕ್​ ಅಭಿಯಾನದ ಬಗ್ಗೆ ಗೊತ್ತಿಲ್ಲ. ನನ್ನ ಪಕ್ಷದ ಕಾರ್ಯಕರ್ತರು, ನಾಯಕರು ನನ್ನ ಜೊತೆ ಒಳ್ಳೆಯ ರೀತಿಯಿಂದ ಇದ್ದಾರೆ. ಸಮಯ ಸಿಕ್ಕಾಗ ನನ್ನ ಜವಾಬ್ದಾರಿಯನ್ನು ಚಾಚು ತಪ್ಪದೇ ಮಾಡುತ್ತಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ನನ್ನ ಮಗನೇ ಬೆಳಗಾವಿಯ ಕಾಂಗ್ರೆಸ್​ ಪಕ್ಷದ ಅಭ್ಯರ್ಥಿಯಾಗಿದ್ದ. ಬೆಳಗಾವಿ ಲೋಕಸಭಾ ಕ್ಷೇತ್ರದ ಬಗ್ಗೆ ನನಗೆ ಜವಾಬ್ದಾರಿ ಕೊಟ್ಟಿದ್ದರು. ಕೆ.ಜೆ ಜಾರ್ಜ್​ ಅವರಿಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜವಾಬ್ದಾರಿ ನೀಡಲಾಗಿತ್ತು. ಜಿಲ್ಲೆಯಲ್ಲಿ ಕಾನೂನು & ಸುವ್ಯವಸ್ಥೆ ಸುಭದ್ರವಾಗಿದೆ. ಯಾವುದೇ ಲೋಪವಾಗಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net