

ಉಡುಪಿ: ಅಜ್ಜರಕಾಡಿನಲ್ಲಿರುವ ಉಡುಪಿ ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ 115 ಕೋಟಿ ರೂ. ವೆಚ್ಚದ ಯೋಜನೆ ಪ್ರಸ್ತಾವನೆಗೆ ಗುರುವಾರ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಜಿಲ್ಲಾಸ್ಪತ್ರೆ ಕಟ್ಟಡ 4 ದಶಕಗಳಷ್ಟು ಹಳೆಯದಾಗಿದ್ದು, ಶಿಥಿಲಾವಸ್ಥೆಯಲ್ಲಿದೆ. ಜೋರು ಮಳೆಗೆ ಛಾವಣಿ ಸೋರುತ್ತಿರುತ್ತದೆ. ಹೀಗಾಗಿ 3 ಅಥವಾ 4 ಮಹಡಿಯ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ 6 ತಿಂಗಳ ಹಿಂದೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. 1967ರಲ್ಲಿ ಜಿಲ್ಲಾಸ್ಪತ್ರೆಯ ಹಂಚಿನ ಛಾವಣಿ ಕಟ್ಟಡವನ್ನು ನಿರ್ಮಿಸಲಾಗಿದ್ದು, ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಕಟ್ಟಡ ಉದ್ಘಾಟಿಸಿದ್ದರು. ಸುಮಾರು 10 ಎಕರೆ ಜಾಗವನ್ನು ಆಸ್ಪತ್ರೆಗೆ ಮೀಸಲಿಡಲಾಗಿದೆ. 2001ರಿಂದ ಆಸ್ಪತ್ರೆಯನ್ನು ಹಂತ ಹಂತವಾಗಿ ವಿಸ್ತರಿಸಲಾಗಿದೆ. ನಿತ್ಯ 500ಕ್ಕೂ ಅಧಿಕ ಹೊರರೋಗಿಗಳು ತಪಾಸಣೆಗಾಗಿ ಬರುತ್ತಿದ್ದು, 100ಕ್ಕೂ ಅಧಿಕ ಮಂದಿ ಒಳರೋಗಿಗಳಾಗಿ ದಾಖಲಾಗುತ್ತಿದ್ದಾರೆ.