ಮಳೆಯಿಂದ ಜಿಲ್ಲೆಯಲ್ಲಿ 55 ಕೋಟಿ ರೂ. ನಷ್ಟ

udp-dc
Published on

ಉಡುಪಿ: ಜಿಲ್ಲೆಯಲ್ಲಿ ಜೂನ್​ ಮತ್ತು -ಜುಲೈಯಲ್ಲಿ ವಾಡಿಕೆ ಮಳೆ 2251 ಮಿ.ಮೀ. ಆಗಿದ್ದು, ವಾಸ್ತವಿಕವಾಗಿ 2369 ಮಿ.ಮೀ. ಮಳೆ ದಾಖಲಾಗಿದ್ದು, ಶೇ. 21ರಷ್ಟು ಹೆಚ್ಚುವರಿ ಮಳೆಯಾಗಿದೆ. ಇದರಿಂದ ಅನೇಕ ಕಡೆಗಳಲ್ಲಿ ಪ್ರವಾಹ ಉಂಟಾಗಿದ್ದು, ವಿದ್ಯುತ್​ ಕಂಬ, ರಸ್ತೆ, ಮನೆಗಳಿಗೆ ಹಾನಿ ಸೇರಿದಂತೆ ಒಟ್ಟು 55 ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ ತಿಂಗಳಲ್ಲಿ ಸಿಡಿಲಿನಿಂದಾಗಿ 3 ಜೀವಹಾನಿಯಾಗಿದ್ದು, ಜೂನ್​ನಲ್ಲಿ ಗುಡ್ಡ ಜರಿದು ಆವರಣಗೋಡೆ ಕುಸಿದು ಹಾಗೂ ನೀರಿನಲ್ಲಿ ಕೊಚ್ಚಿ ಹೋಗಿ ಇಬ್ಬರು ಮೃತಪಟ್ಟಿದ್ದಾರೆ. ಜೀವ ಹಾನಿಯಾಗಿರುವ ಪ್ರಕರಣಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿದೆೆ. ಮಳೆ ಹಾನಿಗೆ ಸಂಬಂಧಿಸಿದಂತೆ ಈವರೆಗೆ ತಹಶೀಲ್ದಾರ್​ ಮೂಲಕ ಒಟ್ಟು ರೂ.38.59 ಲಕ್ಷ ಪರಿಹಾರ ಪಾವತಿಸಲಾಗಿದೆ. ಪ್ರಕೃತಿ ವಿಕೋಪ ನಿಧಿಯಲ್ಲಿ 16 ಕೋಟಿ ರೂ. ಲಭ್ಯವಿದೆ ಎಂದರು.

9 ಮನೆ ಸಂಪೂರ್ಣ ಹಾನಿ
ಮುಂಗಾರು ಮಳೆಯಿಂದಾಗಿ 9 ಮನೆಗಳಿಗೆ ಸಂಪೂರ್ಣ ಹಾಗೂ 552 ಮನೆಗಳಿಗೆ ಭಾಗಶ@ ಹಾನಿಯಾಗಿದೆ. 67 ದನದ ಕೊಟ್ಟಿಗೆಗಳು, 270 ಹೆಕ್ಟೇರ್​ ತೋಟಗಾರಿಕೆ ಬೆಳೆ ಮತ್ತು 52.94 ಹೇ. ಕೃಷಿ ಬೆಳೆ ಹಾನಿಯುಂಟಾಗಿದೆ. ಸುಮಾರು 1500 ಹೆ. ಭತ್ತದ ಕೃಷಿ ಭೂಮಿ ಜಲಾವೃತಗೊಂಡಿರುತ್ತದೆ. 712 ಕಿಮೀ ಗ್ರಾಮೀಣ ರಸ್ತೆಗಳು ಹಾಳಾಗಿದ್ದು, 57 ಕಿಮೀ ವಿದ್ಯುತ್​ ಲೈನ್​ಗಳು ತುಂಡಾಗಿವೆ. 3034 ವಿದ್ಯುತ್​ ಕಂಬಗಳು ಮತ್ತು 535 ಮರಗಳು ಧರಾಶಾಹಿಯಾಗಿದ್ದು, 20 ಟ್ರಾನ್ಸ್​ಾರ್ಮರ್​ ಹಾಳಾಗಿವೆ. ಒಟ್ಟು 39 ಶಾಲೆಗಳು, 20 ಅಂಗನವಾಡಿಗಳಿಗೆ ಹಾನಿಯಾಗಿರುವ ಬಗ್ಗೆ ಅಂದಾಜು ವರದಿಯನ್ನು ಸಂಬಂಧ ಪಟ್ಟ ಇಲಾಖೆಗಳಿಂದ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ಕಾಪು ತಾಲೂಕಿನ ಪಡುಬಿದ್ರೆ ನಡಿಪಟ್ಲದಲ್ಲಿ ಸುಮಾರು 100 ಮೀ, ಉಡುಪಿ ತಾಲೂಕಿನ ಹೂಡೆಯಿಂದ ಗುಜ್ಜರಬೆಟ್ಟುವರೆಗೆ 60 ಮೀ. ಕುಂದಾಪುರ ತಾಲೂಕಿನ ಮಣೂರು ಪಡುಕೆರೆಯಲ್ಲಿ 100 ಮೀವರೆಗೆ ಸಮುದ್ರ ಕೊರೆತ ಉಂಟಾಗಿದ್ದು, ತಾತ್ಕಾಲಿಕ ಪರಿಹಾರವಾಗಿ ಕಡಲ್ಕೊರೆತ ಜಾಗದಲ್ಲಿ ಬಂಡೆಕಲ್ಲುಗಳನ್ನು ಹಾಕುವಂತೆ ಬಂದರು ಇಲಾಖೆಗೆ ಸೂಚಿಸಲಾಗಿದೆ ಎಂದರು.

ಗ್ರಾಪಂ ಟಾಸ್ಕ್​ಪೋರ್ಸ್​ ರಚನೆ
ಜಿಲ್ಲೆಯಲ್ಲಿ 63 ಗ್ರಾಪಂಗಳ 4 ಸಾವಿರ ಕುಟುಂಬಗಳು ನದಿಪಾತ್ರದಲ್ಲಿ ವಾಸಿಸುತ್ತಿದ್ದು, ಅಪಾಯದಲ್ಲಿರುವ 86 ಗ್ರಾಮಗಳನ್ನು ಗುರುತಿಸಲಾಗಿದೆ. ಹೀಗಾಗಿ ಎಲ್ಲಾ 155 ಗ್ರಾಪಂಗಳಲ್ಲಿ ಪಿಡಿಒ ಅಧ್ಯಕ್ಷತೆಯ ಗ್ರಾಪಂ ಟಾಸ್ಕ್​ಪೋರ್ಸ್​ ರಚಿಸಲಾಗಿದೆ. ಈವರೆಗೆ ಪ್ರವಾಹ ಪೀಡಿತ ಪ್ರದೇಶಗಳಿಂದ 164 ಮಂದಿಯನ್ನು ರಸಲಾಗಿದ್ದು, 8 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.

ಒತ್ತಿನೆಣೆ ಗುಡ್ಡ ಸರ್ವೆ
ಶಿರೂರು ಒತ್ತಿನೆಣೆಯಲ್ಲಿ ಸ್ಥಳಿಯರು ರಾಷ್ಟ್ರೀಯ ಹೆದ್ದಾರಿಗೆ ಗುಡ್ಡ ಕುಸಿಯುವ ಭೀತಿ ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಯೋಜನಾಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಲಾಗಿತ್ತು. ಹೆದ್ದಾರಿ ಇಲಾಖೆ ಇಂಜಿನಿಯರ್​ಗಳ ತಂಡ ಗುಡ್ಡ ಕುಸಿಯುವ ಸಾಧ್ಯತೆ ಇಲ್ಲ ಎಂಬುದಾಗಿ ತಿಳಿಸಿದ್ದಾರೆ. ಜಿಲ್ಲಾಡಳಿತ ಕಡೆಯಿಂದ ಸೋಮವಾರ ಐಐಟಿ ಪ್ರಾಧ್ಯಾಪಕರ ತಂಡ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಲಿದ್ದಾರೆ. ಅವರ ವರದಿ ಅಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಜಿಪಂ ಸಿಇಒ ಪ್ರತಿಕ್​ ಬಾಯಲ್​, ಎಡಿಸಿ ಮಮತಾದೇವಿ ಜಿಎಸ್​. ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net