

ವಿಜಯವಾಣಿ ಸುದ್ದಿಜಾಲ ಉಡುಪಿ
ದೇಶವನ್ನಾಳುತ್ತಿರುವ ಬಿಜೆಪಿ ಸರ್ಕಾರಕ್ಕೆ ಪ್ರಜಾಪ್ರಭುತ್ವವೆಂದರೆ ಹಿತವಿಲ್ಲ, ಸಂವಿಧಾನ ಕಂಡರೆ ಆಗುವುದಿಲ್ಲ. ತಮಗೆ ವಿರೋಧ ಪಕ್ಷವೇ ಇರಬಾರದೆಂಬ ಮನೋಸ್ಥಿತಿ ಅವರದ್ದು. ಆದರೆ, ಎಲ್ಲಿಯವರೆಗೆ ದೇಶದಲ್ಲಿ ಕಾಂಗ್ರೆಸ್ ಇರುತ್ತದೆಯೋ ಅಲ್ಲಿಯವರೆಗೂ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ದೃಢವಾಗಿಯೇ ಇರುತ್ತದೆ ಎಂದು ಕೆಪಿಸಿಸಿ ಪ್ರ.ಕಾರ್ಯದರ್ಶಿ ಲಾವಣ್ಯಾ ಬಲ್ಲಾಳ್ ಹೇಳಿದರು.
ಕೇಂದ್ರ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದೇಶದ ಹಾಗೂ ಕರ್ನಾಟಕದ ಬಿಜೆಪಿ ಮುಖಂಡರು ಅಸಾಂವಿಧಾನಿಕ ಪದ ಬಳಕೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದಾರೆಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬ್ರಹ್ಮಗಿರಿ ಸರ್ಕಲ್ನಲ್ಲಿ ಭಾನವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕಕುಮಾರ್ ಕೊಡವೂರು ಮಾತನಾಡಿ, ಬಿಜೆಪಿಯವರಿಗೆ ಸತ್ಯ ಸಹಿಸಿಕೊಳ್ಳಲು ಸಾಧ್ಯವೇ ಇಲ್ಲದ್ದರಿಂದ ಅವರು ಸುಳ್ಳಿನ ಮೊರೆ ಹೋಗಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಕೊಲೆ ಬೆದರಿಕೆ ಹಾಕುವ ಜತೆಗೆ ಅವರ ತೇಜೋವಧೆಗೂ ಷಡ್ಯಂತ್ರ ರಚಿಸುವ ಹುನ್ನಾರ ನಡೆಸುತ್ತಿದ್ದಾರೆ. ಈ ಹಿಂದೆಯೇ ಕೇಂದ್ರ ಸರ್ಕಾರ ಅವರಿಗಿದ್ದ ಜೀವಭದ್ರತೆಯನ್ನೂ ಹಿಂಪಡೆಯುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ಕಿಶನ್ ಹೆಗ್ಡೆ ಕೊಳ್ಕೆಬೈಲ್, ಭುಜಂಗ ಶೆಟ್ಟಿ, ಪ್ರಸಾದ್ರಾಜ್ ಕಾಂಚನ್, ರಮೇಶ್ ಕಾಂಚನ್ ಮಾತನಾಡಿದರು.
ಮುಖಂಡರಾದ ದಿನೇಶ್ ಪುತ್ರನ್, ಬಿ.ನರಸಿಂಹಮೂರ್ತಿ, ಭಾಸ್ಕರ್ ರಾವ್ ಕಿದಿಯೂರು, ಅಣ್ಣಯ್ಯ ಸೇರಿಗಾರ್, ಪ್ರಖ್ಯಾತ ಶೆಟ್ಟಿ, ವೆರೋನಿಕಾ ಕರ್ನೆಲಿಯೋ, ಗೀತಾ ವಾಗ್ಳೆ, ದಿನಕರ್ ಹೇರೂರು, ಕೀರ್ತಿ ಶೆಟ್ಟಿ, ಹರೀಶ್ ಕಿಣಿ, ಶಬೀರ್ ಅಹ್ಮದ್, ಶಶಿಧರ್ ಶೆಟ್ಟಿ ಎಲ್ಲೂರು, ಸರ್ಪುದ್ದೀನ್ ಶೇಕ್, ಇಸ್ಮಾಯಿಲ್ ಅತ್ರಾಡಿ, ಜಯ ಕುಮಾರ್, ಡಾ.ಸುನೀತಾ ಶೆಟ್ಟಿ, ಮಮತಾ ಶೆಟ್ಟಿ, ಹರೀಶ್ ಶೆಟ್ಟಿ ಪಾಂಗಾಳ, ಉದ್ಯಾವರ ನಾಗೇಶ್ ಕುಮಾರ್, ಸುರೇಶ್ ಶೆಟ್ಟಿ ಬನ್ನಂಜೆ, ಗಣೇಶ್ ನೆರ್ಗಿˌ ಸಂಧ್ಯಾ ತಿಲಕ್ ರಾಜ್, ದಿವಾಕರ್ ಕುಂದರ್, ಮೀನಾಕ್ಷಿ ಮಾಧವ ಬನ್ನಂಜೆ, ರಮಾನಂದ ಪೈ, ದಿಲೀಪ್ ಹೆಗ್ಡೆ, ಕಿಶೋರ್ ಕುಮಾರ್, ರಾಮದಾಸ್ ನಾಯ್ಕ, ಸತೀಶ್ ಕೊಡವೂರು, ಹಮೀದ್, ಕೇಶವ್ ಕೋಟ್ಯಾನ್ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.