

ವಿಜಯವಾಣಿ ಸುದ್ದಿಜಾಲ ಉಡುಪಿ
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ನಲ್ಲಿ ಕರ್ನಾಟಕಕ್ಕೆ ಒಂದು ರೂಪಾಯಿಯ ಅನುದಾನವೂ ದಕ್ಕಿಲ್ಲ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಕುರ್ಚಿ ಭದ್ರ ಮಾಡಿಕೊಳ್ಳಲು ಮಿತ್ರ ಪಕ್ಷಗಳ ರಾಜ್ಯಕ್ಕೆ ಭರಪೂರ ಅನುದಾನದ ಕೊಡುಗೆ ನೀಡಿದ್ದಾರೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಉಡುಪಿಯ ಬ್ರಹ್ಮಗಿರಿಯಲ್ಲಿ ಚೊಂಬು ಹಿಡಿದು ಶುಕ್ರವಾರ ಪ್ರತಿಭಟನೆ ನಡೆಸಿತು.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಮಾತನಾಡಿ, ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿಸಲಾಗಿದೆ. ದೇಶದ ಸಮಗ್ರ ಅಭಿವೃದ್ಧಿಯ ದ್ಯೋತಕವಾದ ಬಜೆಟ್ ಇದೆಂದು ಅವರು ಹೇಳುತ್ತಿದ್ದಾರೆ. ವಿಶ್ವದ 227 ರಾಷ್ಟ್ರಗಳಲ್ಲಿ ಭಾರತವು ಬಡತನದಲ್ಲಿ 111ನೇ ಸ್ಥಾನದಲ್ಲಿದೆ. ಶೇ.35 ಇದ್ದ ನಿರುದ್ಯೋಗ ಸಮಸ್ಯೆ ಇದೀಗ ಶೇ.83ಕ್ಕೆ ಏರಿದೆ. ಇಂಧನ, ಗ್ಯಾಸ್, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ನಲುಗಿಹೋಗಿದ್ದಾರೆ. ಬಜೆಟ್ ಮೂಲಕ ಜನರಿಗೆ ಆಸರೆಯಾಗುವ ಬದಲು ಚೊಂಬು ಹಿಡಿಸಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ಕುಮಾರ್ ಕೊಡವೂರು ಮಾತನಾಡಿ, ಅತಿಹೆಚ್ಚು ತೆರಿಗೆ ಪಾವತಿಸುವ ಕರ್ನಾಟಕಕ್ಕೆ ಮೋದಿ ಸರ್ಕಾರ ಉಂಡೆನಾಮ ಹಾಕಿದೆ. ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿ ಸಚಿವೆಯಾದವರು. ಆ ಋಣದ ಹಿನ್ನಲೆಯಲ್ಲಾದರೂ ಅವರು ಕರ್ನಾಟಕಕ್ಕೆ ಏನಾದರೂ ವಿಶೇಷ ಕೊಡುಗೆ ನೀಡುವ ಬದಲು ಚೊಂಬು ಹಿಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಉಪಾಧ್ಯಕ್ಷ ಎಂ.ಎ. ಗಫೂರ್ ಮಾತನಾಡಿದರು. ಪ್ರತಿಭಟನೆಯಲ್ಲಿ ಕಿಶನ್ ಹೆಗ್ಡೆ ಕೊಳ್ಕೆಬೈಲು, ವೆರೋನಿಕಾ ಕರ್ನೇಲಿಯೋ, ಗೀತಾ ವಾಗ್ಳೆ, ಜ್ಯೋತಿ ಹೆಬ್ಬಾರ್, ಡಾ.ಸುನೀತಾ ಶೆಟ್ಟಿ, ಮೀನಾ ಮಾಧವ್, ಪ್ರಖ್ಯಾತ್ ಶೆಟ್ಟಿ, ಕುಶಲ್ ಶೆಟ್ಟಿ, ದಿನೇಶ್ ಹೆಗ್ಡೆ ಪುತ್ರನ್, ಹರೀಶ್ ಕಿಣಿ, ಹರಿಪ್ರಸಾದ್ ಶೆಟ್ಟಿ, ವಿಜಯ್ ಹೆಗ್ಡೆ, ಸದಾಶಿವ ಕರ್ಕೇರ, ನೀರೆ ಕೃಷ್ಣ ಶೆಟ್ಟಿ, ರಮೇಶ್ ಕಾಂಚನ್, ಮೋಹನದಾಸ್ ಶೆಟ್ಟಿ, ಭಾಸ್ಕರ್ ರಾವ್ ಕಿದಿಯೂರು, ರೋಶನಿ, ರೇವತಿ ಶೆಟ್ಟಿ, ಸಂಧ್ಯಾ, ಭುಜಂಗ ಶೆಟ್ಟಿ ಸೇರಿದಂತೆ ನೂರಾರು ಕಾಯಕರ್ತರು ಇತರರಿದ್ದರು.
ಕೇಂದ್ರ ಬಜೆಟ್ನಲ್ಲಿ ತಾರತಮ್ಯ ಮಾಡಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸಭೆ ನಡೆಸಿ ಖಂಡಿಸಲಾಯಿತು. ಬಳಿಕ ನೂರಾರು ಕಾರ್ಯಕರ್ತರು ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಬ್ರಹ್ಮಗಿರಿ ಸರ್ಕಲ್ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಎಲ್ಲ ಕಾರ್ಯಕರ್ತರು ಚೊಂಬು ಹಿಡಿದು, ಕೆಲಕಾಲ ಇಲ್ಲಿಯೇ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಿರ್ಲಕ್ಷ್ಯಕ್ಕೊಳಪಡಿಸಿದ ರಾಜ್ಯಕ್ಕೆ ಸಂಬಂಧಿತ ವಿವಿಧ ಯೋಜನೆಗಳನ್ನು ಧ್ವನಿವರ್ಧಕದ ಮೂಲಕ ಪ್ರಸ್ತಾಪಿಸಿ, ಧಿಕ್ಕಾರ ಕೂಗಿದರು.