

ವಿಜಯವಾಣಿ ಸುದ್ದಿಜಾಲ ಉಡುಪಿ
ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎನ್ನುವುದು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಅವರ ಆತ್ಮಹತ್ಯೆಯಿಂದ ಸ್ಪಷ್ಟವಾಗಿದ್ದು, ಸಚಿವ ನಾಗೇಂದ್ರ ಅವರನ್ನು 24 ಗಂಟೆಯೊಳಗೆ ಸಂಪುಟದಿಂದ ವಜಾ ಮಾಡಬೇಕು. ಇಲ್ಲದಿದ್ದಲ್ಲಿ ಬೆಂಗಳೂರಿನ ವಿಧಾನಸೌಧದ ಗಾಂಧಿ ಪ್ರತಿಮೆಯ ಮುಂದೆ ರಾಜ್ಯ ಬಿಜೆಪಿ ಯುವಮೋರ್ಚಾ ತೀವ್ರ ಪ್ರತಿಭಟನೆ ನಡೆಸಲಿದೆ ಎಂದು ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ವಿಖ್ಯಾತ ಶೆಟ್ಟಿ ಸರ್ಕಾರಕ್ಕೆ ಎಚ್ಚರಿಕೆಯ ಗಡುವು ನೀಡಿದರು.
ಉಡುಪಿಯ ಕಡಿಯಾಳಿ ಕ್ರಾಸ್ನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜಿಲ್ಲಾ ಯುವ ಮೋರ್ಚಾ ಶನಿವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ವಾಲ್ಮೀಕಿ ನಿಗಮದಿಂದ ಏಕೆ 187 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ? ಆ ಹಣ ಏನು ಮಾಡಿದಿರಿ ಎಂದು ರಾಜ್ಯದ ಜನತೆಗೆ ಸರ್ಕಾರ ಕೂಡಲೇ ಸ್ಪಷ್ಟಪಡಿಸಬೇಕು. ಕಾರ್ಯಕರ್ತರ ರಕ್ಷಣೆಗೆ ನಿಲ್ಲುವ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್ ಐಆರ್ ದಾಖಲಿಸುವ ಸರ್ಕಾರ, ಅಧಿಕಾರಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡು 3 ದಿನ ಕಳೆದರೂ ಸಹ ಸಚಿವ ನಾಗೇಂದ್ರ ವಿರುದ್ಧ ಕೇಸ್ ದಾಖಲಿಸಿಲ್ಲ ಎಂದು ವಿಖ್ಯಾತ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಬಿಜೆಪಿ ವಕ್ತಾರೆ ಗೀತಾಂಜಲಿ ಸುವರ್ಣ ಮಾತನಾಡಿ, ಕಾಂಗ್ರೆಸ್ನ ಗ್ಯಾರಂಟಿ ಆಮಿಷಕ್ಕೆ ಒಳಗಾಗದ ರಾಜ್ಯದ ಜನರು ಈಗ ಸರ್ಕಾರದ ವರ್ತನೆಯಿಂದ ಪಶ್ಚಾತ್ತಾಪ ಪಡುವಂತಾಗಿದೆ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಯುವ ಮೋರ್ಚಾ ಪ್ರ.ಕಾರ್ಯದರ್ಶಿಗಳಾದ ಶಶಾಂಕ ಶಿವತ್ತಾಯ, ಅಭಿರಾಜ್ ಸುವರ್ಣ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಅರ್ಜುನ ಪ್ರಭು, ನಗರ ಯುವ ಮೋರ್ಚಾ ಅಧ್ಯಕ್ಷ ಶ್ರೀವತ್ಸ, ಕುಂದಾಪುರ ಮಂಡಳ ಅಧ್ಯಕ್ಷ ಕಿರಣ ಪೂಜಾರಿ, ಕಾಪು ಮಂಡಳ ಅಧ್ಯಕ್ಷ ಸೋನು ಪೂಜಾರಿ, ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ವಿಜಯ ಕೊಡವೂರು, ಬೈಂದೂರು ಮಂಡಲ ಅಧ್ಯಕ್ಷ ಗಜೇಂದ್ರ, ಕಾರ್ಕಳ ಮಂಡಳ ಅಧ್ಯಕ್ಷ ಕಿರಣ ಪೂಜಾರಿ ಇತರರಿದ್ದರು.
ಯುವ ಮೋಚಾ ಜಿಲ್ಲಾದ್ಯಕ್ಷ ಪೃಥ್ವಿರಾಜ ಶೆಟ್ಟಿ ಮಾತನಾಡಿ, ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಸಹ ಅಧಿಕಾರಿಗಳಾದ ಡಿವೈಎಸ್ಪಿ ಗಣಪತಿ, ಡಿಸಿ ಡಿ.ಕೆ. ರವಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದು ಮತ್ತೆ ಚಂದ್ರಶೇಖರನ್ ಎಂಬ ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬಕ್ಕೆ ನ್ಯಾಯ ಸಿಗಲೇಬೇಕು ಎಂಬ ಉದ್ದೇಶದಿಂದ ಯುವ ಮೋರ್ಚಾ ಸಾಂಕೇತಿಕ ಪ್ರತಿಭಟನೆ ಮಾಡಿದೆ. ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ಕೂಡಲೇ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು. ಇಲ್ಲದಿದ್ದಲ್ಲಿ ಉಡುಪಿ ಜಿಲ್ಲೆ ಬಂದ್ಗೆ ಕರೆ ನೀಡುತ್ತೇವೆ ಎಂದರು.
ಪ್ರತಿಭಟನಾ ಸಭೆಯ ಬಳಿಕ ದಿಢೀರ್ಆಗಿ ಕಡಿಯಾಳಿ ಕ್ರಾಸ್ನಲ್ಲಿ ರಸ್ತೆ ತಡೆ ಮಾಡಲು ಯತ್ನಿಸಿದ ಯುವಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ತಡೆದರು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಹಾಗೂ ಅನುಮತಿ ಪಡೆಯದ್ದರಿಂದ ರಸ್ತೆ ತಡೆ ಮಾಡಲು ಪೊಲೀಸರು ಅವಕಾಶ ನೀಡಲಿಲ್ಲ. ಆದರೂ ರಸ್ತೆಯಲ್ಲಿ ವಾಹನ ಸಂಚಾರ ತಡೆಯಲು ಯತ್ನಿಸಿದ ಕಾರ್ಯಕರ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಪೊಲೀಸರು ತಡೆಹಿಡಿದರು. ಈ ವೇಳೆ ಕೆಲಕಾಲ ಪೊಲೀಸರು ಹಾಗೂ ಯುವಮೋರ್ಚಾ ಕಾರ್ಯಕರ್ತರ ನಡುವೆ ತೀವ್ರ ನೂಕಾಟ ನಡೆಯಿತು. ಕೊನೆಗೂ ರಸ್ತೆತಡೆ ಮಾಡದಂತೆ ತಡೆ ಹಿಡಿಯುವಲ್ಲಿ ಪೊಲೀಸರು ಸಫಲರಾದರು.