ವೈಫಲ್ಯ ಮರೆಮಾಚಲು ಕೇಂದ್ರ ಸರ್ಕಾರದ ವಿರುದ್ಧ ದೂರು

udp-6-bjp
Published on

ಉಡುಪಿ: ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, 3 ಲಕ್ಷ ಕೋಟಿ ರೂ. ಬಜೆಟ್​ ಮಂಡಿಸಿರುವ ಸಿದ್ದರಾಮಯ್ಯ ಅವರಿಗೆ ರೈತರಿಗೆ 10 ಸಾವಿರ ಕೋಟಿ ರೂ. ನೀಡಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ಬಿಡುಗಡೆ ಮಾಡಿದ 324 ಕೋಟಿ ರೂ. ಪರಿಹಾರ ಧನದಲ್ಲಿ ಶೇ.75ರಷ್ಟು ಕೇಂದ್ರದ್ದು, ಶೇ.25ರಷ್ಟು ರಾಜ್ಯದ ಪಾಲು. ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ರಾಜ್ಯ ಸರ್ಕಾರ ಜನರ ಗಮನ ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದೆ ಎಂದು ವಿಧಾನಪರಿಷತ್​ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಂಗಳವಾರ ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಬಿಜೆಪಿಯ ವಿಶೇಷ ಕಾರ್ಯಕಾರಿಣಿಯಲ್ಲಿ ಅವರು ಮಾತನಾಡಿದರು. ಯುಪಿಎ ಸರ್ಕಾರ ರಾಜ್ಯಕ್ಕೆ 56 ಸಾವಿರ ಕೋಟಿ ರೂ. ನೀಡಿತ್ತು. ಎನ್ಡಿಎ ಸರ್ಕಾರ ಕಳೆದ 10 ವರ್ಷದಲ್ಲಿ 2.5 ಲಕ್ಷ ಕೋಟಿ ರೂ. ನೀಡಿದೆ. ತಲೆಯಲ್ಲಿ ಮೆದುಳಿದ್ದವರಿಗೆ ಕೇಂದ್ರ ಸರ್ಕಾರ ನೀಡಿರುವ ಅಂಕಿಅಂಶ ಅರ್ಥವಾಗುತ್ತದೆ. ಸಿಎಂ ಸಿದ್ದರಾಮಯ್ಯ ಜಾಣಮರೆವು ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಿದರು.

ಕಳೆದ 10 ವರ್ಷದಲ್ಲಿ 25 ಕೋಟಿ ಜನರು ಬಡತನ ರೇಖೆಗಿಂತ ಮೇಲಕ್ಕೆ ಬಂದಿದ್ದಾರೆ. ಶೇ.20 ರಿಂದ 30ರಷ್ಟಿದ್ದ ಶೌಚಾಲಯಗಳ ಸಂಖ್ಯೆ ಶೇ.100ಕ್ಕೆ ತಲುಪಿದೆ. ಆದಿವಾಸಿ ಕುಟುಂಬಗಳೂ ಉಜ್ವಲ ಯೋಜನೆಯಲ್ಲಿ ಅಡುಗೆ ಅನಿಲ ಪಡೆಯುವಂತಾಗಿದೆ. ಉತ್ತರ ಕನ್ನಡ ಜಿಲ್ಲೆ ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ 16,000 ಮನೆಗಳಿಗೆ ದೀನದಯಾಳ್​ ಯೋಜನೆಯಲ್ಲಿ ಉಚಿತ ವಿದ್ಯುತ್​ ನೀಡಲಾಗಿತ್ತು. ಕಿಸಾನ್​ ಸಮ್ಮಾನ್​ ಯೋಜನೆಯಲ್ಲಿ ರಾಜ್ಯದ 54 ಲಕ್ಷ ರೈತರಿಗೆ ಪ್ರತಿ ವರ್ಷ 6 ಸಾವಿರ ರೂ. ನೀಡಲಾಗುತ್ತಿದೆ. ಯಡಿಯೂರಪ್ಪ ಅವರು ರಾಜ್ಯದಿಂದ 4 ಸಾವಿರ ರೂ. ನೀಡುತ್ತಿದ್ದರು. ದುರದೃಷ್ಟವೆಂದರೆ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಪಾಲನ್ನು ಸ್ಥಗಿತಗೊಳಿಸಿದೆ. ರಾಜ್ಯ ಸರ್ಕಾರ ಕೇಂದ್ರವನ್ನು ದೂರುವುದರಲ್ಲೇ ಕಾಲಹರಣ ಮಾಡುತ್ತಿದೆ ಎಂದು ಹೇಳಿದರು.

ಬಿಜೆಪಿ ರಾಜ್ಯ ಸಂಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್​ ಜಿ.ವಿ. ಮಾತನಾಡಿ, ಸಂಟನಾತ್ಮಕ ಚಟುವಟಿಕೆಗೆ ಉಡುಪಿ ಜಿಲ್ಲೆ ಮಾದರಿಯಾಗಿದ್ದು, 2023ರ ಚುನಾವಣೆಯಲ್ಲಿ ರಾಜ್ಯಾದ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲೂ ಜಿಲ್ಲೆಯಲ್ಲಿ 5 ಸ್ಥಾನಗಳಲ್ಲಿ ಪಕ್ಷ ಗೆಲುವು ಸಾಧಿಸಿದೆ. 2014ರ ಚುನಾವಣೆ ಬಳಿಕ ದೇಶದ ನಾಯಕತ್ವದಲ್ಲಿ ಜನರಿಗೆ ಭರವಸೆ ಮೂಡಿದ್ದು, ರಾಜಕಾರಣದ ಬಗ್ಗೆ ಅಂತರಕಾಯ್ದುಕೊಂಡಿದ್ದ ಮಹಿಳೆಯರು, ಯುವಕರು ಹೆಚ್ಚಿನ ಸಂಖೆಯಲ್ಲಿ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಜಿಲ್ಲಾಧ್ಯಕ್ಷರ ನೇಮಕ ಸಂದರ್ಭದಲ್ಲಿ ರಾಜ್ಯ ಟಕಕ್ಕೆ 1ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದವು. ಇವುಗಳಲ್ಲಿ 400ಕ್ಕೂ ಅಧಿಕ ಅರ್ಜಿ ಸಲ್ಲಿಸಿದವರು 40ಕ್ಕಿಂತ ಕಡಿಮೆ ವಯೋಮಾನದವರು ಎಂಬುದು ಗಮನಾರ್ಹ ಸಂಗತಿ ಎಂದರು.

ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಪಕ್ಷದ ಮುಖಂಡರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ ಕಿಶೋರ್​ ಕುಮಾರ್​ ಕುಂದಾಪುರ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಯಶ್ಪಾಲ್​ ಸುವರ್ಣ, ಕಿರಣ್​ ಕುಮಾರ್​ ಕೊಡ್ಗಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಸುರೇಶ್​ ನಾಯಕ್​ ಕುಯಿಲಾಡಿ, ಚುನಾವಣಾ ಸಂಚಾಲಕ ಕುತ್ಯಾರು ನವೀನ್​ ಶೆಟ್ಟಿ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸುವರ್ಣ ಉಪಸ್ಥಿತರಿದ್ದರು. ಪ್ರ.ಕಾ. ದಿನಕರ ಶೆಟ್ಟಿ ಹೆರ್ಗ ಸ್ವಾಗತಿಸಿ, ರಾವೇಂದ್ರ ಕಿಣಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net