ಬಂಧಿಸಿ, ಬೆದರಿಸಿದರೆ ಹೆದರುವ ಪಕ್ಷ ಬಿಜೆಪಿಯಲ್ಲ

UDP-12-2-BJP
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಂಧನ ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಶಾಸಕ ಯಶ್​ಪಾಲ್​ ಸುವರ್ಣ ಮಾತನಾಡಿದರು. ಉದಯಕುಮಾರ್​ ಶೆಟ್ಟಿ, ರತ್ನಾಕರ್​ ಹೆಗ್ಡೆ, ಪ್ರಕಾಶ್​ ಶೆಟ್ಟಿ, ಗಿಂತಾಜಲಿ ಸುವರ್ಣ ಇತರರಿದ್ದರು.
Published on

ಉದಯಕುಮಾರ್​ ಶೆಟ್ಟಿ ಆಕ್ರೋಶ | ಉಡುಪಿ ಜಿಲ್ಲಾ ಬಿಜೆಪಿ ಪ್ರತಿಭಟನೆ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬಂಧನಕ್ಕೆ ಖಂಡನೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಕೇವಲ ಎರಡು ಎಂಪಿ ಸ್ಥಾನ ಗೆದ್ದು ಹೋರಾಟದ ಮೂಲಕವೇ ಕೇಂದ್ರದಲ್ಲಿ ಅಧಿಕಾರ ನಡೆಸಿದ ಹಾಗೂ ನಡೆಸುತ್ತಿರುವ ಕೀರ್ತಿ ಭಾರತೀಯ ಜನತಾ ಪಾರ್ಟಿಗೆ ಇದೆ. ನ್ಯಾಯಕ್ಕಾಗಿ ಹೋರಾಡುವುದೇ ನಮ್ಮ ಪಕ್ಷದ ಬದ್ಧತೆ. ಅಧಿಕಾರವಿದೆಯೆಂದು ನಮ್ಮನ್ನು ಬಂಧಿಸಿದರೆ ಹೆದರುವ ಪಕ್ಷ ಬಿಜೆಪಿಯಲ್ಲ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್​ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಮುಡಾ ಹಗರಣ ಖಂಡಿಸಿ ಮೈಸೂರಿನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿರುವುದನ್ನು ಖಂಡಿಸಿ ಉಡುಪಿಯ ಕಡಿಯಾಳಿ ಜಂಕ್ಷನ್​ ಬಳಿ ಶುಕ್ರವಾರ ಸಂಜೆ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ರಾಜೀನಾಮೆ ನೀಡಿ

ಮೈಸೂರಿನಲ್ಲಿ ಮುಡಾ ನಿವೇಶನ ಹಂಚಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಸಿದ್ದರಾಮಯ್ಯ ಅವರ ಪತ್ನಿಗೆ ಅರಿಶಿನ ಕುಂಕುಮದ ರೂಪದಲ್ಲಿ 4 ನಿವೇಶನ ನೀಡಲಾಗಿದೆ. ಅಹಿಂದ ನಾಯಕ ಎಂದು ಕರೆದುಕೊಳ್ಳುವ ನೀವು ವಾಲ್ಮೀಕಿ ನಿಗಮದ ನೂರಾರು ಕೋಟಿ ರೂಪಾಯಿ ನುಂಗಿದ್ದೀರಿ. ನೀವು ಭ್ರಷ್ಟಾಚಾರ ಮಾಡಿಲ್ಲ ಎಂದಾದರೆ ಮುಡಾ ಹಾಗೂ ವಾಲ್ಮೀಕಿ ನಿಗಮ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಿ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದರು.

ಪ್ರತಿಭಟನೆಯಲ್ಲಿ ದಿನಕರ್​ ಶೆಟ್ಟಿ ಹೆರ್ಗ, ಪೆರ್ಣಂಕಿಲ ಶ್ರೀಶ ನಾಯಕ್​, ಮಟ್ಟಾರು ರತ್ನಾಕರ್​ ಹೆಗ್ಡೆ, ಪ್ರಕಾಶ್​ ಶೆಟ್ಟಿ ಪಾದೆಬೆಟ್ಟು, ಗೀತಾಂಜಲಿ ಸುವರ್ಣ, ಮಾಜಿ ಶಾಸಕ ಲಾಲಾಜಿ ಮೆಂಡನ್, ವಿಖ್ಯಾತ್​ ಶೆಟ್ಟಿ, ನಳಿನಿ ಪ್ರದೀಪ್​, ವಿಜಯ್​ ಕೊಡವೂರು, ಪ್ರಥ್ವಿರಾಜ್​ ಶೆಟ್ಟಿ, ಶಿವಕುಮಾರ್​ ಅಂಬಲಪಾಡಿ, ಶ್ರೀನಿಧಿ ಹೆಗ್ಡೆ, ವೀಣಾ ಶೆಟ್ಟಿ, ಶ್ಯಾಮಲಾ ಕುಂದರ್​, ನೀತಾ ಪ್ರಭು, ಪ್ರತಾಪ್ ಶೆಟ್ಟಿ ಚೇರ್ಕಾಡಿ, ಸೋನು ಪಾಂಗಾಳ, ಅಕ್ಷಿತ್ ಶೆಟ್ಟಿ ಹೆರ್ಗ, ಶ್ರೀವತ್ಸ, ನಿತಿನ್ ಪೈ, ಲಕ್ಷ್ಮೀಶ ಬಂಗೇರ, ಮೋಹನ್ ರಾವ್, ದಾವೂದ್ ಅಬೂಬಕರ್, ಸುಭಾಷಿತ್, ಗಿರೀಶ್ ಎಮ್. ಅಂಚನ್, ಚಿನ್ಮಯಮೂರ್ತಿ ಸಹಿತ ಪಕ್ಷದ ಪ್ರಮುಖರು, ವಿವಿಧ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.

ಕಾಂಗ್ರೆಸ್​ ನಾಯಕರೇ ನೀವೆಲ್ಲಿದ್ದೀರಿ?

ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಮಾತನಾಡಿ, ಕಳೆದ ವರ್ಷ ಮೇ ತಿಂಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಪೊಲೀಸ್​ ಇಲಾಖೆಗೂ ತಲೆನೋವು ಶುರುವಾಗಿದೆ. ಕಳ್ಳರನ್ನು ಹಿಡಿದು ಜೈಲಿಗೆ ಹಾಕಬೇಕಿದ್ದ ಅವರಿಗೆ ಕಳ್ಳರಿಗೆ ರಕ್ಷಣೆ ಕೊಡಬೇಕಾದ ಸಂದಿಗ್ಧ ಪರಿಸ್ಥಿತಿ ಬಂದಿದೆ. ಮುಂದೊಂದು ದಿನ ನಿಮಗೆ ವೇತನವನ್ನೂ ಕೊಡದೆ ಅದನ್ನು ಗ್ಯಾರಂಟಿಗೆ ಹಾಕಬಹುದು. ಈ ಹಿಂದೆ ನೀಟ್​ನಲ್ಲಿ ಅಕ್ರಮ ನಡೆದಿದೆ ಎಂದು ಉಡುಪಿಯ ಕಾಂಗ್ರೆಸ್​ ನಾಯಕರು ಪ್ರತಿಭಟಿಸಿ, ಬಿಜೆಪಿಯ ಸಂಸದ ಹಾಗೂ ಶಾಸಕರು ಎಲ್ಲಿದ್ದಾರೆ ಎಂದು ಕೇಳಿದ್ದರು. ನಿಮ್ಮದೇ ಸರ್ಕಾರದಲ್ಲಿ ಭ್ರಷ್ಟಾಚಾರದ ಸರಮಾಲೆಯೇ ನಡೆಯುತ್ತಿದೆ. 'ಕಾಂಗ್ರೆಸ್​ ನಾಯಕರೇ ಈಗ ನೀವೆಲ್ಲಿದ್ದೀರಿ?' ಎಂದು ಪ್ರಶ್ನಿಸುತ್ತೇನೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರದ ಅಟ್ಟಹಾಸ ಮಿತಿಮೀರತೊಡಗಿದೆ. ಯಾವ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ ಎಂದು ಅವರದೇ ಶಾಸಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು, ಪ್ರತಿಭಟಿಸುವ ಸಾಂವಿಧಾನಿಕ ಹಕ್ಕನ್ನು ದಮನ ಮಾಡುತ್ತಿದ್ದಾರೆ. ತುರ್ತು ಪರಿಸ್ಥಿತಿಯ ಸಂದರ್ಭ ಕಂಡುಬರುತ್ತಿದೆ. ಗುರ್ಮೆ ಸುರೇಶ್​ ಶೆಟ್ಟಿ. ಕಾಪು ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net