

ವಿಜಯವಾಣಿ ಸುದ್ದಿಜಾಲ ಉಡುಪಿ
ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯುಸುತ್ತಾರೆ ಎಂಬ ಕಾಂಗ್ರೆಸ್ಸಿಗರ ಆರೋಪ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಪೋಸ್ಟರ್ ಅಂಟಿಸಿ, ಪ್ರತಿಭಟಿಸಲು ಮುಂದಾದ ಜಿಲ್ಲಾ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಸೋಮವಾರ ತಡೆಹಿಡಿದ ಘಟನೆ ನಡೆಯಿತು.
ಇತ್ತೀಚೆಗೆ ಕಾಂಗ್ರೆಸ್ ವರಿಷ್ಠರೂ ಸೇರಿದಂತೆ ರಾಜ್ಯ ನಾಯಕರು ಸಂವಿಧಾನದ ವಿಚಾರವಾಗಿ ಬಿಜೆಪಿಯ ಹಾಗೂ ಪ್ರಮುಖ ನಾಯಕರ ಹೆಸರು ಕೆಡಿಸುವ ಯತ್ನ ಮಾಡುತ್ತಿದ್ದಾರೆ. ಸಂವಿಧಾನವನ್ನು ನಿತ್ಯ ಉಲ್ಲಂಘಿಸಿದವರು ಕಾಂಗ್ರೆಸ್ನವರೇ ಆಗಿದ್ದಾರೆ ಎಂದು ಪ್ರತ್ಯಾರೋಪಿಸಿ, ನಾಲ್ಕು ಪ್ರಮುಖ ಪ್ರಶ್ನೆಗಳನ್ನು ಹೊಂದಿರುವ ಪೋಸ್ಟರ್ಅನ್ನು ಬಿಜೆಪಿ ಸಿದ್ಧಪಡಿಸಿತ್ತು. ಅದನ್ನು ಕಾಂಗ್ರೆಸ್ ಕಚೇರಿಗೆ ಅಂಟಿಸಲು ತೆರಳುತ್ತಿದ್ದಾಗ ಜಿಲ್ಲಾ ಬಿಜೆಪಿ ಕಚೇರಿ ಮುಭಾಂಗದ ಕಡಿಯಾಳಿ ಕ್ರಾಸ್ ಬಳಿ ಪೊಲೀಸರು ತಡೆ ಹಿಡಿದರು.
ರಾಹುಲ್ ಗಾಂಧಿ, ಮಲ್ಲಿಕಾರ್ಜುನ ರ್ಖಗೆ ಹಾಗೂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿರುವ 4 ಪೋಸ್ಟರ್ಗಳನ್ನು ಹಿಡಿದು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೊರಕುಮಾರ್ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟಿಸಿದರು. ಈ ವೇಳೆ ಡಿವೈಎಸ್ಪಿ ಪ್ರಭು ಡಿ.ಟಿ., ಮಣಿಪಾಲ ಠಾಣೆ ಇನ್ಸ್ಪೆಕ್ಟರ್ ದೇವರಾಜ್, ಪಿಎಸ್ಐ ರಾಘವೇಂದ್ರ ಸಿ., ಸೀಮಾ ಬಿ. ಹಾಗೂ ಇನ್ನಿತರ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ತಡೆಹಿಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರ.ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ರೇಶ್ಮಾ ಯು. ಶೆಟ್ಟಿ, ಸಂಧ್ಯಾ ರಮೇಶ್, ನಳಿನಿ ಪಿ. ರಾವ್, ಶ್ಯಾಮಲಾ ಕುಂದರ್, ಶ್ರೀನಿಧಿ ಹೆಗ್ಡೆ, ಶಿವಕುಮಾರ್ ಅಂಬಲಪಾಡಿ ಹಾಗೂ ಅನೇಕ ಕಾರ್ಯಕರ್ತರು ಇದ್ದರು.
ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆಂಬ ಪೊಲೀಸರ ವಿನಂತಿಯ ಮೇರೆಗೆ ಪೋಸ್ಟರ್ ಅಂಟಿಸುವ ಪ್ರತಿಭಟನೆ ಹಿಂಪಡೆದಿದ್ದೇವೆ. ಡಾ. ಅಂಬೇಡ್ಕರ್ ನಿಧನರಾದಾಗ ಅವರ ಅಂತ್ಯಕ್ರಿಯೆಗೂ ಕಾಂಗ್ರೆಸ್ನವನರು ಜಾಗ ನೀಡಲಿಲ್ಲ. ಅವರನ್ನು ಚುನಾವಣೆಯಲ್ಲಿ ಕಾಂಗ್ರೆಸ್ನವರೇ ಸೋಲಿಸಿದ್ದು ಗುಟ್ಟಾಗಿ ಉಳಿದಿಲ್ಲ. ಸಂವಿಧಾನದ ಆಶಯದಂತೆಯೇ ಬಿಜೆಪಿ ನಡೆದುಕೊಳ್ಳುತ್ತಿದೆ. ಕಾಂಗ್ರೆಸ್ನವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಕಿಶೋರಕುಮಾರ್ ಕುಂದಾಪುರ. ಬಿಜೆಪಿ ಜಿಲ್ಲಾಧ್ಯಕ್ಷ, ಉಡುಪಿ