ಮುಂಗಾರು ಪೂರ್ವ ಮಳೆ, ಉಡುಪಿ ಜಿಲ್ಲಾಡಳಿತ ಸಿದ್ಧತೆ

UDP-13-2-Charandi
ಉಡುಪಿ ಈಶ್ವರ ನಗರದ ಮುಖ್ಯ ರಸ್ತೆಯ 3ನೇ ಕ್ರಾಸ್​ನಲ್ಲಿ ಚರಂಡಿಯ ಹೂಳು ತೆಗೆದು ಸ್ವಚ್ಛ ಮಾಡಿರುವುದು.
Published on

ಚರಂಡಿಗಳ ಸ್ವಚ್ಛತೆ ಕಾರ್ಯ ಆರಂಭ | ಅಗತ್ಯ ಮುನ್ನೆಚ್ಚರಿಕೆ ಕ್ರಮ

ಉಡುಪಿ: ಈ ಬಾರಿಯ ಮುಂಗಾರು ಪೂರ್ವ ಮಳೆಯ ಸಂದರ್ಭದಲ್ಲಿ ಯಾವುದೇ ತೊಡಕಾಗದ ರೀತಿಯಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕೆಯ ಕ್ರಮ ಹಾಗೂ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಗಾಳಿ ಹಾಗೂ ಮಳೆಯಿಂದ ಆಗಬಹುದಾದ ಹಾನಿ ತಡೆಗಟ್ಟಲು ಪೂರಕ ವ್ಯವಸ್ಥೆ ಮಾಡಿಕೊಳ್ಳುವಂತೆ ಸ್ಥಳೀಯಾಡಳಿತಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ಎಲ್ಲ ತಹಸೀಲ್ದಾರ್​, ಚೀಫ್ ಆಫೀಸರ್​, ನಗರಸಭಾ ಆಯಕ್ತರು, ಜಿಪಂ ಸಿಇಒ, ಮೆಸ್ಕಾಂ ಅಧಿಕಾರಿಗಳಿಂದಿಗೆ ಮಳೆಗಾಲಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಭೆ ನಡೆಸಿದ್ದಾರೆ. ಒಣಗಿರುವ ಹಾಗೂ ಅಪಾಯಕಾರಿ ಗಿಡ-ಮರ ತೆರವುಗೊಳಿಸುವಂತೆ, ವಿದ್ಯುತ್​ ಲೈನ್​ಗಳಿಗೆ ತಗುಲಿರುವ ಮರಗಳ ರೆಂಬೆ-ಕೊಂಬೆ ಕಟಾವು ಮಾಡುವಂತೆ ಹಾಗೂ ಹಾಳಾಗಿರುವ ವಿದ್ಯುತ್​ ಕಂಬಗಳನ್ನು ಕೂಡಲೇ ಬದಲಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಡಿಸಿ ಸೂಚಿಸಿದ್ದಾರೆ.

ನಗರಸಭಾ ವ್ಯಾಪ್ತಿಯ ಚರಂಡಿ ಸ್ವಚ್ಛತೆ

ನಗರಸಭಾ ವ್ಯಾಪ್ತಿಯ ಒಳಚರಂಡಿಗಳಲ್ಲಿ ತುಂಬಿರುವ ಹೂಳು, ಒಣಗಿದ ಎಲೆ ಹಾಗೂ ಪ್ಲಾಸ್ಟಿಕ್​ ತ್ಯಾಜ್ಯಗಳ ತೆರವು ಕಾರ್ಯ ನಡೆಯುತ್ತಿದೆ. ಮಳೆ ನೀರು ಹರಿಯುವ ತೋಡುಗಳಲ್ಲಿ ಬೆಳೆದ ಅನಗತ್ಯ ಗಿಡ-ಕಳೆ ತೆಗೆಯುವ ಕೆಲಸ ನಡೆದಿದೆ. ಸ್ಥಳೀಯ ವ್ಯವಸ್ಥೆಯಡಿ ಲಭ್ಯವಿರುವ ಸಿಬ್ಬಂದಿಗಳನ್ನೇ ಬಳಸಿಕೊಂಡು ನಗರದೆಲ್ಲೆಡೆ ಸ್ವಚ್ಛತಾ ಕಾರ್ಯ ನಡೆಸಲಾಗಿದೆ.

ಕಾಲುವೆ ಹೂಳೆತ್ತಲು ಸೂಚನೆ

ಸಂತೆಕಟ್ಟೆಯ ಬಳ ಹೆದ್ದಾರಿಯಲ್ಲಿ ಅಂಡರ್​ಪಾಸ್​ ಕಾಮಗಾರಿ ನಡೆಯುತ್ತಿದ್ದು, ಮಳೆ ನೀರು ಹರಿದುಹೋಗಲು ತೊಡಕಾಗಲಿದೆ. ಹೀಗಾಗಿ ಕೂಡಲೇ ಕಾಮಗಾರಿ ಮುಗಿಸಿ, ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಲು ರಾ.ಹೆ. ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಂದ್ರಾಳಿಯಲ್ಲೂ ಸಹ ರೈಲ್ವೆ ಮೇಲ್ಸೇತುವೆ ಕಾಮಗಾರಿ ಕೂಡಲೇ ಆರಂಭಿಸುವಂತೆ ತಿಳಿಸಲಾಗಿದೆ. ಮಠದ ಬೆಟ್ಟು ಹಾಗೂ ಗರಡಿ ರಾಜ ಕಾಲುವೆಯಲ್ಲಿನ ಹೂಳು ತೆಗೆದು, ಮಳೆಗಾಲದಲ್ಲಿ ಆಗಬಹುದಾದ ತೊಂದರೆಯನ್ನು ಈಗಲೇ ಸರಿಪಡಿಸಿಕೊಳ್ಳುವಂತೆ ನಗರಸಭೆಗೆ ಜಿಲ್ಲಾಡಳಿತ ಸೂಚಿಸಿದೆ.

ಬೀಜ-ಗೊಬ್ಬರ ದಾಸ್ತಾನು

ಜಿಲ್ಲೆಯಲ್ಲಿ ಉಡುಪಿ, ಕುಂದಾಪುರ ಹಾಗೂ ಕಾರ್ಕಳ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯುತ್ತಾರೆ. ಕಳೆದ ವರ್ಷ ಮಳೆ ಕೊರತೆ ಹಿನ್ನೆಲೆಯಲ್ಲಿ ನಿಗದಿತ ಗುರಿಯಷ್ಟು ಭತ್ತ ಬೆಳೆಯಲು ಆಗಿರಲಿಲ್ಲ. ಈ ಬಾರಿ ಉತ್ತಮವಾಗಿ ಮಳೆ ಬರುವ ಸಾಧ್ಯತೆ ಇದ್ದು, ಬೇಡಿಕೆಗೆ ತಕ್ಕಷ್ಟು ಬೀಜ, ರಸಗೊಬ್ಬರ ದಾಸ್ತಾನು ಮಾಡಿಕೊಳ್ಳುವಂತೆ ಕೃಷಿ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮಳೆ ಆರಂಭದಲ್ಲಿ ತೀವ್ರ ಗುಡುಗು-ಸಿಡಿಲು ಇರುವುದರಿಂದ ಇಂತಹ ಸಂದರ್ಭದಲ್ಲಿ ಮೊಬೈಲ್​ ಬಳಸದಂತೆ, ಹೊಲಗಳಲ್ಲಿ ಕೆಲಸ ಮಾಡುವಾಗ ಕಬ್ಬಿಣದ ಆಯುಧ ಬಳಸದಂತೆ ಪತ್ರಿಕೆಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಜನರೆಲ್ಲ ಸ್ವಯಂ ಜಾಗೃತರಾಗಿರುವಂತೆ ಶೀಘ್ರವೇ ಗ್ರಾಮೀಣ ಭಾಗಗಳಲ್ಲಿ ಧ್ವನಿವರ್ಧಕಗಳ ಮೂಲಕ ಎಚ್ಚರಿಕೆ, ಅರಿವು ಮೂಡಿಸಲಾಗುವುದು. ಡಾ. ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net