

ಉಡುಪಿ: ಬ್ರಹ್ಮಾವರ ಉಪ್ಪಿನಕೋಟೆ ಅಪಾರ್ಟ್‌ಮೆಂಟ್‌ನಲ್ಲಿ ಜುಲೈ.12 ರಂದು ಸಂಭವಿಸಿದ ವಿಶಾಲಾ ಗಾಣಿಗ (35) ಕೊಲೆಗೆ ದಂಪತಿ ನಡುವಿನ ವೈಮನಸ್ಸು ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಎಸ್‌ಪಿ ವಿಷ್ಣುವರ್ಧನ್ ತಿಳಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪತ್ನಿ ಕೊಲೆಗೆ ಪತಿ ರಾಮಕೃಷ್ಣ ಗಾಣಿಗ ಕಳೆದ 6 ತಿಂಗಳಿನಿಂದ ಹೊಂಚು ಹಾಕಿದ್ದ. ಅದರಂತೆ ಸುಪಾರಿ ನೀಡಿ ಕೊಲೆ ಮಾಡಿಸಿದ್ದಾನೆ ಎಂದು ತಿಳಿಸಿದರು. ಕೊಲೆಗೆ ಕಾರಣವಾದ ಹೆಚ್ಚಿನ ಮಾಹಿತಿ ಇನ್ನಷ್ಟು ಕಲೆ ಹಾಕಲಾಗುತ್ತಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಎಸ್‌ಪಿ ತಿಳಿಸಿದ್ದಾರೆ. ಬಿಜೂರು ಚಾರುಕೂಡ್ಲು ನಿವಾಸಿ ರಾಮಕೃಷ್ಣ ಗಾಣಿಗ, ಉತ್ತರ ಪ್ರದೇಶ ಮೂಲದ ಸ್ವಾಮಿನಾಥನ್ ಇಬ್ಬರು ಆರೋಪಿಗಳನ್ನು ಈಗಾಗಲೆ ಬಂಧಿಸಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದರು. ಇನ್ನೊರ್ವ ಆರೋಪಿ ತಲೆಮರಿಸಿಕೊಂಡಿದ್ದು, ಕಾರ್ಯಚರಣೆ ಮುಂದುವರಿದಿದೆ ಎಂದರು. ಸಣ್ಣ ಸುಳಿವು, ಯಾವುದೇ ಸಾಕ್ಷೃವಿಲ್ಲದೆ ಪ್ರಕರಣ ತನಿಖೆ ಸವಾಲಿನ ವಿಚಾರವಾಗಿತ್ತು. ತನಿಖೆಗೆ ರಚಿಸಿದ್ದ 5 ವಿಶೇಷ ತಂಡಗಳ ಶ್ರಮದಿಂದ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಲು ಸಾಧ್ಯವಾಯಿತು ಎಂದರು. ತನಿಖಾ ತಂಡದ ಈ ಸಾಧನೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ 50 ಸಾವಿರ ಬಹುಮಾನ ಘೋಷಿಸಿದ್ದಾರೆ ಎಂದು ಎಸ್‌ಪಿ ತಿಳಿಸಿದರು.