ಲವ್​ಲೆಟರ್​ ವ್ಯವಹಾರ ಬೇಡ: ಅಧಿಕಾರಿಗಳ ನಿಷ್ಕಾಳಜಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಗರಂ

UDP-24-3-KDP
Published on

ಉಡುಪಿ: ಸರಿಯಾಗಿ ಕೆಲ್ಸ ಮಾಡೋದ್​ ಬಿಟ್ಟು ಲವ್​ ಲೆಟರ್​ ಬರೆದಂತೆ ಪತ್ರ ವ್ಯವಹಾರ ಮಾಡ್ಕೊಂಡು ಕೂತ್ಕೊಂಡ್ರೆ ಹೇಗೆ? ಇದನ್ನೆಲ್ಲಾ ನೋಡಿ ನಾನ್​ ಸುಮ್ನೆ ಕೂತ್ಕೊಳ್ಳಲ್ಲ. ಕೆಲ್ಸ ಮಾಡ್ದೇ ಇದ್ರೆ ಸಹಿಸ್ಕೊಳ್ಳಲ್ಲ…

ಉಡುಪಿ ಜಿಲ್ಲಾ ಪಂಚಾಯಿತಿ ಕಾರ್ಯಾಲಯದ ವಿ.ಎಸ್​. ಆಚಾರ್ಯ ಸಭಾಂಗಣದಲ್ಲಿ, ಸರ್ಕಾರ ರಚನೆಯಾದ ಬಳಿಕ ಶುಕ್ರವಾರ ನಡೆದ ಪ್ರಥಮ ಕೆಡಿಪಿ ಸಭೆಯಲ್ಲಿ ಪ್ರಮುಖ ಹಿರಿಯ ಅಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ತರಾಟೆಗೆ ತೆಗೆದುಕೊಂಡ ಪರಿ ಇದು.

ಸಭೆಯ ಆರಂಭದಲ್ಲಿ ಇಲಾಖಾವಾರು ಪ್ರಗತಿ ಪರಿಶೀಲಿಸಿದ ಅವರು, ಜಿಲ್ಲೆಯ ಹಿರಿಯ ಅಧಿಕಾರಿಗಳ ನಿಷ್ಕಾಳಜಿ ಕಂಡು ಗರಂ ಆದರು. ಈ ರೀತಿ ನಿಷ್ಕಾಳಜಿಯಿಂದ ಕೆಲಸ ಮಾಡಿದರೆ ಹೇಗೆ? ಯಾವ ಇಲಾಖೆ ಪರಿಶೀಲಿಸಿದರೂ ಪ್ರಗತಿ ಕಾಣುತ್ತಿಲ್ಲ. ಈಗ ಬರಗಾಲ ಬೇರೆ ಇದೆ. ಜಾನುವಾರು ಹಾಗೂ ರೈತರ ಬಗ್ಗೆ ಕಾಳಜಿ ವಹಿಸಬೇಕು. ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಆಗಬಾರದು. ಸಭೆಯಲ್ಲಿ ತಾಲೂಕಿನಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಶಾಸಕರು ಹೇಳಿಕೊಂಡಿದ್ದು, ಅವುಗಳನ್ನು ಆದ್ಯತೆ ಮೇಲೆ ಪರಿಹರಿಸಬೇಕು. ಬರ ನಿರ್ವಹಣೆ ಸಮರ್ಪಕವಾಗಿ ಮಾಡಬೇಕು.
ನಿಮ್ಮ ಜವಾಬ್ದಾರಿ ತಪ್ಪಿಸಿಕೊಳ್ಳಲು ಇನ್ನಿತರ ಇಲಾಖೆೆಯತ್ತ ಬೊಟ್ಟು ಮಾಡುವುದು, ಲವ್​ ಲೆಟರ್​ ತರಹ ಪತ್ರ ವ್ಯವಹಾರ ಮಾಡುತ್ತ ಕುಳಿತರೆ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ನಾನು ಸುಮ್ಮನಿರಲ್ಲ:
    3 ತಿಂಗಳಿಗೊಮ್ಮೆ ಸಭೆ ಮಾಡಿ ಹೋಗ್ತಾರೆ ಎಂದು ಭಾವಿಸಬೇಡಿ. ಈ ಸಭೆಯಲ್ಲಿ ಹೇಳಿರುವ ಕೆಲಸ-ಕಾರ್ಯಗಳನ್ನು ಪಾಲಿಸಿ, ಪ್ರಗತಿ ವರದಿಯೊಂದಿಗೆ ಮುಂದಿನ ಸಭೆಗೆ ಬರಬೇಕು. ತಹಸೀಲ್ದಾರ್​, ಆರ್​ಐ, ಎ.ಸಿ. ಇವರೆಲ್ಲ ಹೆಡ್​ ಕ್ವಾರ್ರ್ಟಸ್​ನಲ್ಲೇ ಇರಬೇಕು. ಈ ಮೊದಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎಂದರೆ ಕಡೆಗಣಿಸಲಾಗುತ್ತಿತ್ತು. ಆದರೆ, ಈಗ ಅದೆಲ್ಲ ನಡೆಯೋದೇ ಇಲ್ಲ. ಈ ಇಲಾಖೆಗೆ ಸಂಬಂದಿಸಿ 34 ಸಾವಿರ ಕೋಟಿ ರೂಪಾಯಿ ಬಜೆಟ್​ ಇದೆ. ಹೀಗಾಗಿ ನನ್ನ ಇಲಾಖೆಗೆ ಸಂಬಂಧಿಸಿದ ಯಾವುದೇ ಕೆಲಸ ಸರಿಯಾಗಿ ನಿರ್ವಹಿಸದಿದ್ದರೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಖಡಕ್​ ಸೂಚನೆ ನೀಡಿದರು.

ಪ್ರತಿಭಟನೆಗೂ ಸುತ್ತೋಲೆ ಮಾಡಿ
ಕಳೆದ ತಿಂಗಳು ಜಿಲ್ಲಾ ಟೆಂಪೋ&ಲಾರಿ ಮರಳು ಸಾಗಾಟ ವಾಹನ ಮಾಲೀಕ&ಚಾಲಕರು ಪ್ರತಿಭಟನೆ ನಡೆಸಿದ್ದರಿಂದ ಅವರಿಗೆ ಪೊಲೀಸರು ನೋಟಿಸ್​ ನೀಡಿದ್ದರು. ಈ ವಿಚಾರವಾಗಿಯೇ ಸಭೆಯಲ್ಲಿ ಉಪಸ್ಥಿತರಿದ್ದ ಕಾರ್ಕಳ ಶಾಸಕ ಸುನೀಲ್​ಕುಮಾರ್​, ಜಿಲ್ಲಾ ಪೊಲೀಸ್​ ವರಿಷ್ಠ ಅರುಣ್​ ಕೆ. ಅವರ ವರ್ತನೆಗೆ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹೋರಾಟ ಮಾಡುವ ಹಕ್ಕಿದೆ. ನೀವು ಹೇಗೆ ನೋಟಿಸ್​ ಜಾರಿ ಮಾಡುತ್ತೀರಿ ಎಂದು ಏರುದನಿಯಲ್ಲಿ ಪ್ರಶ್ನಿಸಿದರು. ಇದಕ್ಕೆ ಎಸ್ಪಿ ಪ್ರತಿಕ್ರಿಯಿಸಿ, ಹೆದ್ದಾರಿ ಬದಿ ಅಪಘಾತಕ್ಕೆ ಕಾರಣವಾಗುವ ರೀತಿ ಲಾರಿ ನಿಲ್ಲಿಸಿದ್ದಕ್ಕೆ ನೋಟೀಸ್​ ಕೊಡಲಾಗಿದೆ ಎಂದರು. ಮತ್ತೆ ಮಾತು ಮುಂದುವರಿಸಿದ ಸುನೀಲ್​, ಜನರು ಎಲ್ಲಿ ಪ್ರತಿಭಟಿಸಬೇಕು? ಹೇಗೆ ಪ್ರತಿಭಟಿಸಬೇಕು ಎಂದು ನಿಮ್ಮ ಪೊಲೀಸ್​ ಇಲಾಖೆಯಿಂದಲೇ ವಿವರವಾದ ಸುತ್ತೋಲೆ ಹೊರಡಿಸಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ಈ ಸಂದರ್ಭ ಸಚಿವೆ ಹೆಬ್ಬಾಳ್ಕರ್​ ಮಧ್ಯ ಪ್ರವೇಶಿಸಿ, ನೋಟೀಸ್​ ವಾಪಸ್​ ಪಡೆಯುವಂತೆ ಎಸ್ಪಿಗೆ ಸೂಚಿಸಿ, ಗದ್ದಲಕ್ಕೆ ತೆರೆ ಎಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net