

ಉಡುಪಿ: ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜನ ಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಸರ್ಕಾರಕ್ಕ್ಕೆ ಒಳ್ಳೆಯ ಹೆಸರು ತರುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಈ ಕಾರ್ಯದಲ್ಲಿ ಅನಗತ್ಯ ವಿಳಂಬ ಹಾಗೂ ಅಶಿಸ್ತು ತೋರಿದಲ್ಲಿ ಅಂತಹ ಅಧಿಕಾರಿಗಳ ವಿರುದ್ದ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ , ಅಂಗವಿಕಲ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಭಾನುವಾರ ತಾಲೂಕು ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅನ್ನಬಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಹಾಗೂ ಶಕ್ತಿ ಯೋಜನೆಗಳ ಸಮರ್ಪಕವಾಗಿ ಅನುಷ್ಠಾನ ಮಾಡಲು ಜಿಲ್ಲೆಯಲ್ಲಿ ಅರ್ಹರಿರುವ ಫಲಾನುಭವಿಗಳ ಸಂಖ್ಯೆ, ಹಾಗೂ ಯೋಜನೆಯನ್ನು ಅವರಿಗೆ ತಲುಪಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಗತ್ಯ ವಿವರಗಳನ್ನು ಸಿದ್ದಪಡಿಸಿಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿಗಳನ್ನು ಸ್ವಂತ ಕಟ್ಟಡಗಳಿಗೆ ಸ್ಥಳಾಂತರಿಸಲು ಅನುಕೂಲವಾಗುವಂತೆ ಶೀಘ್ರದಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಲು ಸೂಕ್ತ ಜಾಗ ಗುರುತಿಸಿ ನಿರ್ಮಾಣ ಕಾರ್ಯಕೈಗೊಳ್ಳಬೇಕು. ಗಂಟುರೋಗದಿಂದ ಮೃತಪಟ್ಟ ಜಾನುವಾರುಗಳಿಗೆ ಶೀಘ್ರದಲ್ಲಿ ಪರಿಹಾರ ವಿತರಿಸಬೇಕು. ಮಳೆಗಾಲದಲ್ಲಿ ರೈತರಿಗೆ ಭಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆಯದಂತೆ ಎಚ್ಚರವಹಿಸಬೇಕು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಪ್ರಸ್ತುತ ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆ, ಪ್ರಾಕೃತಿಕ ವಿಕೋಪ ಎದುರಿಸಲು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು, ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಸಿದ್ದತೆಗಳು, ಸಮುದ್ರ ಕೊರೆತ ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಮಳೆಗಾಲದಲ್ಲಿ ಶಾಲಾ ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಕಾಲುಸಂಕಗಳ ನಿರ್ಮಾಣ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸುವಂತೆ ಸೂಚಿಸಿದರು. ಯಾವುದೇ ಸಂದರ್ಭದಲ್ಲಿ ಅಧಿಕಾರಿಗಳು ಮೊಬೈಲ್ ಸ್ವಿಚ್ ಆಫ್ ಮಾಡದೆ ಕೇಂದ್ರಸ್ಥಾನದಲ್ಲೇ ಇದ್ದು, ಅಗತ್ಯ ಸಂದರ್ಭದಲ್ಲಿ ತಕ್ಷಣವೇ ಸಂಪರ್ಕಕ್ಕೆ ಸಿಗುವಂತಿರಬೇಕು. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಾಗ ಅನಗತ್ಯ ವಿಳಂಬ ಹಾಗೂ ಅರ್ಜಿಗಳನ್ನು ಸಕಾರಣವಿಲ್ಲದೇ ತಿರಸ್ಕರಿಸಬಾರದು. ಹೆಚ್ಚಿನ ಸಂಖ್ಯೆಯಲ್ಲಿ ಅರ್ಹರಿಗೆ ಸೌಲಭ್ಯಗಳನ್ನು ಮಂಜೂರು ಮಾಡುವಂತೆ ತಿಳಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಕೂರ್ಮರಾವ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ, ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಎಂ. ಹಾಕೆ, ಕಾರ್ಕಳ ವಿಭಾಗದ ಡಿಎಫ್‌ಓ ಗಣಪತಿ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ತರಬೇತಿ ನಿರತ ಐ.ಎ.ಎಸ್ ಅಧಿಕಾರಿ ಯತೀಶ್ , ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ ಉಪಸ್ಥಿತರಿದ್ದರು.