ಉಡುಪಿ ಜಿಲ್ಲಾ ಉಸ್ತುವಾರಿ ಸಮನ್ವಯ ಸಮಿತಿ ಸಭೆ

udp-14-disha meeting
Published on

ಉಡುಪಿ:  ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್‌ಪಾಸ್ ಕಾಮಗಾರಿಗೆ ಸುಮಾರು 20 ಅಡಿ ಆಳಕ್ಕೆ ರಸ್ತೆ ಅಗೆಯಲಾಗಿದ್ದು, ಮೇ  30ರೊಳಗೆ ತಡೆಗೋಡೆ ಕಟ್ಟಿಕೊಡುವುದಾಗಿ ಗುತ್ತಿಗೆದಾರರು ನೀಡಿದ ಭರವಸೆ ಹುಸಿಯಾಗಿದೆ. ಇದರಿಂದ ಮಳೆಗಾಲದಲ್ಲಿ ನೀರು ತುಂಬಿದರೆ ಹೆದ್ದಾರಿಯೂ ಕುಸಿದು ಬೀಳುವ ಸಾಧ್ಯತೆ ಇರುವುದರಿಂದ ಸೆಪ್ಟೆಂಬರ್‌ವರೆಗೆ ಹೊಂಡಗಳನ್ನು ಬಂಡೆಕಲ್ಲುಹಾಕಿ ಮುಚ್ಚುವಂತೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಎನ್‌ಎಚ್‌ಎಐ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬುಧವಾರ  ಜಿಲ್ಲಾ ಪಂಚಾಯಿತಿ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಅಧ್ಯಕ್ಷತೆಯಲ್ಲಿ ನಡೆದ ಉಡುಪಿ ಉಸ್ತುವಾರಿ ಸಮನ್ವಯ ಸಮಿತಿ (ದಿಶಾ) ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲಾ ಪೊಲೀಸ್ ಇಲಾಖೆ 50ಕ್ಕೂ ಅಧಿಕ ಅಪಘಾತ ವಲಯಗಳನ್ನು ಗುರುತಿಸಿ ಸುರಕ್ಷತಾ ಕ್ರಮಗಳನ್ನು ಅಳವಡಿಸುವಂತೆ ತಿಳಿಸಿದೆ. ಅದಕ್ಕೆ ಗುತ್ತಿಗೆದಾರರು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಇನ್ನೆರಡು ದಿನದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಪ್ರಾಧಿಕಾರದ ಯೋಜನಾ ನಿರ್ದೇಶಕರು, ಗುತ್ತಿಗೆದಾರರು ಸಭೆ ನಡೆಸಿ, ಸೂಕ್ತ ಕ್ರಮಕೈಗೊಳ್ಳಬೇಕು. ನಂತರವೂ ಯಾವುದೇ ಕ್ರಮಕೈಗೊಳ್ಳದಿದ್ದರೆ ಅಂಥ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ನಿತಿನ್ ಗಡ್ಕರಿ ಅವರ ಕಚೇರಿಯಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಹೇಳಿದರು.

ಎಸ್‌ಪಿ ಅಕ್ಷಯ್ ಹಾಕೆ ಮಚ್ಚೀಂದ್ರ ಮಾತನಾಡಿ, ಕಳೆದ 1 ವರ್ಷದಲ್ಲಿ ರಸ್ತೆ ದಾಟುವ ಸಂದರ್ಭದಲ್ಲಿಯೇ ಸುಮಾರು 58 ಅಪಘಾತ ಪ್ರಕರಣಗಳು ನಡೆದಿದ್ದು, 100 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಮುಖ 5 ಸ್ಥಳಗಳಲ್ಲಿ ಪಿಪಿಪಿ ಮಾದರಿಯಲ್ಲಿ ಎಸ್ಕಲೇಟರ್‌ಗಳನ್ನು ಅಳವಡಿಸುವುದು ಉತ್ತಮ. ಹೆಬ್ರಿ ಕಡೆಯಿಂದ ಬರುವ ಘನವಾಹನಗಳು ಸಾಸ್ತಾನ ಟೋಲ್ ತಪ್ಪಿಸುವ ನಿಟ್ಟಿನಲ್ಲಿ ಒಳರಸ್ತೆಗಳಲ್ಲಿ ಸಂಚರಿಸುತ್ತಿದ್ದು, 2 ರಸ್ತೆಗಳಲ್ಲಿ ಕಮಾನುಗಳನ್ನು ಅಳವಡಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ನೀರಿಗೆ 77 ಲಕ್ಷ ರೂ. ಖರ್ಚು
ಜಿಪಂ ಸಿಇಒ ಪ್ರಸನ್ನ ಮಾತನಾಡಿ, 103 ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಗೆ ಈವರೆಗೆ 77 ಲಕ್ಷ ರೂ. ಖರ್ಚು ಮಾಡಲಾಗಿದ್ದು, ಈಗಾಗಲೇ ಅನೇಕ ಗ್ರಾಪಂಗಳು ಹಣ ಕೊರತೆಯಿಂದ ಟ್ಯಾಂಕರ್ ನೀರು ಪೂರೈಸಲು ಸಾಧ್ಯವಿಲ್ಲವೆಂದು ಹೇಳುತ್ತಿದ್ದಾರೆ. ಸರ್ಕಾರ ಬರ ಎಂದು ಘೋಷಣೆ ಮಾಡದೇ ಇರುವುದರಿಂದ ಪ್ರಕೃತಿ ವಿಕೋಪ ನಿಧಿಯಲ್ಲಿ ಹಣ ಕೊಡಲು ಸಾಧ್ಯವಾಗುತ್ತಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದೆ ಶೋಭಾ, ಗ್ರಾಪಂಗಳು ನೀರಿನ ಪೂರೈಕೆಗೆ ಸ್ವಂತ ಅನುದಾನಗಳನ್ನು ಬಳಸಿಕೊಳ್ಳಲು ಸೂಚನೆ ನೀಡಿ, ನಂತರ ಸರ್ಕಾರಕ್ಕೆ ಪತ್ರ ಬರೆದು ನೀರು ಪೂರೈಕೆಗೆ ವೆಚ್ಚದ ಮಾಡಿದ ಹಣವನ್ನು ಮರುಪಾವತಿ ಮಾಡುವಂತೆ ತಿಳಿಸಿದರು.

38 ಸಾವಿರ ಹೆಕ್ಟೇರ್ ಭತ್ತ ಕೃಷಿ ಗುರಿ
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೀತಾ ಮಾತನಾಡಿ, ಪಿಎಂ ಕಿಸಾನ್ ಯೋಜನೆಯಲ್ಲಿ 1.53 ಲಕ್ಷ ರೈತರಿಗೆ 13 ಕಂತುಗಳಲ್ಲಿ 454 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಮುಂದಿನ ಕಂತು ಪಾವತಿಗೆ ರೈತರು ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದ್ದು, ಜಿಲ್ಲೆಯಲ್ಲಿ 32,000 ರೈತರು ಇ-ಕೆವೈಸಿ ಮಾಡಿಸಿಕೊಂಡಿಲ್ಲ. ಅವರನ್ನು ಸ್ಥಳೀಯ ಸೇವಾಕೇಂದ್ರಗಳ ಮೂಲಕ ಸಂಪರ್ಕಿಸಲಾಗುತ್ತಿದೆ. ಈ ಬಾರಿ ಜಿಲ್ಲೆಯಲ್ಲಿ 38,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ಮಳೆ ವಿಳಂಬದಿಂದಾಗಿ 2000 ಹೆಕ್ಟೇರ್ ಪ್ರದೇಶದಲ್ಲಿ ಕೃಷಿಗೆ ತೊಂದರೆಯಾಗಿದೆ ಎಂದು ತಿಳಿಸಿದರು.

ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಕೇಂದ್ರ ಸರ್ಕಾರ ಡಿಸೇಲ್ ಕೋಟಾ ನಿಗದಿ ಮಾಡಿದ್ದು, ಜಿಲ್ಲೆಗೆ ಎಷ್ಟು ಡಿಸೇಲ ಅಗತ್ಯವಿದೆ ಎಂಬುದಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
 ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಪಡುಬಿದ್ರಿ ಹಾಗೂ ಹಿರಿಯಡ್ಕ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ವಿಳಂಬವಾಗುತ್ತಿದ್ದು, ಕಾಮಗಾರಿಯನ್ನು ವೈಜ್ಞಾನಿಕವಾಗಿ ತುರ್ತುನಿರ್ವಹಿಸಬೇಕು. ವಿವಿಧ ಭಾಗಗಳಲ್ಲಿ ಕಡಲ ಕೊರೆತ ಉಂಟಾಗುತ್ತಿದ್ದು, ಕಡಲ ಕೊರತ ಪೀಡಿತ ಪ್ರದೇಶಗಳ ಸ್ಥಳ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

 ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮತ್ತು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್, ಪ್ರೊಫೆಷನರಿ ಐ.ಎ.ಎಸ್ ಯತೀಶ್, ಎಡಿಸಿ ವೀಣಾ  ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net