ಗ್ರೀನ್ ಜೋನ್ ಎಂದು ಮೈಮರೆಯಬೇಡಿ, ಯಾಂತ್ರೀಕೃತ ಮೀನುಗಾರಿಕೆಗೆ ಅವಕಾಶ ಶೀಘ್ರ

korona new
Published on

ಉಡುಪಿ: ಒಂದು ಬಾರಿ ಪಾಸ್ ಪಡೆದು ಜಿಲ್ಲೆಯಿಂದ ಹೋಗಬಹುದು. ಮತ್ತೆ ಸದ್ಯದ ಮಟ್ಟಿಗೆ ವಾಪಸ್ ಜಿಲ್ಲೆಯೊಳಗೆ ಬರಮಾಡಿಕೊಳ್ಳುವುದಿಲ್ಲ ಎಂದು ಡಿಸಿ ಜಿ.ಜಗದೀಶ್ ಹೇಳಿದ್ದಾರೆ.

ಕ್ವಾರಂಟೈನ್ ಆದವರು ಹೋಟೆಲ್‌ನಲ್ಲಿ 28 ದಿನ ಉಳಿದುಕೊಳ್ಳಬಹುದು. ಅದರ ಸಂಪೂರ್ಣ ವೆಚ್ಚವನ್ನು ಅವರೇ ನೋಡಿಕೊಳ್ಳಬೇಕು. ಈ ಬಗ್ಗೆ ಜಿಲ್ಲೆಯ ಹೋಟೆಲ್ ಮಾಲೀಕರ ಜತೆ ಸಭೆ ನಡೆಸಿದ್ದೇವೆ. ಹೋಟೆಲ್ ದರವನ್ನು ಆಯಾ ತಾಲೂಕಿನ ತಹಸೀಲ್ದಾರ್ ನಿರ್ಧರಿಸುತ್ತಾರೆ ಎಂದರು.

ಉಡುಪಿ ಹಸಿರು ವಲಯದಲ್ಲಿದೆ ಎಂದು ಮೈ ಮರೆಯಬೇಡಿ. ಹಸಿರು ವಲಯದಲ್ಲಿದ್ದ ಜಿಲ್ಲೆಗಳು ರೆಡ್ ಜೋನ್‌ಗೆ ಬಂದಿವೆ. ಕರೊನಾ ಲಕ್ಷಣಗಳಿದ್ದರೆ ದಯವಿಟ್ಟು ಉಡುಪಿಗೆ ಬರಬೇಡಿ. ಜಿಲ್ಲೆಯವರಿಗೆ ತೊಂದರೆ ಕೊಡಬೇಡಿ ಎಂದು ಡಿಸಿ ಮನವಿ ಮಾಡಿದರು. ಹೊರ ಜಿಲ್ಲೆ, ಹೊರ ರಾಜ್ಯದಿಂದ ಬರುವವರನ್ನು ವೈದ್ಯಕೀಯ ಪರೀಕ್ಷೆ ಮಾಡಿ ಒಳಗೆ ಬಿಡುತ್ತೇವೆ. ಹೊರ ಜಿಲ್ಲೆಯಿಂದ ಬರುವವರನ್ನು ಕಡ್ಡಾಯವಾಗಿ ಕ್ವಾರಂಟೈನ್ ಮಾಡುತ್ತೇವೆ. ಆರೋಗ್ಯ ತಪಾಸಣೆ ಸಂದರ್ಭದಲ್ಲಿ ಯಾವ ಕ್ವಾರಂಟೈನ್ ಎಂದು ವೈದ್ಯರು ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಎರಡು-ಮೂರು ದಿನಗಳಲ್ಲಿ ಯಾಂತ್ರೀಕೃತ ಮೀನುಗಾರಿಕೆಗೆ ಅವಕಾಶ ನೀಡುವ ಬಗ್ಗೆ ನಿರ್ಧಾರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಬಂದರಿನಿಂದ ಮೀನುಗಾರಿಕೆ ಬೋಟ್‌ಗಳು ಒಮ್ಮೆಗೆ ಹೋಗುವಂತಿಲ್ಲ. ಅದೇ ರೀತಿ ಒಟ್ಟಿಗೆ ಬರುವಂತಿಲ್ಲ. ಜನ ಕೂಡ ಹೆಚ್ಚು ಸೇರುವಂತಿಲ್ಲ. ಅದಕ್ಕಾಗಿ ದಿನಕ್ಕೆ 30 ಬೋಟ್‌ಗಳಷ್ಟೇ ಮೀನುಗಾರಿಕೆಗೆ ತೆರಳಬೇಕು. ಒಮ್ಮೆಗೆ 10 ಬೋಟ್‌ಗಳಷ್ಟೇ ಮೀನು ಖಾಲಿ ಮಾಡಬೇಕೆಂದು ತಿಳಿಸಿದರು. ಮೀನುಗಾರಿಕೆ ನಡೆಸಿ ಮೀನನ್ನು ಬಂದರಿನಲ್ಲಿ ಹರಾಜು, ಮಾರಾಟ ಪ್ರಕ್ರಿಯೆ ಮಾಡುವಂತಿಲ್ಲ. ಬೋಟ್‌ನಿಂದ ಖಾಲಿ ಮಾಡಿದ ಮೀನನ್ನು ನೇರವಾಗಿ ಲಾರಿಗೆ ತುಂಬಿಸಬೇಕು. ಈ ಬಗ್ಗೆ ಮೀನುಗಾರರು ಹಾಗೂ ಮೀನುಗಾರಿಕಾ ಇಲಾಖಾ ಉಪನಿರ್ದೇಶಕರ ಜತೆ ಚರ್ಚೆ ಮಾಡಿದ್ದೇನೆ. ಉಳಿದ ಸಾಧಕ, ಬಾಧಕಗಳ ಬಗ್ಗೆ ಅಧ್ಯಯನ ನಡೆಸಿ ತೀರ್ಮಾನಕ್ಕೆ ಬರುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net