

ಉಡುಪಿ: ಸಂವಿಧಾನ ಪ್ರತಿಯೊಬ್ಬರೂ ಗೌರವಯುತವಾಗಿ ಮತ್ತು ಸ್ವಾಭಿಮಾನದಿಂದ ಬದುಕುವ ಹಕ್ಕು ನೀಡಿದ್ದು, ಲಿಂಗತ್ವ ಅಲ್ಪ ಸಂಖ್ಯಾತರೂ ಸಹ ಸಮಾಜದ ಮುಖ್ಯವಾಹಿನಿಯಲ್ಲಿ ಬದುಕಲು ಜಿಲ್ಲಾಡಳಿತದ ವತಿಯಿಂದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಆರ್ಥಿಕವಾಗಿ ಸ್ವಾವಲಂಬಿಯಾಗಲು ವಿವಿಧ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಅಗತ್ಯವಿರುವ ಅನುದಾನ ಬಿಡುಗಡೆಗೆ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದಿದ್ದು ಶೀಘ್ರದಲ್ಲಿ ಸೌಲಭ್ಯ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಹೇಳಿದರು.
ಮಂಗಳವಾರ ಬ್ರಹ್ಮಗಿರಿಯ ಬಾಲಭವನದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಸಂಯುಕ್ತ ಆಶ್ರಯದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಮತ್ತು ದಮನಿತ ಮಹಿಳೆಯರ ಸಮುದಾಯ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಲಿಂಗತ್ವ ಅಲ್ಪಸಂಖ್ಯಾತರು ಸೂಕ್ಷ್ಮ ಸಮುದಾಯಕ್ಕೆ ಸೇರಿದ್ದು, ಅಧಿಕಾರಿಗಳು ಇವರ ಸೂಕ್ಷ್ಮತೆಯನ್ನು ಅರ್ಥಮಾಡಿಕೊಂಡು ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಈ ಸಮುದಾಯವದರಿಗೆ ಆಧಾರ್ ಕಾರ್ಡ್ ನಲ್ಲಿ ಆಗಬೇಕಿರುವ ಅಗತ್ಯ ಬದಲಾವಣೆಗಳ ಕುರಿತಂತೆ ಪ್ರತ್ಯೇಕವಾಗಿ ಶಿಬಿರ ಆಯೋಜಿಸಿ ಅಗತ್ಯ ತಿದ್ದುಪಡಿಗಳನ್ನು ಮಾಡಿಕೊಡುವಂತೆ ಮತ್ತು ಪಿಂಚಣಿ ಸೌಲಭ್ಯ ಪಡೆಯದೇ ಇರುವವರನ್ನು ಗುರುತಿಸಿ ಪಿಂಚಣಿ ಸೌಲಭ್ಯ ಒದಗಿಸಬೇಕು. ಯಾವುದೇ ಸಂದರ್ಭದಲ್ಲಿ ಗೌಪ್ಯತೆಯ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ ಮಾತನಾಡಿ, ಜಿಲ್ಲೆಯ ಲಿಂಗತ್ವ ಅಲ್ಪಸಂಖ್ಯಾತರಿಗೆ 41 ಮನೆಗಳು ಮಂಜೂರಾಗಿದ್ದು, ಶೀಘ್ರದಲ್ಲಿ ಅವುಗಳ ವಿತರಣೆ ನಡೆಯಲಿದೆ. ಆರ್ಥಿಕ ಚಟುವಟಿಕೆಗಳನ್ನು ನಡೆಸಲು 5 ಲಕ್ಷ ರೂ. ನೆರವು ನೀಡುವ ಕುರಿತ ಪ್ರಸ್ತಾವನೆಯಲ್ಲಿ ಸಲ್ಲಿಸಲಾಗಿದೆ. ಸ್ವ ಸಹಾಯಕ ಸಂಘಗಳನ್ನು ಸ್ಥಾಪಿಸಿಕೊಂಡಲ್ಲಿ ಗರಿಷ್ಠ ಆರ್ಥಿಕ ನೆರವು ಪಡೆಯಲು ಸಾಧ್ಯವಿದೆ ಎಂದು ತಿಳಿಸಿದರು.
ಲಿಂಗತ್ವ ಅಲ್ಪಸಂಖ್ಯಾತರ ಪ್ರತಿನಿಧಿ ಸಮೀಕ್ಷಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್, ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ, ಉಡುಪಿ ತಹಸೀಲ್ದಾರ್ ರವಿ ಅಂಗಡಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಿವೇಕಾನಂದ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಲಯನ್ಸ್ ಕ್ಲಬ್ ಲಕ್ಷ್ಯ ಉಡುಪಿಯ ಅಧ್ಯಕ್ಷ ರಮೇಶ್ ಕೆ ಶೆಟ್ಟಿ, ಬನ್ನಂಜೆ ಲಯನ್ಸ್ ಕ್ಲಬ್ ಅಧ್ಯಕ್ಷೆ ವಸಂತಿ ಕಿದಿಯೂರು, ಗಾರ್ಡ್ ಸಂಸ್ಥೆಯ ಸೌಜನ್ಯ ಶೆಟ್ಟಿ. ಆಶ್ರಯ ಸಮುದಾಯ ಸಂಘಟನೆಯ ಅಧ್ಯಕ್ಷ ಸುದರ್ಶನ್, ಆಸರೆ ಸಮುದಾಯ ಸಂಘಟನೆಯ ಅಧ್ಯಕ್ಷ ಸಂಜೀವ ವಂಡ್ಸೆ, ದಮನಿತ ಮಹಿಳೆಯರ ಪ್ರತಿನಿಧಿ ಅಮೃತಾ ಮತ್ತಿತರರು ಉಪಸ್ಥಿತರಿದ್ದರು. ಗಾರ್ಡ್ ಸಂಸ್ಥೆಯ ಚಂದ್ರಿಕಾ ಸ್ವಾಗತಿಸಿದರು. ರೇಣುಕಾ ವಂದಿಸಿದರು. ನರೇಶ್ ನಿರೂಪಿಸಿದರು.
ಸ್ಥಳದಲ್ಲೇ ಗುರುತು ಚೀಟಿ ವಿತರಿಸಿದ ಜಿಲ್ಲಾಧಿಕಾರಿ
ಲಿಂಗತ್ವ ಅಲ್ಪ ಸಂಖ್ಯಾತರು ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯುವ ಕುರಿತಂತೆ ಅವರ ಗುರುತಿನ ಬಗ್ಗೆ ದೃಡೀಕರಿಸಲು ಅತ್ಯಂತ ಅಗತ್ಯವಾಗಿದ್ದ ಟ್ರಾನ್ಸ್‌ಜೆಂಡರ್ ಕಾರ್ಡ್‌ಗಳನ್ನು ಪಡೆಯಲು ಅನುಭವಿಸುತ್ತಿದ್ದ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿಗಳು ಸ್ಥಳದಲ್ಲಿಯೇ ಕಾರ್ಡ್ ನೀಡುವ ಕುರಿತು ಅರ್ಜಿಗಳನ್ನು ಸ್ವೀಕರಿಸಿದರು. ತಕ್ಷಣವೇ ನೊಂದಣಿ ಮಾಡಿಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೂಡಲೇ ವಿಶೇಷ ನೊಂದಣಿ ಶಿಬಿರ ಆಯೋಜಿಸಲಾಯಿತು. ಸುಮಾರು 20 ಮಂದಿಯ ನೊಂದಣಿಯನ್ನು ಮಾಡಿ, ಗುರುತಿನ ಚೀಟಿ ನೀಡುವ ಮುಂದಿನ ಕ್ರಮಕ್ಕೆ ಸಲ್ಲಿಸಲಾಯಿತು. ಲಿಂಗತ್ವ ಅಲ್ಪ ಸಂಖ್ಯಾತರ ಬಹುಕಾಲದ ಮತ್ತು ಅತ್ಯಂತ ಪ್ರಮುಖ ಸಮಸ್ಯೆಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲಾಯಿತು.