ಜಿಲ್ಲೆಯಲ್ಲಿ 2.14 ಕೋಟಿ ರೂ. ನಗದು ವಶಕ್ಕೆ: ಜಿಲ್ಲಾಧಿಕಾರಿ ಕೂರ್ಮಾ ರಾವ್

UDP-8-DC
Published on

ಉಡುಪಿ: ಮಾದರಿ ನೀತಿ ಸಂಹಿತೆ ಜಾರಿಯಾಗಿ 45 ದಿನಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 2,14,91,030 ರೂ. ನಗದು ಹಾಗೂ 42313 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದ್ದು, ಸಿವಿಜಿಲ್ ಆ್ಯಪ್ ಮೂಲಕ 158 ದೂರುಗಳನ್ನು ಸ್ವೀಕರಿಸಲಾಗಿದೆ. ಮತದಾರರ ಸಹಾಯವಾಣಿಗೆ 249 ಕೆರೆಗಳು, ಎನ್‌ಜಿಆರ್‌ಎಸ್ ಪೋರ್ಟಲ್ ಮೂಲಕ 120 ದೂರುಗಳು ಬಂದಿದ್ದು, ಎಲ್ಲಾ ದೂರುಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 10ರಂದು ನಡೆಯುವ ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, 5 ವಿಧಾನ ಸಭಾ ಕ್ಷೇತ್ರದಲ್ಲಿ ಮಹಿಳಾ ಅಧಿಕಾರಿಗಳಿಂದಲೇ ನಿರ್ವಹಿಸಲ್ಪಡುವ ಒಟ್ಟು 25 ಸಖಿ ಮತಗಟ್ಟೆಗಳನ್ನು ತೆರೆಯಲಾಗಿದೆ. 5 ಪಿಡಬ್ಲೂೃಡಿ ಮತಗಟ್ಟೆ, 5 ಯುವ ಮತಗಟ್ಟೆ, ಕರಾವಳಿ ಸಂಸ್ಕೃತಿ ಬಿಂಬಿಸುವ 5 ವಿಶೇಷ ಮತಗಟ್ಟೆ, ಕುಂದಾಪುರದಲ್ಲಿ ಕೊರಗ ಜನಾಂಗದ ಸಂಸ್ಕೃತಿ ಬಿಂಬಿಸುವ ಒಂದು ಮತಗಟ್ಟೆ ಸ್ಥಾಪಿಸಲಾಗಿದೆ. ಪ್ರತೀ ಮತಗಟ್ಟೆಯಲ್ಲಿ ಮತಗಟ್ಟೆ ಸಹಾಯಕರನ್ನು ನೇಮಿಸಲಾಗಿದ್ದು, ಗಾಲಿ ಕುರ್ಚಿ, ಭೂತಗನ್ನಡಿ, ಬ್ರೈಲ್‌ಲಿಪಿ ಮಾದರಿ ಮತಪತ್ರ, ರ‌್ಯಾಂಪ್ ನಿರ್ಮಿಸಲಾಗಿದೆ. ಅಂಗವಿಕಲರು ಮತ್ತು ಹಿರಿಯನಾಗರಿಕರಿಗೆ ಆದ್ಯತೆ ಮೇಲೆ ಪ್ರವೇಶ ಕಲ್ಪಿಸಲಾಗುತ್ತಿದ್ದು, ಕೋರಿಕೆ ಮೇರೆಗೆ ಮತಗಟ್ಟೆಗೆ ಬರಲು ವಾಹನದ ವ್ಯವಸ್ಥೆಯನ್ನೂ ಮಾಡಲಾಗಿದೆ. ಅಗತ್ಯವುಳ್ಳವರು ಬಿಎಲ್‌ಒ ಅಥವಾ ಪಿಡಿಒ ಅವರನ್ನು ಸಂಪರ್ಕಿಸಬಹುದು ಎಂದರು.

ವಾಹನದ ವ್ಯವಸ್ಥೆ
ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸುವ ಮತಗಟ್ಟೆ ಅಧಿಕಾರಿಗಳನ್ನು ಮತದಾನ ಕೇಂದ್ರಕ್ಕೆ ಕರೆದೊಯ್ಯಲು ಹಾಗೂ ಮತದಾನ ಮುಗಿದ ನಂತರ ವಾಪಾಸು ಕರೆದುಕೊಂಡು ಬರಲು ವಾಹನಗಳ ವ್ಯವಸ್ಥೆಯನ್ನು ಮಾಡಲಾಗಿದೆ. 176 ಬಸ್, 36 ಮಿನಿಬಸ್, 54 ಟೆಂಪೋ ಟ್ರಾವೆಲರ್, 68 ಜೀಪ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಪ್ರಸಕ್ತ ಚುನಾವಣೆಯಲ್ಲಿ 1336 ಬ್ಯಾಲೆಟ್ ಯುನಿಟ್, 1336 ಕಂಟ್ರೋಲ್ ಯುನಿಟ್, 1446 ವಿವಿಪ್ಯಾಟ್‌ಗಳನ್ನು ಉಪಯೋಗಿಸಲಾಗುತ್ತದೆ ಎಂದರು.

ಮಸ್ಟರಿಂಗ್ ಸೆಂಟರ್
ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರಿ ಪಪೂ ಕಾಲೇಜು, ಕುಂದಾಪುರಕ್ಕೆ ಭಂಡಾರ್‌ಕರ್ಸ್‌ ಆರ್ಟ್ಸ್ ಆ್ಯಂಡ್ ಸೈನ್ಸ್ ಕಾಲೇಜು, ಉಡುಪಿ ಕ್ಷೇತ್ರಕ್ಕೆ ಬ್ರಹ್ಮಾವರ ಸೈಂಟ್ ಸಿಸಿಲಿ ಕಾಲೇಜು, ಕಾಪು ಕ್ಷೇತ್ರಕ್ಕೆ ಉಳಿಯಾರುಗೋಳಿ ದಂಡತೀರ್ಥ ಪಿಯು ಕಾಲೇಜು, ಕಾರ್ಕಳ ಕ್ಷೇತ್ರಕ್ಕೆ ಮಂಜುನಾಥ ಪೈ ಮೆಮೋರಿಯಲ್ ಪ್ರಥಮ ದರ್ಜೆ ಕಾಲೇಜು ಮಸ್ಟರಿಂಗ್ ಹಾಗೂ ಡಿ-ಮಸ್ಟರಿಂಗ್ ಸೆಂಟರ್ ಆಗಿರುತ್ತದೆ ಎಂದರು.

3942 ಹಿರಿಯ ನಾಗರಿಕರಿಂದ ಮತದಾನ
ಪ್ರಥಮ ಬಾರಿಗೆ ಚುನಾವನಾ ಆಯೋಗ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಅಂಚೆಮತದಾನ ವ್ಯವಸ್ಥೆ ಕಲ್ಪಿಸಿದ್ದು, ಇದರಲ್ಲಿ 4060 ಮಂದಿ ನೋಂದಾಯಿಸಿಕೊಂಡಿದ್ದು, 3942 ಮಂದಿ ಮತದಾನ ಮಾಡಿದ್ದಾರೆ. 756 ಮಂದಿ ವಿಶೇಷ ಚೇತನ ಮತದಾರರಲ್ಲಿ 750 ಮಂದಿ, 27 ಮಂದಿ ಅಗತ್ಯ ಸೇವಾನಿರತರಲ್ಲಿ 23 ಮಂದಿ ಮತದಾನ ಮಾಡಿದ್ದಾರೆ ಎಂದರು.
ಮೇ 8 ರಂದು ಸಾಯಂಕಾಲ 6 ರಿಂದ ಮೇ 10ರಂದು ಸಾಯಂಕಾಲ ಮತದಾನ ಮುಕ್ತಾಯವಾಗುವವರೆಗೆ ಜಿಲ್ಲಾದ್ಯಂತ ಸೆಕ್ಷನ್ 144 ಜಾರಿಗೊಳಿಸಲಾಗಿದ್ದು, ಸಂತೆ, ಜಾತ್ರೆ ಹಾಗೂ ಪೂರ್ವಾನುಮತಿ ಪಡೆಯದೆ ಉತ್ಸವಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ಮೇ 12ರಂದು ರಾತ್ರಿ 12 ರಿಂದ ಮೇ 13ರಂದು ರಾತ್ರಿ 12ರವರೆಗೆ ಒಣದಿನ ಎಂದು ಘೋಷಿಸಲಾಗಿದೆ ಎಂದರು.

ಎಸ್‌ಪಿ ಅಕ್ಷಯ್ ಹಾಕೆ ಮಚ್ಚೀಂದ್ರ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್., ಅಪರ ಜಿಲ್ಲಾಧಿಕಾರಿ ವೀಣಾ, ತರಬೇತಿ ನಿರತ ಐ.ಎ.ಎಸ್ ಆಧಿಕಾರಿ ಯತೀಶ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ. ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net