ಡೀಮ್ಡ್​ ಪಾರೆಸ್ಟ್​ನಿಂದ ವಿನಾಯಿತಿ ಜಾಗ ಹಸ್ತಾಂತರಕ್ಕೆ ಡಿಸಿ ಸೂಚನೆ

dc
Published on

ಉಡುಪಿ: ಡೀಮ್ಡ್​ ಫಾರೆಸ್ಟ್​ ನಿಂದ ವಿನಾಯಿತಿಗೊಂಡ ಜಮೀನುಗಳನ್ನು ಕಂದಾಯ ಹಾಗೂ ಅರಣ್ಯ ಇಲಾಖೆ ವತಿಯಿಂದ ಜಂಟಿ ಸರ್ವೇ ಮಾಡಿ ಅರಣ್ಯದಿಂದ ಬೇರ್ಪಡಿಸಿ, ಸಾರ್ವಜನಿಕ ಉಪಯೋಗಿ ಸರ್ಕಾರಿ ಕಟ್ಟಡಗಳ ನಿಮಾರ್ಣ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಜಾಗಗಳನ್ನು ನೀಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಕೆ. ಸೂಚನೆ ನೀಡಿದರು.

ಮಂಗಳವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ, ಜಿಲ್ಲೆಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯದ ಅವಧಿಯಲ್ಲಿ ಕಚೇರಿಯಲ್ಲಿ ಉಪಸ್ಥಿತರಿದ್ದು, ಕಾಲಮಿತಿಯೊಳಗೆ ಕಡತಗಳ ವಿಲೇವಾರಿ ಮಾಡಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದರು.

ಬೇಸಿಗೆಯಲ್ಲಿ ಜಿಲ್ಲೆಯಾದ್ಯಂತ ಅನೇಕ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿತ್ತು. ಉತ್ತಮ ಮಳೆಯಿಂದಾಗಿ ಸದ್ಯ ಸಮಸ್ಯೆ ನಿವಾರಣೆಯಾಗಿದೆ. ಮುಂಬರುವ ದಿನಗಳಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲು ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು. ಮಳೆ ನೀರನ್ನು ಇಂಗಿಸುವ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಬಿಡುಗಡೆಯಾದ ಅನುದಾನವು ಹಿಂದಿರುಗಿ ಹೋಗದಂತೆ ಎಚ್ಚರವಹಿಸಿ, ಪ್ರತಿಶತ 100 ರಷ್ಟು ಅನುಷ್ಠಾನಗೊಳಿಸುವ ಕಾರ್ಯವನ್ನು ಅನುಷ್ಠಾನಾಧಿಕಾರಿಗಳು ಮಾಡಬೇಕು ಎಂದರು. ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಸಿ.ಆರ್​.ಝಡ್​ ನಿಯಮಗಳನ್ನು ಉಲ್ಲಂಘಿಸಿ ನಿಮಾರ್ಣ ಕಾಮಗಾರಿಗಳನ್ನು ಕೈಗೊಳ್ಳುವವರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಿ ಎಂದರು.
ಅರಣ್ಯ ಇಲಾಖೆ ವತಿಯಿಂದ ರಸ್ತೆ ಬದಿ ಸೇರಿದಂತೆ ಮತ್ತಿತರ ಜನನಿಬಿಡ ಪ್ರದೇಶಗಳಲ್ಲಿನ ಅಪಾಯಕಾರಿ ಮರಗಳನ್ನು ಗುರುತಿಸಿ, ತೆರವುಗೊಳಿಸಬೇಕು. ಪ್ರಸ್ತುತ ಸಾಲಿನಲ್ಲಿ ಗಿಡಮರಗಳನ್ನು ಬೆಳಸಲು ನಿಗಧಿಪಡಿಸಿರುವ ಗುರಿಯನ್ನು ಸಾಧಿಸಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ 27 ಕ್ಕೂ ಹೆಚ್ಚು ಅಂಗನವಾಡಿ ಕಟ್ಟಡಗಳಿಗೆ ಜಾಗದ ಕೊರತೆಯಿಂದ ಸ್ವಂತ ಕಟ್ಟಡ ನಿಮಾರ್ಣಕ್ಕೆ ಸಾಧ್ಯವಾಗಿರುವುದಿಲ್ಲ. ಸ್ಥಳಿಯವಾಗಿ ದಾನಿಗಳನ್ನು ಸಂಪರ್ಕಿಸಿ, ಅವರಿಂದ ಅಗತ್ಯ ಜಾಗವನ್ನು ಪಡೆದು ಕಟ್ಟಡ ನಿಮಾರ್ಣಕ್ಕೆ ಮುಂದಾಗಬೇಕು ಎಂದರು.

ಚೆಕ್​ ಡ್ಯಾಂ ಗಳ ನಿರ್ವಹಣೆ ಸೂಕ್ತ ರೀತಿಯಲ್ಲಿ ಆಗದ ಕಾರಣ ನೀರು ಸರಾಗವಾಗಿ ಹರಿದು ಹೋಗದೇ ತಗ್ಗು ಪ್ರದೇಶಗಳಿಗೆ ನುಗ್ಗಿ ಕೃತಕ ನೆರೆ ಉಂಟಾಗುತ್ತಿದೆ. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳುವಂತೆ ಸೂಚಿಸಿದರು.
ಗ್ರಾಮೀಣ ಭಾಗಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುವ ಬಗ್ಗೆ ಎಚ್ಚರವಹಿಸಿ ಅವುಗಳಿಗೆ ಕಡಿವಾಣ ಹಾಕಲು ಮುಂದಾಗಬೇಕು. ಗೋವಾದ ಮೂಲಕ ಜಿಲ್ಲೆಗೆ ಅಕ್ರಮ ಮದ್ಯ ಸರಬರಾಜು ಆಗದಂತೆ ನೋಡಿಕೊಂಡಾಗ ಮಾತ್ರ ಅಬಕಾರಿ ಆದಾಯವನ್ನು ಹೆಚ್ಚಿಸಲು ಸಾಧ್ಯ ಎಂದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್​, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್​ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net