ಉಡುಪಿ ಜಿಲ್ಲೆಯಲ್ಲಿ 46 ಮಂಗನಕಾಯಿಲೆ ಪ್ರಕರಣ

udp-6-dc
Published on

ಉಡುಪಿ: ಜಿಲ್ಲೆಯಲ್ಲಿ 46 ಮಂಗನ ಕಾಯಿಲೆ ಪ್ರಕರಣಗಳು ಕಂಡುಬಂದಿದ್ದು, ಒಬ್ಬರು ಮರಣ ಹೊಂದಿರುವ ಬಗ್ಗೆ ವರದಿಯಾಗಿದೆ. ಕ್ಯಾಸನೂರು ಫಾರೆಸ್ಟ್​ ಡಿಸೀಸ್​ ಎಂಬುದು ಮಂಗಗಳು ಸಾವನ್ನಪ್ಪಿ ಅವುಗಳಿಂದ ಉಂಟಾಗುವ ಉಣ್ಣೆಗಳು ಕಚ್ಚುವಿಕೆಯಿಂದ ಈ ಕಾಯಿಲೆಗಳು ಹರಡುತ್ತವೆ. ಕಾಡಿನಲ್ಲಿ ಮಂಗಗಳು ಸತ್ತಾಗ ಅವುಗಳನ್ನು ಸರ್ಕಾರದ ಮಾರ್ಗಸೂಚಿ ಅನ್ವಯ ವಿಲೇವಾರಿ ಮಾಡಬೇಕು. ಮಂಗಗಳು ಸತ್ತ 5 ಕಿ.ಮೀ. ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದರ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆಯ ವಿವಿಧ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾಡು ಹಾಗೂ ಕಾಡಂಚಿನಲ್ಲಿರುವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪಿಡಿಒ, ಅರಣ್ಯ ಇಲಾಖೆಯ ಅಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪಶು ಪಾಲನಾ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಿ, ಈ ಕಾಯಿಲೆ ಬಗ್ಗೆ ಮೇಲ್ವಿಚಾರಣೆ ನಡೆಸಬೇಕು ಎಂದರು.

ಜಿಲ್ಲೆಯಾದ್ಯಂತ 5 ವರ್ಷದೊಳಗಿನ ಮಕ್ಕಳಿಗೆ ಮಾ. 3 ರಂದು ಪಲ್ಸ್​ ಪೊಲೀಯೋ ಲಸಿಕೆಯನ್ನು ನೀಡಲಾಗುತ್ತಿದೆ. ಪ್ರತಿಯೊಬ್ಬ ಮಕ್ಕಳಿಗೂ ಪೋಲಿಯೋ ಲಸಿಕೆ ಹನಿ ಹಾಕಿಸಿ, ಪ್ರತಿಶತ 100ರಷ್ಟು ಸಾಧಿಸಲು ಅಗತ್ಯವಿರುವ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ನಮ್ಮ ದೇಶದಲ್ಲಿ ಪಲ್ಸ್​ ಪೊಲಿಯೋ ಪ್ರಕರಣಗಳು ಶೂನ್ಯವಿದ್ದರೂ ಸಹ, ಯಾವುದೇ ಮಕ್ಕಳಿಗೆ ಬರಬಾರದು ಎಂಬ ಉದ್ದೇಶದಿಂದ ಪೊಲಿಯೋ ಲಸಿಕೆಯನ್ನು ನೀಡಲಾಗುತ್ತಿದೆ ಎಂದರು.

ಆಯುಷ್ಮಾನ್​ ಭಾರತ್​ ಆರೋಗ್ಯ ಕರ್ನಾಟಕ ಆರೋಗ್ಯ ಕಾರ್ಡ್​ಗಳನ್ನು ಅರ್ಹ ಪ್ರತಿಯೊಬ್ಬ ಫಲಾನುಭವಿಗಳಿಗೂ ವಿತರಿಸಲಾಗುತ್ತಿದೆ. ಇದರಿಂದ ವಾರ್ಷಿಕ 5 ಲಕ್ಷ ರೂ. ವರೆಗೆ ಉಚಿತ ಆರೋಗ್ಯ ಸೇವೆಗಳನ್ನು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯಬಹುದಾಗಿದೆ. ಎಂಡೋಸಲ್ಫಾನ್​ ಪೀಡಿತರಿಗೆ ಉಚಿತ ಆರೋಗ್ಯ ಸೇವೆಗಳನ್ನು ಒದಗಿಸಬೇಕು. ಜಿಲ್ಲೆಯಲ್ಲಿ 1846 ಎಂಡೋಸಲ್ಫಾನ್​ ಪೀಡಿತರಿದ್ದು, ಅವರಲ್ಲಿ 158 ಜನ ಮರಣ ಹೊಂದಿದ್ದಾರೆ. 1649 ಜನರಿಗೆ ಪ್ರತಿ ತಿಂಗಳು ಮಾಸಾಶನವನ್ನು ನೀಡಲಾಗುತ್ತಿತ್ತು. ಕಳೆದೆರೆಡು ತಿಂಗಳಿನಿಂದ ಮಾಸಾಶನ ಸಿಗುತ್ತಿಲ್ಲ ಎಂಬ ಬಗ್ಗೆ ದೂರುಗಳಿವೆ. ಈ ಬಗ್ಗೆ ಪರಿಶೀಲಿಸಿ, ಪ್ರತಿಯೊಬ್ಬರಿಗೂ ಮಾಸಾಶನ ದೊರೆಯುವಂತೆ ಕ್ರಮವಹಿಸಬೇಕೆಂದು ಸೂಚನೆ ನೀಡಿದರು.

ಎಂಡೋಸಲ್ಫಾನ್​ ಬಾದಿತರಿಗೆ ಆರೈಕೆ ಮಾಡಲು ಹಾಗೂ ಹಗಲು ಯೋಗಕ್ಷೇಮಗಳನ್ನು ನೋಡಿಕೊಳ್ಳಲು ಬೈಂದೂರಿನ ಕಿರಿಮಂಜೇಶ್ವರ ಅಥವಾ ನಾಡ ಸುತ್ತಮುತ್ತಲಿನ ಪ್ರದೇಶದಲ್ಲಿ ಪಾಲನಾ ಕೇಂದ್ರವನ್ನು ತೆರೆಯಲು, ಮುಚ್ಚಿಹೋಗಿರುವ ಶಾಲಾ ಕಟ್ಟಡವನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಿರಿಯ ಸಿವಿಲ್​ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್​, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ ಗಡಾದ್​, ಜಿಲ್ಲಾ ಏಡ್ಸ್​ ನಿಯಂತ್ರಣ ಅಧಿಕಾರಿ ಡಾ. ಚಿದಾನಂದ ಸಂಜು, ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ ಡಾ. ಲತಾ ನಾಯಕ್​, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ಪ್ರಶಾಂತ್​ ಭಟ್​, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net