

ಉಡುಪಿ: ಪರಿಸರ ಸಂರಕ್ಷಣೆ ಅತ್ಯಂತ ಮುಖ್ಯವಾಗಿದ್ದು, ಪಶ್ಚಿಮಘಟ್ಟಕ್ಕೆ ಅಪಾಯವಾಗುವಂತ ಯಾವುದೇ ಯೋಜನೆಗಳಿಗೆ ಅವಕಾಶ ಇರಬಾರದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಅಭಿಪ್ರಾಯಪಟ್ಟರು.
ಉಡುಪಿ ಪತ್ರಿಕಾ ಭವನದಲ್ಲಿ ತಿಂಗಳ ಮಾಧ್ಯಮ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಂವಾದ ನಡೆಸಿದ ಅವರು, ಭೂ ವಿಜ್ಞಾನಿಗಳು ಈಗಾಗಲೇ ಎಚ್ಚರಿಸಿದಂತೆ ಪರಿಸರ ಸೂಕ್ಷ್ಮ ವ್ಯಾಪ್ತಿಯಲ್ಲಿ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳುವುದಿಲ್ಲ; ಅಲ್ಲಿರುವ ಮೂಲ ನಿವಾಸಿಗಳಿಗೆ ಸಮಸ್ಯೆಯಾಗದಂತೆ ಮೂಲಸೌಕರ್ಯ, ಸರ್ಕಾರಿ ಯೋಜನೆಗಳನ್ನು ಕಲ್ಪಿಸಲು ಜಿಲ್ಲಾಡಳಿತ ಬದ್ಧವಾಗಿದೆ ಎಂದರು.
ವ್ಯವಸ್ಥಿತ ಯುಜಿಡಿಗೆ ಸರ್ವೇ: ಉಡುಪಿ ನಗರ ದೊಡ್ಡಮಟ್ಟದಲ್ಲಿ ಬೆಳೆದಿದ್ದು, ಹಿಂದಿನ ಒಳಚರಂಡಿ ವ್ಯವಸ್ಥೆ (ಯುಜಿಡಿ) ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಇದರ ಪುನಃ ನಿರ್ಮಾಣ ನಿಟ್ಟಿನಲ್ಲಿ ತಜ್ಞರೊಂದಿಗೆ ಸಮಾಲೋಚಿಸಿ ಯೋಜನೆ ರೂಪಿಸಲಾಗುತ್ತಿದೆ. ಇಂದ್ರಾಣಿ ನದಿ ಪುನಶ್ಚೇತನ ಜಿಲ್ಲಾಡಳಿತದ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಪ್ರಮುಖವಾಗಿ ಯುಜಿಡಿಯನ್ನು ವ್ಯವಸ್ಥಿತವಾಗಿಸಬೇಕಿದೆ. ಇದಕ್ಕಾಗಿ 400 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಸರ್ವೇ ನಡೆಸಿ, ಎಸ್ಟಿಮೇಟ್ ತಯಾರಿಸಲಾಗುವುದು ಎಂದು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ 179 ಭಾಗವಾಗಿ ಮಲ್ಪೆ- ಕರಾವಳಿ ಜಂಕ್ಷನ್‌ವರೆಗಿನ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೆ ಹಂತಕ್ಕೆ ತಲುಪಿದೆ. ಪರ್ಕಳದಲ್ಲಿ ಉಂಟಾದ ರೀತಿ ಭೂಸ್ವಾಧೀನ ಗೊಂದಲ ಹೋಗಲಾಡಿಸುವ ನಿಟ್ಟಿನಲ್ಲಿ ಭೂಸ್ವಾಧೀನ ಕಾರ್ಯವನ್ನು ಜಿಲ್ಲಾಡಳಿತಕ್ಕೆ ನೀಡಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
ಕಾರ್ಕಳದಲ್ಲಿ ಶಿಲ್ಪಕಲಾ ಪಾರ್ಕ್
ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆ ವಲಯ ಸ್ಥಾಪನೆಗೆ ಸಾಕಷ್ಟು ಅಡೆತಡೆಗಳಿವೆ. ಜಾಗದ ಸಮಸ್ಯೆ ಮತ್ತು ಸಮುದ್ರ ಹತ್ತಿರ ಇರುವುದರಿಂದ ಪರಿಸರ ಸಂರಕ್ಷಣೆ ಆದ್ಯತೆ ನೆಲೆಯಲ್ಲಿ ಸಮಸ್ಯೆಗಳಾಗಲಿವೆ. ಬಂಡವಾಳ ಹೂಡಿಕೆದಾರರಿಗೆ ಕೊರತೆ ಇಲ್ಲ. ಪರಿಸರ ಸ್ನೇಹಿ ಕೈಗಾರಿಕೆಗಳ ಸ್ಥಾಪನೆಗೆ ಯೋಜನೆ ರೂಪಿಸಲಾಗುತ್ತಿದೆ. ಕಾರ್ಕಳದಲ್ಲಿ ಸಾಕಷ್ಟು ಮಂದಿ ಶಿಲ್ಪಿಗಳಿದ್ದು, ಇವರನ್ನು ಒಂದೆಡೆ ಸೇರಿಸಿ ಜಾಗ ನೀಡಿ ಶಿಲ್ಪಕಲಾ ಪಾರ್ಕ್ ಸ್ಥಾಪಿಸುವ ಯೋಜನೆ ಪ್ರಮುಖ. ಫುಡ್‌ಪಾರ್ಕ್, ಕೃಷಿ ಉತ್ತೇಜನಕ್ಕೆ ಪೂರಕ ಕೈಗಾರಿಕೆ ಘಟಕಗಳನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದು ಡಿಸಿ ಹೇಳಿದರು.
ಶಿಕ್ಷಣ ಇಲಾಖೆ ಅಯುಕ್ತನಾಗುವ ಆಸೆ
ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಮುಂದೆ ಶಿಕ್ಷಣ ಇಲಾಖೆ ಆಯುಕ್ತನಾಗಿ ಕೆಲಸ ಮಾಡಬೇಕು ಎಂಬ ಮನದಾಸೆಯನ್ನು ಡಿಸಿ ಜಗದೀಶ್ ವ್ಯಕ್ತಪಡಿಸಿದರು. ಬಡತನ, ಮೂರು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದ ದಿನಗಳು ನನ್ನವು. ಆರಂಭದಲ್ಲಿ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಲು ಒಂದು ಉದ್ಯೋಗ ಸಿಕ್ಕರೆ ಸಾಕು ಎಂದು ಬಯಸಿದ್ದೆ. ಬಳಿಕ ಸತತ ಪರಿಶ್ರಮದಿಂದ ಕೆಎಎಸ್ ಪಾಸ್ ಮಾಡಿದೆ. ಕಂದಾಯ ಸೇವೆ, ಸರ್ಕಾರಿ ಯೋಜನೆ ಜನರಿಗೆ ಸರಳವಾಗಿ ಮುಟ್ಟಿಸಬೇಕು ಎಂಬ ಅಶಯದಿಂದ ರಾಜ್ಯದಲ್ಲಿ ಉಡುಪಿ ಜಿಲ್ಲೆ ಮಾದರಿಯಾಗಿ, ಪ್ರಥಮ ಸ್ಥಾನದಲ್ಲಿರುವ ಮಟ್ಟಿಗೆ ಶ್ರಮ ಹಾಕಿ ಕೆಲಸ ಮಾಡುತ್ತಿದ್ದೇವೆ ಎಂದರು.
ಐಸಿಯು ಕೊರತೆ ಇಲ್ಲ
ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಐಸಿಯು ಕೊರತೆ ಎದುರಾಗಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು. ನಮ್ಮಲ್ಲಿ 90 ಐಸಿಯು ಬೆಡ್‌ಗಳಿದ್ದು, ಇದರಲ್ಲಿ 10 ಮಾತ್ರ ಭರ್ತಿಯಾಗಿವೆ. ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಶೇ.20ರಷ್ಟು ಐಸಿಯು ಮೀಸಲಿಡಲು ಸೂಚಿಸಲಾಗಿದೆ. ವೆಂಟಿಲೇಟರ್ 55 ಇದ್ದು, ಇದರಲ್ಲಿ 2 ಮಾತ್ರ ಬಳಕೆಯಲ್ಲಿದೆ. 576 ಆಕ್ಸಿಜನ್ ಬೆಡ್‌ಗಳು ಖಾಲಿ ಇವೆ. ಕಳೆದ 15 ದಿನಗಳಲ್ಲಿ 34,900 ಕರೊನಾ ಟೆಸ್ಟ್ ಮಾಡಿದ್ದು, 101 ಪಾಸಿಟಿವ್ ವರದಿಯಾಗಿದೆ. ಪಾಸಿಟಿವಿಟಿ ರೇಟ್ 3.15 ಇದೆ.