ವ್ಯಾಪಾರ ಕೇಂದ್ರಗಳಲ್ಲಿ ಕೋವಿಡ್ ಸೂಚನಾ ಫಲಕ ಕಡ್ಡಾಯ; ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಸೂಚನೆ

phone in
Published on

ಉಡುಪಿ: ಜಿಲ್ಲೆಯ ಎಲ್ಲ ವ್ಯಾಪಾರ ಕೇಂದ್ರಗಳಲ್ಲಿ ಕೋವಿಡ್ ನಿರ್ಮೂಲನಾ ನಿಯಮಗಳನ್ನು ಪಾಲಿಸುವ ಬಗ್ಗೆ ಸೂಚನಾ ಫಲಕಗಳನ್ನು ಅಳವಡಿಸುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್-19 ಲಸಿಕೆ ಬಗ್ಗೆ ಸಾರ್ವಜನಿಕರ ಅಹವಾಲು ಆಲಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲೂಕುವಾರು ಸಾಧನೆ ಗುರಿ: ಜಿಪಂ ಸಿಇಒ ಡಾ.ನವೀನ್ ಭಟ್ ವೈ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ 3 ಗ್ರಾಮ ಪಂಚಾಯಿತಿಗಳು ಶೇ.100 ಮೊದಲ ಡೋಸ್ ಲಸಿಕೆ ಸಾಧನೆ ಮಾಡಿವೆ. ಮಹಾಮೇಳದ ಮೂಲಕ ಇನ್ನೂ 20ಕ್ಕೂ ಹೆಚ್ಚು ಗ್ರಾಪಂಗಳು ಈ ಸಾಧನೆ ಪಟ್ಟಿಗೆ ಸೇರ್ಪಡೆಗೊಳ್ಳಲಿವೆ. ಮುಂದಿನ ದಿನಗಳಲ್ಲಿ ಶೇ.100 ಮೊದಲ ಡೋಸ್ ಪೂರ್ಣಗೊಳಿಸಿದ ತಾಲೂಕುಗಳನ್ನು ಗುರುತಿಸಿ ಬಹುಮಾನ ನೀಡಲಾಗುವುದು ಎಂದರು.

ಒಂದು ಗಂಟೆಯಲ್ಲಿ 27 ಕರೆ: ಬೆಳಗ್ಗೆ 10 ರಿಂದ 11ರ ವರೆಗೆ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ 27 ಮಂದಿ ಸಾರ್ವಜನಿಕರು ಕೋವಿಡ್ ಲಸಿಕೆ ಬಗ್ಗೆ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದುಕೊಂಡರು. ಉಡುಪಿ ಜಿಲ್ಲೆಯಲ್ಲದೆ ನೆರೆಯ ದಕ್ಷಿಣಕನ್ನಡದಿಂದಲೂ ನಾಗರಿಕರು ಕರೆ ಮಾಡಿ ಮಾಹಿತಿ ಪಡೆದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಕೋವಿಡ್ ನೋಡಲ್ ಅಧಿಕಾರಿ ಡಾ.ಪ್ರಶಾಂತ ಭಟ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ, ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ಡಾ.ಪ್ರೇಮಾನಂದ್, ಎನ್.ಐ.ಸಿಯ ನಿರ್ದೇಶಕ ಮಂಜುನಾಥ್ ಉಪಸ್ಥಿತರಿದ್ದರು.

ಜ್ವರ ಬಂದರೆ ಒಳ್ಳೆಯದೇ?

ಲಸಿಕೆ ಪಡೆದಾಗ ಜ್ವರ ಬಂದರೆ ಒಳ್ಳೆಯದು ಇಲ್ಲವಾದಲ್ಲಿ ಲಸಿಕೆ ಪ್ರಭಾವ ಬೀರುವುದಿಲ್ಲ ಎನ್ನುತ್ತಾರೆ ಇದು ನಿಜವೇ ಎಂದು ವಿಟ್ಲದ ಇಸ್ಮಾಯಿಲ್ ಪ್ರಶ್ನಿಸಿದರು. ವಿಶ್ವ ಅರೋಗ್ಯ ಸಂಸ್ಥೆಯ ಸಲಹೆಗಾರ ಡಾ.ಅಶ್ವಿನ್ ಕುಮಾರ್ ಉತ್ತರಿಸಿ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದಾಗ ಲಸಿಕೆ ಪಡೆದರೆ ಜ್ವರ ಬರುತ್ತದೆ. ಜ್ವರ ಬಂದಾಗ ರೋಗ ನಿರೋಧಕ ಶಕ್ತಿ ಬೆಳವಣಿಗೆಯಾಗುತ್ತದೆ. ಅದರೆ ಇದೇ ವ್ಯಕ್ತಿಗೆ ಎರಡನೇ ಡೋಸ್ ಲಸಿಕೆ ಪಡೆದಾಗ ಜ್ವರ ಬರುವುದಿಲ್ಲ ಎಂದು ತಿಳಿಸಿದರು.

ವೈದ್ಯರ ಸಲಹೆ ಅಗತ್ಯ

ಮಗನಿಗೆ ಪೆನ್ಸಿಲಿನ್ ಸೇರಿದಂತೆ ಯಾವುದೇ ಇಂಜೆಕ್ಷನ್ ಪಡೆದರೂ ಇನ್‌ಫೆಕ್ಷನ್ ಆಗುತ್ತದೆ. ಕೋವಿಡ್ ಲಸಿಕೆ ಪಡೆಯಬಹುದೇ ಎಂಬ ಉಡುಪಿ ಶಾಜಿಯಾ ಪ್ರಶ್ನಿಸಿದರು. ಶೋಭಿತಾ ಅವರು ಕರೆ ಮಾಡಿ, ಹೃದಯದಲ್ಲಿ ಬ್ಲಾಕ್ ಇದೆ. ಶುಗರ್ ಮತ್ತು ಬಿಪಿ ಇದೆ ಲಸಿಕೆ ಪಡೆಯಬಹುದೇ ಎಂದು ಪ್ರಶ್ನಿಸಿದರು. ತೀವ್ರತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಚಿಕಿತ್ಸೆ ನೀಡುತ್ತಿರುವ ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗಳಲ್ಲಿಯೇ ಕೋವಿಡ್ ಲಸಿಕೆ ಪಡೆಯಬೇಕು ಎಂದು ಡಾ.ಅಶ್ವಿನ್ ಕುಮಾರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net