

ಮಂಗಳೂರು: ಕೇರಳದಿಂದ ಬರುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕರೊನಾ ಪ್ರಕರಣಗಳು ಪತ್ತೆಯಾಗುತ್ತಿರುವುದು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಪ್ರತಿನಿತ್ಯ ವರದಿಯಾಗುತ್ತಿರುವ ಪಾಸಿಟಿವ್ ಪ್ರಕರಣಗಳಲ್ಲಿ ಶೇ.50ರಷ್ಟು ಕೇರಳದಿಂದ ಬಂದವರಲ್ಲಿ ಕಂಡು ಬರುತ್ತಿದೆ.
ಆದ್ದರಿಂದ ಇದರೊಂದಿಗೆ ರೂಪಾಂತರಿ ಕರೊನಾ ಏನಾದರೂ ಜಿಲ್ಲೆಗೆ ಕಾಲಿಟ್ಟಿದೆಯೇ ಎಂದು ತಿಳಿಯುವ ಉದ್ದೇಶದಿಂದ ಈಗಾಗಲೇ ಪಾಸಿಟಿವ್ ಬಂದಿರುವ ಕೆಲವು ಗಂಟಲ ದ್ರವ ಸ್ಯಾಂಪಲ್ಗಳನ್ನು ಬೆಂಗಳೂರಿನ ನಿಮ್ಹಾನ್ಸ್ಗೆ ಕಳುಹಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ. ಅದರಂತೆ ಗುರುವಾರ ಮೊದಲ ಹಂತದಲ್ಲಿ ಸ್ಯಾಂಪಲ್ ಕಳುಹಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ.
ಕಳೆದ ವರ್ಷಾಂತ್ಯದ ವೇಳೆಗೆ ಇಂಗ್ಲೆಂಡ್ನಲ್ಲಿ ರೂಪಾಂತರಿ ಕರೊನಾ ಪ್ರಕರಣಗಳು ವರದಿಯಾಗಿದ್ದು, ಇದೇ ವೇಳೆ ಸಾಕಷ್ಟು ಮಂದಿ ಅಲ್ಲಿಂದ ಭಾರತಕ್ಕೆ ಬಂದಿದ್ದರು. ಕೇರಳಕ್ಕೆ ಬಂದಿದ್ದ ಹಲವರಲ್ಲಿ ರೂಪಾಂತರಿ ಕರೊನಾ ಪತ್ತೆಯಾಗಿತ್ತು. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪರೀಕ್ಷೆಗೆ ನಿಮ್ಹಾನ್ಸ್ಗೆ ಕಳುಹಿಸಲಾಗುತ್ತಿದೆ.
28,445 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಮೊದಲ ಮತ್ತು ಎರಡನೇ ಹಂತದ ಕರೊನಾ ಲಸಿಕಾ ಅಭಿಯಾನ ಮುಂದುವರಿದಿದೆ. ಈವರೆಗೆ 539 ಸೆಷನ್ ಆಯೋಜಿಸಿ 28,445 ಮಂದಿಗೆ ಲಸಿಕೆ ನೀಡಲಾಗಿದೆ. ಮೊದಲ ಹಂತದಲ್ಲಿ 52,381 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ಗುರಿಯಲ್ಲಿ 26,543 ಮಂದಿಗೆ ಲಸಿಕೆ ನೀಡಲಾಗಿದೆ. ಶೇ.50.67ರಷ್ಟು ಗುರಿ ಸಾಧನೆ ಮಾಡಲಾಗಿದೆ. ಎರಡನೇ ಹಂತದ ಮುಂಚೂಣಿ ಕಾರ್ಯಕರ್ತರ ಲಸಿಕಾ ಅಭಿಯಾನದಲ್ಲಿ 8,568 ಮಂದಿಗೆ ಲಸಿಕೆ ನೀಡುವ ಗುರಿಯಲ್ಲಿ 1902 ಮಂದಿ ಲಸಿಕೆ ನೀಡಲಾಗಿದ್ದು, ಶೇ.22.20ರಷ್ಟು ಗುರಿ ಸಾಧಿಸಲಾಗಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
ದ.ಕ.16, ಉಡುಪಿಯಲ್ಲಿ 6 ಪ್ರಕರಣ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 16 ಕರೊನಾ ಪಾಸಿಟಿವ್ ಪ್ರಕರಣ ವರದಿಯಾಗಿವೆ. ಸೋಂಕಿನಿಂದ ಗುಣವಾದ 22 ಮಂದಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 34,090 ಕರೊನಾ ಪಾಸಿಟಿವ್ ಪತ್ತೆಯಾಗಿದ್ದು, 740 ಮಂದಿ ಮೃತಪಟ್ಟಿದ್ದಾರೆ. 33,013 ಮಂದಿ ಗುಣವಾಗಿ ಬಿಡುಗಡೆಯಾಗಿದ್ದು, ಪ್ರಸ್ತುತ 337 ಸಕ್ರಿಯ ಪ್ರಕರಣಗಳಿವೆ. ಉಡುಪಿ ಜಿಲ್ಲೆಯಲ್ಲಿ ಮಂಗಳವಾರ 6 ಮಂದಿಗೆ ಕೋವಿಡ್-19 ದೃಢಪಟ್ಟಿದೆ. ರೋಗ ಲಕ್ಷಣವಿರುವ ಮೂವರಿಗೆ ಆಸ್ಪತ್ರೆಯಲ್ಲಿ ಹಾಗೂ ಉಳಿದ 3 ಮಂದಿಗೆ ಹೋಂ ಐಸೋಲೇಶನ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 10 ಮಂದಿ ಗುಣವಾಗಿ ಮನೆಗೆ ತೆರಳಿದ್ದಾರೆ. ಸದ್ಯ 44 ಸಕ್ರಿಯ ಪ್ರಕರಣಗಳಿವೆ.