ಉಡುಪಿಯಲ್ಲಿ ನಾಲ್ವರು ಆಸ್ಪತ್ರೆಗೆ ದಾಖಲು

Coronaviris 24 Jan 20
Published on

ಉಡುಪಿ: ಚೀನಾದ ವುಹಾನ್ ನಗರದಲ್ಲಿ ಪತ್ತೆಯಾಗಿ ಮಹಾಮಾರಿಯಾಗಿ ಕಾಡುತ್ತಿರುವ ಕರೊನಾ ವೈರಾಣು ಕೇರಳದಲ್ಲಿ ಮೂವರಿಗೆ ತಗುಲಿರುವ ಆತಂಕದ ನಡುವೆಯೇ ಉಡುಪಿಯಲ್ಲಿ ನಾಲ್ವರು ಶಂಕಿತರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಬ್ರಹ್ಮಾವರ ಮೂಲದ ದಂಪತಿ ಮತ್ತು ಮಗು ಹಾಗೂ ಕಾಪುವಿನ ಯುವಕ ಆಸ್ಪತ್ರೆಗೆ ದಾಖಲಾದವರು. ಪತಿ-ಪತ್ನಿ ಮತ್ತು ಮಗು ಚೀನಾದಲ್ಲಿ ಉದ್ಯೋಗಿಗಳಾಗದ್ದು, 15 ದಿನಗಳ ಹಿಂದೆ ಭಾರತಕ್ಕೆ ವಾಪಸ್ಸಾಗಿದ್ದರು. ಕಾಪುವಿನ ಯುವಕ ಜಪಾನ್‌ನಿಂದ 20 ದಿನಗಳ ಹಿಂದೆ ಮರಳಿದ್ದರು. ಆ ಸಂದರ್ಭ ಸಂದರ್ಭ ಕರೊನಾ ಸ್ಕ್ರೀನಿಂಗ್ ವ್ಯವಸ್ಥೆ ವಿಮಾನ ನಿಲ್ದಾಣಗಳಲ್ಲಿ ಇರಲಿಲ್ಲ. ಕರೊನಾ ಚರ್ಚೆಯಲ್ಲೂ ಇರಲಿಲ್ಲ.

ಈಗ ಈ ನಾಲ್ವರು ಸಾಮಾನ್ಯ ಶೀತ, ಜ್ವರ, ಕೆಮ್ಮುವಿನಿಂದ ಬಳಲುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಯ ಐಸೋಲೇಶನ್ ವಾರ್ಡಿನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವುದನ್ನು ಆರೋಗ್ಯ ಇಲಾಖೆ ಖಚಿತಪಡಿಸಿದೆ. ಗುಣಮುಖರಾಗುತ್ತಿದ್ದಂತೆ ಒಂದೆರಡು ದಿನಗಳಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಪಿಪಿಇ ಧರಿಸಿ ಚಿಕಿತ್ಸೆ: ಶಂಕಿತ ರೋಗಿಗಳಾಗಿದ್ದರೂ ಆಸ್ಪತ್ರೆಯ ವೈದ್ಯರೂ, ದಾದಿಯರು ಮುಂಜಾಗ್ರತಾ ಕ್ರಮವಾಗಿ ಪಿಪಿಇ (ಪರ್ಸನಲ್ ಪ್ರೊಟೆಕ್ಟಿವ್ ಇಕ್ವಿಪ್‌ಮೆಂಟ್) ಧರಿಸಿ ಚಿಕಿತ್ಸೆ ನೀಡುತಿದ್ದಾರೆ. ಸೋಂಕು ತಗುಲದಂತೆ ತಯಾರಿಸಲಾದ ಗ್ಲೌಸ್, ಕನ್ನಡಕ, ಮಾಸ್ಕ್, ಕೋಟನ್ನು ಒಳಗೊಂಡ ಪರಿಕರ ಇದಾಗಿದೆ. ಈ ವಾರ್ಡ್‌ಗೆ ಬೇರೆ ಯಾರಿಗೂ ಪ್ರವೇಶ ಇಲ್ಲ.

ಮೂರು ದಿನಗಳಲ್ಲಿ ವರದಿ: ಆಸ್ಪತ್ರೆಗೆ ದಾಖಲಾದ ನಾಲ್ವರ ಗಂಟಲಿನ ದ್ರವ ಮತ್ತು ರಕ್ತದ ಮಾದರಿಯನ್ನು ಬೆಂಗಳೂರಿನ ಮೆಡಿಕಲ್ ಕಾಲೇಜಿಗೆ ಪರೀಕ್ಷೆಗೆ ಕಳಿಸಲಾಗಿದ್ದು, ಮೂರು ದಿನಗಳಲ್ಲಿ ವರದಿ ಬರಲಿದೆ. ಸಾಮಾನ್ಯ ಜ್ವರದಿಂದ ಬಳಲುತ್ತಿರುವ ಅವರಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಸಿದ್ಧಪಡಿಸಲಾಗಿರುವ ಜಿಲ್ಲಾಸ್ಪತ್ರೆಯ ಪ್ರತ್ಯೇಕ ವಾರ್ಡಿನಲ್ಲಿ ಅವರನ್ನು ಇರಿಸಲಾಗಿದೆ.

ಕೆಎಂಸಿಯಲ್ಲಿ ವೈರಸ್ ಪತ್ತೆಯಾಗಿಲ್ಲ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ರೋಗಿಯಲ್ಲಿ ಕರೊನಾ ವೈರಸ್ ಪತ್ತೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು. ಇದುವರೆಗೆ ಯಾರಿಗೂ ಕರೊನಾ ವೈರಸ್ ತಗುಲಿರುವುದು ದೃಢಪಟ್ಟಿಲ್ಲ ಎಂದು ಮಣಿಪಾಲ ಕೆಎಂಸಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net