ಉಡುಪಿಯಲ್ಲಿ 'ಕುಸಿದ' ಕೋವಿಡ್ ಪ್ರಮಾಣ

corona
Published on

ಉಡುಪಿ: ಕಳೆದ ಎರಡು ದಿನಗಳಿಂದ ನೂರು, ಇನ್ನೂರಕ್ಕೂ ಹೆಚ್ಚು ಕರೊನಾ ಪಾಸಿಟಿವ್ ಪ್ರಕರಣ ದಾಖಲಿಸಿದ್ದ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ.

ಭಾನುವಾರ 13 ಮಂದಿಯಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿದೆ. ಇವರ ಪೈಕಿ ಇಬ್ಬರು ಉಡುಪಿಯವರು, ಹತ್ತು ಮಂದಿ ಕುಂದಾಪುರದವರು ಎಂದು ತಿಳಿದು ಬಂದಿದೆ. ಐವರು ಮಹಿಳೆಯರು ಮತ್ತು ಏಳು ಮಂದಿ ಪುರುಷರು, ಒರ್ವ ಬಾಲಕನಿಗೆ ಸೋಂಕು ತಗುಲಿದೆ. 12 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದು, 30 ವರ್ಷದ ಯುವತಿಯೊಬ್ಬಳು ಗುಜರಾತ್‌ನಿಂದ ಬಂದಿದ್ದಾರೆ. 13 ಪ್ರಕರಣಗಳಲ್ಲಿ ಯಾರಲ್ಲಿಯೂ ಲಕ್ಷಣ ಕಂಡುಬಂದಿರಲಿಲ್ಲ. ಎಲ್ಲರನ್ನೂ ಸಂಬಂಧಿತ ಪ್ರದೇಶಗಳ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಹೊಸದಾಗಿ ಸೋಂಕು ಪತ್ತೆಯಾದವರ ಸಂಖ್ಯೆ ಜಿಲ್ಲೆಯಲ್ಲಿ ಕಡಿಮೆಯಾಗಿದ್ದರೂ ರಾಜ್ಯದಲ್ಲಿ ಉಡುಪಿ ಮೊದಲ ಸ್ಥಾನವನ್ನೇ ಉಳಿಸಿಕೊಂಡಿದೆ. ಇದುವರೆಗೆ ಪತ್ತೆಯಾಗಿರುವ ಸೋಂಕಿತರಲ್ಲಿ 861 ಮಂದಿ ಮಹಾರಾಷ್ಟ್ರದಿಂದ, ಉಳಿದಂತೆ ದುಬೈನಿಂದ 15, ದೋಹ ಕತಾರ್‌ನಿಂದ ಒಬ್ಬರು, ತೆಲಂಗಾಣದಿಂದ 7, ಕೇರಳದಿಂದ ಬಂದ ಮೂವರು, ಆಂಧ್ರಪ್ರದೇಶ, ಗೋವಾದಿಂದ ಬಂದ ತಲಾ ಒಬ್ಬರಿಗೆ ಸೋಂಕು ತಗುಲಿದೆ. ಜಿಲ್ಲೆಯಲ್ಲಿ 10 ಜನ ಪೊಲೀಸರು ಸಹಿತ ಸ್ಥಳೀಯ 12 ಮಂದಿಯ ಸೋಂಕು ದೃಢಪಟ್ಟಿದೆ. ಇನ್ನೊಬ್ಬರ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 901ಕ್ಕೆ ಏರಿಕೆಯಾಗಿದೆ. ಭಾನುವಾರ 41 ಸೋಂಕಿತರು ಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. ಸದ್ಯ 626 ಸಕ್ರಿಯ ಪ್ರಕರಣಗಳಿವೆ.

155 ಮಂದಿ ವರದಿ ನೆಗೆಟಿವ್: ಭಾನುವಾರ ಸ್ವೀಕರಿಸಲಾದ 168ರಲ್ಲಿ 155 ಮಂದಿಯ ವರದಿ ನೆಗೆಟಿವ್ ಬಂದಿದೆ. ಒಬ್ಬರು ಕೋವಿಡ್-19 ಸೋಂಕು ಸಂಪರ್ಕ ಹೊಂದಿದ್ದವರು ಸೇರಿದಂತೆ ಉಸಿರಾಟ ಸಮಸ್ಯೆ, ಜ್ವರ ಲಕ್ಷಣ ಇರುವ 10 ಮಂದಿಯ ಗಂಟಲ ದ್ರವ ಮಾದರಿಯನ್ನು ಸಂಗ್ರಹಿಸಲಾಗಿದೆ. ಇಲ್ಲಿಯವರೆಗೆ ಸಂಗ್ರಹಿಸಿದ 12,538 ಗಂಟಲು ದ್ರವದ ಮಾದರಿಗಳಲ್ಲಿ ಭಾನುವಾರದವರೆಗೆ ಒಟ್ಟು 12,274ರ ಪರೀಕ್ಷಾ ವರದಿ ಸ್ವೀಕರಿಸಲಾಗಿದೆ. ಇದರಲ್ಲಿ 11,373 ನೆಗೆಟಿವ್ ಆಗಿದ್ದರೆ, ಇಂದಿನ 13 ಸೋಂಕಿತರ ವರದಿ ಸೇರಿ ಒಟ್ಟು 901 ಸ್ಯಾಂಪಲ್‌ಗಳು ಪಾಸಿಟಿವ್ ಆಗಿ ಬಂದಿವೆ. ಇನ್ನೂ 264 ಸ್ಯಾಂಪಲ್‌ಗಳ ವರದಿ ಬರಲು ಬಾಕಿ ಇದೆ.

9 ಪ್ರದೇಶಗಳಲ್ಲಿ ಕಂಟೇನ್ಮೆಂಟ್ ವಲಯ: ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚು ಪಾಸಿಟಿವ್ ಪ್ರಕರಣ ಕಂಡುಬಂದಿದ್ದು, ಶನಿವಾರ, ಭಾನುವಾರ ಎರಡು ದಿನಗಳದ್ದು ಸೇರಿ ಒಟ್ಟು 124 ಪ್ರದೇಶಗಳಲ್ಲಿ ಕಂಟೇನ್ಮೆಂಟ್ ಜೋನ್ ಘೋಷಣೆ ಮಾಡಿ ಸೀಲ್‌ಡೌನ್ ಮಾಡಲಾಗಿದೆ. ಉಡುಪಿ ಮತ್ತು ಕುಂದಾಪುರದಲ್ಲಿ ಭಾನುವಾರ 9 ಪ್ರದೇಶಗಳಲ್ಲಿ ಕಂಟೇನ್ಮೆಂಟ್ ಜೋನ್ ಘೋಷಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net