

ಉಡುಪಿ: ಜಿಲ್ಲೆಯಲ್ಲಿ ಕರೊನಾ ಆರ್ಭಟ ಮುಂದುವರಿದಿದ್ದು, ಬುಧವಾರ 61 ಮಂದಿಗೆ ಸೋಂಕು ದೃಢಪಟ್ಟಿದೆ.
ಸೋಂಕಿತ ಎಲ್ಲರೂ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಇದರಲ್ಲಿ 43 ಪುರುಷರು, 15 ಮಹಿಳೆಯರ ಸಹಿತ ನಾಲ್ವರು ಮಕ್ಕಳಿದ್ದಾರೆ. ಎಲ್ಲರನ್ನೂ ಪತ್ತೆ ಮಾಡಿ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 471ಕ್ಕೆ ಏರಿಕೆಯಾಗಿದೆ.
ದಾಪುರ, ಬೈಂದೂರು ವ್ಯಾಪ್ತಿಯಲ್ಲಿ 57 ಮಂದಿ, ಕಾರ್ಕಳ ವ್ಯಾಪ್ತಿಯಲ್ಲಿ 4 ಮಂದಿ ಇದ್ದಾರೆ. ಬುಧವಾರ ಕಾರ್ಕಳ ವ್ಯಾಪ್ತಿ ಕೋವಿಡ್ ಆಸ್ಪತ್ರೆಯಿಂದ 20 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ರಾಜ್ಯ ಆರೋಗ್ಯ ಇಲಾಖೆ ಕೋವಿಡ್-19 ಬುಲೆಟಿನ್‌ನಲ್ಲಿ ಉಡುಪಿ ಜಿಲ್ಲೆಯಲ್ಲಿ 62 ಮಂದಿಗೆ ಪಾಸಿಟಿವ್ ಎಂದು ತಿಳಿಸಿದೆ. ನೆರೆಯ ದಕ್ಷಿಣ ಕನ್ನಡ ಜಿಲ್ಲೆಯ ಪ್ರಕರಣವೊಂದು ಉಡುಪಿಗೆ ಸೇರ್ಪಡೆಯಾಗಿದ್ದು, ಜಿಲ್ಲೆಯ ಪಾಸಿಟಿವ್ 61 ಮಾತ್ರ ಎಂದು ಡಿಎಚ್‌ಒ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
851 ಮಂದಿಯದು ನೆಗೆಟಿವ್: ಈ ನಡುವೆ, ಪರೀಕ್ಷೆ ಪ್ರಮಾಣ ಹೆಚ್ಚಳವಾಗಿದ್ದು, ಬುಧವಾರ 851 ಮಂದಿಯ ವರದಿ ನೆಗೆಟಿವ್ ಬಂದಿದೆ. ಉಸಿರಾಟದ ತೊಂದರೆ 1 , ಇಲ್‌ನೆಸ್‌ಗೆ ಸಂಬಂಧಿಸಿ 1 ಸೇರಿದಂತೆ ಇಬ್ಬರ ಗಂಟಲ ದ್ರವ ಮಾದರಿ ಸಂಗ್ರಹಿಸಲಾಗಿದೆ. ಇನ್ನೂ 4936 ಮಂದಿಯದು ಕೋವಿಡ್-19 ವೈದ್ಯಕೀಯ ಪರೀಕ್ಷೆ ವರದಿ ಬರಲು ಬಾಕಿ ಇದೆ. ಐಸೊಲೇಶನ್ ವಾರ್ಡ್‌ನಿಂದ 9 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಐವರಲ್ಲಿ ಇಬ್ಬರು ಇನ್ನೂ ನಾಪತ್ತೆ: ಸೋಮವಾರ ದೃಢಪಟ್ಟಿದ್ದ ವರದಿಯಲ್ಲಿ ಐವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಮೂವರು ಮಾತ್ರ ಸಂಪರ್ಕಕ್ಕೆ ಸಿಕ್ಕಿ ಅವರನ್ನು ಕೋವಿಡ್-19 ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಉಳಿದ ಇಬ್ಬರು ಇನ್ನೂ ಪತ್ತೆಯಾಗಿಲ್ಲ. ಅವರು ನೀಡಿರುವ ವಿಳಾಸದಲ್ಲಿ ಪರಿಶೀಲಿಸಿದಾಗ ಪತ್ತೆಯಾಗಿಲ್ಲ. ಊರು ತೊರೆದಿರುವ ಶಂಕೆ ವ್ಯಕ್ತವಾಗಿದ್ದು, ಪತ್ತೆಗೆ ಆರೋಗ್ಯ, ಪೊಲೀಸ್ ಇಲಾಖೆ ಬಲೆ ಬೀಸಿದೆ.
2ನೇ ಸ್ಥಾನಕ್ಕೆ: ಜಿಲ್ಲೆಯ ಸೋಂಕಿತರ ಸಂಖ್ಯೆ 471ಕ್ಕೆ ಏರಿಕೆಯಾಗಿದೆ. ಬುಧವಾರ ಕಲಬುರಗಿಯಲ್ಲಿ 105 ಪ್ರಕರಣ ಪತ್ತೆಯಾಗುವುದರೊಂದಿಗೆ ಆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 510 ತಲುಪಿರುವುದರಿಂದ, ಮಂಗಳವಾರ ಮೊದಲ ಸ್ಥಾನದಲ್ಲಿದ್ದ ಉಡುಪಿ ಎರಡನೇ ಸ್ಥಾನಕ್ಕೆ ಬಂದಿದೆ. ಜಿಲ್ಲೆಯಲ್ಲಿ ಒಟ್ಟು 84 ಮಂದಿ ಗುಣಮುಖರಾಗಿದ್ದು, 386 ಸಕ್ರಿಯ ಪ್ರಕರಣಗಳಿವೆ. ಇನ್ನೂ 4936 ಮಂದಿಯ ಗಂಟಲು ದ್ರವ ಮಾದರಿ ವರದಿ ಬರಲು ಬಾಕಿ ಇದೆ.
ತಪ್ಪು ವಿಳಾಸ ನೀಡಿದರೆ ಕ್ರಮ
ಹೊರರಾಜ್ಯಗಳಿಂದ ಆಗಮಿಸುವವರು ಕ್ವಾರಂಟೈನ್‌ಗೆ ತೆರಳುವ ಮುನ್ನ ತಪ್ಪು ವಿಳಾಸ, ದೂರವಾಣಿ ಸಂಖ್ಯೆ ನೀಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಗದೀಶ್ ಎಚ್ಚರಿಸಿದ್ದಾರೆ. ಹೊರ ರಾಜ್ಯದಿಂದ ಬರುವವರು ಕಡ್ಡಾಯವಾಗಿ ಸೇವಾ ಸಿಂಧು ಆ್ಯಪ್‌ನಲ್ಲಿ ನೊಂದಣಿ ಮಾಡಿಕೊಂಡಿರಬೇಕು. ರಸ್ತೆ ಮಾರ್ಗದಲ್ಲಿ ಆಗಮಿಸುವವರು ರಾಜ್ಯದ ಗಡಿಯಲ್ಲಿರುವ ಸ್ವೀಕಾರ ಕೇಂದ್ರಕ್ಕೆ ಹಾಜರಾಗಿ ತಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆ ನಮೂದಿಸಿ ಕ್ವಾರಂಟೈನ್‌ಗೆ ಒಳಪಡಬೇಕು. ರೈಲಿನಲ್ಲಿ ಬರುವವರು ರೈಲ್ವೆ ನಿಲ್ದಾಣದಲ್ಲಿರುವ ಜಿಲ್ಲಾ ಸ್ವೀಕಾರ ಕೇಂದ್ರದಲ್ಲಿ ವಿಳಾಸ ಮತ್ತು ದೂರವಾಣಿ ಸಂಖ್ಯೆ ನೋಂದಾಯಿಸಬೇಕು. ನೋಂದಾಯಿಸಿದ ಸ್ಥಳಕ್ಕೆ ತೆರಳದೆ ಮಾರ್ಗಮಧ್ಯೆ ತಪ್ಪಿಸಿಕೊಂಡಲ್ಲಿ ಅಂತಹವರ ವಿರುದ್ಧ ಕೂಡಲೇ ಎಫ್‌ಐಆರ್ ದಾಖಲಿಸಿ, ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ.