

ಉಡುಪಿ/ಪಡುಬಿದ್ರಿ: ಜಿಲ್ಲೆಯಲ್ಲಿ ಶುಕ್ರವಾರ 213 ಮಂದಿಗೆ ಪಾಸಿಟಿವ್ ಬಂದಿದೆ. ಉಡುಪಿಯ 116, ಕುಂದಾಪುರದ 62, ಕಾರ್ಕಳದ 34 ಮಂದಿ ಸೋಂಕು ಬಾಧಿತರು. ಇದರಲ್ಲಿ 105 ಪುರುಷರು, 95 ಮಹಿಳೆಯರು, 13 ಮಂದಿ ಮಕ್ಕಳಿದ್ದಾರೆ.
ಶುಕ್ರವಾರ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಕೊಕ್ಕರ್ಣೆ, ಶಿರ್ವ, ಕಾಪು, ತೆಂಕನಿಡಿಯೂರಿನ ನಾಲ್ವರು ಹಿರಿಯ ನಾಗರಿಕರು ಮೃತಪಟ್ಟಿದ್ದು, ಇವರಿಗೆ ಕರೊನಾ ಸೋಂಕು ಇರುವುದು ದೃಡಪಟ್ಟಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕೋವಿಡ್ ಮಾರ್ಗಸೂಚಿಯಂತೆ ಮೃತರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
ಶಿರ್ವ ಗ್ರಾಮದ ತೆಂಕರಪಲ್ಕೆ ಎಂಬಲ್ಲಿನ 62 ವರ್ಷದ ವೃದ್ಧೆಗೆ ಕರೊನಾ ಸೋಂಕು ದೃಢಪಟ್ಟಿದ್ದು, ಗುರುವಾರ ಮೃತಪಟ್ಟಿದ್ದಾರೆ. ಮನೆಯ ಇತರ 4 ಸದಸ್ಯರಿಗೂ ಕರೊನಾ ಪಾಸಿಟಿವ್ ವರದಿಯಾಗಿದ್ದು ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಾಪು ಭಾರತ್‌ನಗರದ 62 ವರ್ಷದ ವ್ಯಕ್ತಿ ಶುಕ್ರವಾರ ಮೃತಪಟ್ಟಿದ್ದು, ಅವರಿಗೆ ಕರೊನಾ ಸೋಂಕು ದೃಢವಾಗಿದೆ.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4356ಕ್ಕೆ ಏರಿಕೆಯಾಗಿದೆ. ಶುಕ್ರವಾರ 621 ಮಂದಿ ಗಂಟಲ ದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. 54 ಮಂದಿ ಸೋಂಕಿನಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. 455 ಮಂದಿಯ ವರದಿ ನೆಗೆಟಿವ್ ಬಂದಿದೆ. ಇದುವರೆಗೆ 2522 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಇನ್ನೂ 562 ಮಂದಿಯ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.