ಉಡುಪಿಯಲ್ಲಿ 84 ಪಾಸಿಟಿವ್, ಓರ್ವ ಸಾವು

corona
Published on

ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ 84 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಕಿರಿಮಂಜೇಶ್ವರ ಮೂಲದ 80 ವರ್ಷ ಪ್ರಾಯದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.

ಎರಡು ದಿನಗಳ ಹಿಂದೆ ಉಸಿರಾಟ, ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದರು. ಕೋವಿಡ್ ಮಾರ್ಗಸೂಚಿ ಪ್ರಕಾರ ಕುಂದಾಪುರದಲ್ಲಿ ಅಂತಿಮ ಸಂಸ್ಕಾರ ನಡೆಸಲಾಗಿದೆ.

84 ಪಾಸಿಟಿವ್ ವರದಿಗಳಲ್ಲಿ 30 ಪುರುಷರು, 45 ಮಹಿಳೆಯರು, ಮೂರು ಗಂಡು ಮಕ್ಕಳು, ಮೂರು ಹೆಣ್ಣು ಮಕ್ಕಳಿದ್ದಾರೆ. 33 ಮಂದಿ ಉಡುಪಿ, 37 ಕುಂದಾಪುರ, 11 ಮಂದಿ ಕಾರ್ಕಳದವರು. 13 ಮಂದಿ ಜ್ವರ ಬಾಧೆ, ನಾಲ್ವರು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮುಂಬೈಯಿಂದ ಆಗಮಿಸಿದ ಏಳು ಮಂದಿ, ಮಂಗಳೂರಿನಿಂದ ಬಂದ ಮೂವರು, ದುಬೈ, ಅಬುಧಾಬಿಯಿಂದ ಆಗಮಿಸಿದ ತಲಾ ಒಬ್ಬರು, ಬೆಂಗಳೂರಿನಿಂದ ಬಮದ ಆರು ಮಂದಿಗೆ ಕರೊನಾ ಪಾಸಿಟಿವ್ ಬಂದಿದೆ. 46 ಮಂದಿ ಪ್ರಾಥಮಿಕ ಸಂಪರ್ಕದಿಂದ ಸೋಂಕಿತರಾಗಿದ್ದಾರೆ.

ಶುಕ್ರವಾರ 309 ನೆಗೆಟಿವ್ ವರದಿ ಬಂದಿದ್ದು, 213 ಮಾದರಿಗಳನ್ನು ಸಂಗ್ರಹಿಸಲಾಗಿದೆ. 414 ಮಾದರಿಗಳ ವರದಿ ನಿರೀಕ್ಷಿಸಲಾಗುತ್ತಿದೆ. ಒಟ್ಟು 1,979 ಸೋಂಕಿತರ ಪೈಕಿ 1,543 ಜನರು ಗುಣಮುಖರಾಗಿದ್ದು, 429 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನೇರ ಕೋವಿಡ್ ಸಾವಿಲ್ಲ: ಜಿಲ್ಲೆಯಲ್ಲಿ 1895 ಕರೊನಾ ಪಾಸಿಟಿವ್ ವರದಿಯಾಗಿದ್ದು, 428 ಸಕ್ರಿಯ ಪ್ರಕರಣಗಳಿವೆ. ಒಟ್ಟು 8 ಸಾವು ಸಂಭವಿಸಿದ್ದು, ಕೋವಿಡ್‌ನೊಂದಿಗೆ ಇತರೆ ಕಾಯಿಲೆ ಇದ್ದ ಕಾರಣ ಈ ಸಾವು ಸಂಭವಿಸಿವೆ. ನೇರವಾಗಿ ಕೋವಿಡ್-19ನಿಂದ ಯಾವುದೇ ಸಾವು ಸಂಭವಿಸಿಲ್ಲ. ಜಿಲ್ಲೆಯಲ್ಲಿ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಸಹ ಶೇ.50 ಬೆಡ್ ಮೀಸಲಿಡಲಾಗಿದೆ. ಕೆಂಎಸಿಯಲ್ಲಿ ದಿನಕ್ಕೆ 500-600 ಹಾಗೂ ಜಿಲ್ಲಾ ಆಸ್ಪತ್ರೆಯ ಲ್ಯಾಬ್‌ನಲ್ಲಿ 250-300 ಕೋವಿಡ್-19 ಪರೀಕ್ಷೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಾಸಿಕ ಕೆಡಿಪಿ ಸಭೆಗೆ ಮಾಹಿತಿ ನೀಡಿದರು.

ಕಾಪು, ಕೋಟ 18 ಮಂದಿಗೆ ಸೋಂಕು

ಪಡುಬಿದ್ರಿ/ಕೋಟ: ಕಾಪು ಠಾಣೆಯ ಮೂವರು ಪೊಲೀಸರ ಸಹಿತ ಕಾಪು ತಾಲೂಕಿನ 13 ಮಂದಿಯಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. ಕುರ್ಕಾಲು ಗಿರಿನಗರ, ಮೂಳೂರು, ಕಟಪಾಡಿ, ಕಾಪು ಪಡುಗ್ರಾಮ, ಎಲ್ಲೂರು ಬೆಳ್ಳಿಬೆಟ್ಟು, ಪಡುಬಿದ್ರಿ ನಡ್ಸಾಲಿನ ನಿವಾಸಿಗಳು ಇದರಲ್ಲಿದ್ದಾರೆ. ಸೋಂಕಿತರನ್ನು ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಿ, ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಕೋಟತಟ್ಟು ಹಾಗೂ ಕೋಟ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಮೂವರಿಗೆ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು, ಬಾರಕೂರು ಗ್ರಾಪಂ ಹೊಸಾಳ ಗ್ರಾಮದಲ್ಲಿ ಓರ್ವನಿಗೆ ಕರೊನಾ ಸೋಂಕು ದೃಢಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net