ಉಡುಪಿ ನಗರಸಭೆ ಸದಸ್ಯರು, ಜಿಲ್ಲಾಸ್ಪತ್ರೆ ವೈದ್ಯರು, ನಾಲ್ವರು ಸಿಬ್ಬಂದಿಗೂ ಕರೊನಾ

corona
Published on

ಉಡುಪಿ: ಜಿಲ್ಲೆಯಲ್ಲಿ ಬುಧವಾರ 53 ಮಂದಿಗೆ ಕರೊನಾ ಪಾಸಿಟಿವ್ ಇರುವುದು ದೃಢಪಟ್ಟಿದ್ದರೆ, 832 ವರದಿ ನೆಗೆಟಿವ್ ಬಂದಿದೆ.

ಉಡುಪಿ ನಗರಸಭೆಯ ಇಬ್ಬರು ಸದಸ್ಯರು, ಜಿಲ್ಲಾಸ್ಪತ್ರೆಯ ಇಬ್ಬರು ವೈದ್ಯರು ಹಾಗೂ ನಾಲ್ವರು ಸಿಬ್ಬಂದಿ, ಒಬ್ಬ ರೋಗಿಗೆ ಕರೊನಾ ಪಾಸಿಟಿವ್ ಬಂದಿದೆ. ರೋಗಿ ಇದ್ದ ವಾರ್ಡ್‌ನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ.

ಸಿಬ್ಬಂದಿಯನ್ನು ಶಂಕೆ ಮೇರೆಗೆ ಮುಂಚಿತವಾಗಿ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಪ್ರಸ್ತುತ ಎಲ್ಲರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಒಳಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

24 ಪುರುಷರು, 22 ಮಹಿಳೆಯರು, 7 ಮಕ್ಕಳ ಸಹಿತ ಪಾಸಿಟಿವ್ ಬಂದವರಲ್ಲಿ 29 ಕುಂದಾಪುರ, 18 ಉಡುಪಿ, ಕಾರ್ಕಳದ 6 ಮಂದಿ ಇದ್ದಾರೆ. ಮುಂಬೈಯಿಂದ ಇಬ್ಬರು, ಬೆಂಗಳೂರಿನಿಂದ ಇಬ್ಬರು, ಇಲ್‌ನೆಸ್ ಸಂಬಂಧಿಸಿ 16, ಸ್ಥಳೀಯ ಪ್ರಾಥಮಿಕ ಸಂಪರ್ಕದಿಂದ 33 ಮಂದಿ ಕರೊನಾ ವೈರಸ್ ತಗುಲಿದೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1786ಕ್ಕೆ ಏರಿಕೆಯಾಗಿದೆ. ಬುಧವಾರ 22 ಸೋಂಕಿತರು ಸಂಪೂರ್ಣ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು 401 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net