

ಉಡುಪಿ: ಜಿಲ್ಲೆಯಲ್ಲಿ ಸೋಮವಾರ 40 ಮಂದಿಗೆ ಕೋವಿಡ್-19 ದೃಢಪಟ್ಟಿದ್ದು, 23 ಜನರು ಪಾಸಿಟಿವ್ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕ ಹಿನ್ನೆಲೆ ಹೊಂದಿದ್ದಾರೆ.
466 ವರದಿ ನೆಗೆಟಿವ್ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 1362ಕ್ಕೆ ಏರಿಕೆಯಾಗಿದೆ. 23 ಪುರುಷರು, 15 ಮಹಿಳೆಯರು, 3 ಮಕ್ಕಳಿಗೆ ಪಾಸಿಟಿವ್ ಬಂದಿದೆ. 6 ಮಂದಿ ಮಹಾರಾಷ್ಟ್ರ, ಓರ್ವ ತೆಲಂಗಾಣ, 10 ಮಂದಿ ಇತರ ಜಿಲ್ಲೆಗಳಿಂದ ಆಗಮಿಸಿದ್ದು, 23 ಮಂದಿ ಪಾಸಿಟಿವ್ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕ ಹಿನ್ನೆಲೆ ಹೊಂದಿದ್ದಾರೆ. 16 ಉಡುಪಿ ತಾಲೂಕು, 23 ಮಂದಿ ಕುಂದಾಪುರ, ಓರ್ವ ಕಾರ್ಕಳ ತಾಲೂಕಿನ ನಿವಾಸಿಯಾಗಿದ್ದಾರೆ.
ಮನೆ ಸೀಲ್‌ಡೌನ್: ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ನಾಲ್ಕು ದಿನದ ಹಿಂದೆ ಊರಿಗೆ ಬಂದಿದ್ದ ಕೊಲ್ಲೂರು ಸಮೀಪದ ಜಡ್ಕಲ್ ಗ್ರಾಮದ ಕಾನ್ಕಿ ಎಂಬಲ್ಲಿನ ಮೂರು ಮನೆಗಳ ಒಟ್ಟು ನಾಲ್ಕು ಮಂದಿಗೆ ಕೋವಿಡ್-19 ಪಾಸಿಟಿವ್ ವರದಿ ಬಂದಿದೆ. ಮನೆ ಸೀಲ್ಡೌನ್ ಮಾಡಲಾಗಿದೆ. ಸೋಮವಾರ 718 ಮಂದಿಯ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, 1640 ವರದಿ ನಿರೀಕ್ಷಿಸಲಾಗುತ್ತಿದೆ. ಇಲ್ಲಿಯವರೆಗೆ 1154 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 205 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸೋಲೇಷನ್ ವಾರ್ಡಿಗೆ 13 ಮಂದಿ ದಾಖಲಾಗಿದ್ದು, 18 ಮಂದಿ ಬಿಡುಗಡೆಯಾಗಿದ್ದಾರೆ.
ಮೂವರು ಬಸ್ ಚಾಲಕರಿಗೆ ಸೋಂಕು
ಕುಂದಾಪುರ: ನಗರದಿಂದ ಹೊರ ಜಿಲ್ಲೆಗಳಿಗೆ ಸಂಚರಿಸುವ ಮೂರು ಕೆಎಸ್‌ಆರ್‌ಟಿಸಿ ಬಸ್ ಚಾಲಕರಿಗೆ ಕರೊನಾ ಸೋಂಕು ದೃಢವಾಗಿದೆ. ಬಸ್ರೂರಿನ 58 ವರ್ಷದ, ಬಾಗಲಕೋಟೆ ಮೂಲದ 36 ಹಾಗೂ 44 ವರ್ಷದ ಮೂವರು ಬಸ್ ಚಾಲಕರು ಸೋಂಕು ಪೀಡಿತರು. ಗುರುವಾರ ಕುಂದಾಪುರದ ಕೆಎಸ್‌ಆರ್‌ಟಿಸಿ ಡಿಪೋದ ಸಿಬ್ಬಂದಿ, ಬಸ್ ಚಾಲಕರು, ನಿರ್ವಾಹಕರ ಗಂಟಲ ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಡ್ರೈವರ್ ಕ್ಯಾಬಿನ್ ಪ್ರತ್ಯೇಕವಾಗಿರುವುದರಿಂದ ಪ್ರಯಾಣಿಕರು ಆತಂಕಗೊಳ್ಳಬೇಕಿಲ್ಲ. ಪ್ರಯಾಣಿಕರು ಯಾರೂ ಇವರ ಪ್ರಾಥಮಿಕ ಸಂಪರ್ಕದಲ್ಲಿ ಇರಲಿಲ್ಲ.
ಕೊರೋನಾ ನಿಯಂತ್ರಣಕ್ಕೆ 14 ತಂಡ, ಪ್ರತೀ ದಿನ ಜಿಲ್ಲಾಧಿಕಾರಿಗೆ ವರದಿ
ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹರಡುವುದನ್ನು ಪರಿಣಾಮಕಾರಿಯಗಿ ನಿಯಂತ್ರಿಸುವ ಉದ್ದೇಶದೊಂದಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ 14 ತಂಡಗಳನ್ನು ರಚಿಸಿದ್ದಾರೆ. ಎಲ್ಲ ತಂಡಗಳು ಸಂಘಟಿತ ಹಾಗೂ ಸಮನ್ವಯ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಪ್ರತಿ ದಿನದ ವರದಿ ನೀಡಲಿವೆ.
ಮೊದಲ ತಂಡ ಸೋಂಕಿತರನ್ನು ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡುತ್ತದೆ. ಎರಡನೇ ತಂಡ ಕೋವಿಡ್ ಆರೈಕೆ ಕೇಂದ್ರದಲ್ಲಿರುತ್ತದೆ. ಮೂರನೇ ತಂಡ ನಿಗದಿತ ಕೋವಿಡ್-19 ಆರೋಗ್ಯ ಕೇಂದ್ರ ಆಸ್ಪತ್ರೆಗಳಲ್ಲಿರುತ್ತದೆ. ನಾಲ್ಕನೇ ತಂಡ ಸಂಪರ್ಕ ಪತ್ತೆ, 5ನೇ ತಂಡ ಪರೀಕ್ಷೆ, 6ನೇ ತಂಡ ಕಂಟೇನ್ಮೆಂಟ್ ವಲಯ, 7ನೇ ತಂಡ ಕ್ವಾರಂಟೈನ್ ನಿಗಾ, 8ನೇ ತಂಡ ದೈಹಿಕ ಅಂತರ ಪಾಲನೆ, 9ನೇ ತಂಡ ಖಾಸಗಿ ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಮತ್ತು ಜ್ವರ ಚಿಕಿತ್ಸಾಲಯಗಳಿಂದ ಸಾರಿ ಪ್ರಕರಣಗಳ ಮೇಲೆ ನಿಗಾ ಇರಿಸುತ್ತದೆ.
ಹತ್ತನೇ ತಂಡ ಜಿಲ್ಲಾ ನಿಯಂತ್ರಣ ಕೊಠಡಿ ಜವಾಬ್ದಾರಿ ವಹಿಸುತ್ತದೆ. 11ನೇ ತಂಡ ಮೃತದೇಹಗಳ ನಿರ್ವಹಣೆ, 12ನೇ ತಂಡ ರಸ್ತೆ ಮತ್ತು ರೈಲಿನ ಮೂಲಕ ಬರುವ ಅಂತಾರಾಜ್ಯ ಪ್ರಯಾಣಿಕರ ಜವಾಬ್ದಾರಿ, 13ನೇ ತಂಡಕ್ಕೆ ವಿಮಾನಯಾನ ಮತ್ತು ನೌಕಯಾನದ ಮೂಲಕ ಪ್ರಯಾಣಿಸುವ ಅಂತಾರಾಜ್ಯ ಪ್ರಯಾಣಿಕರ ಜವಾಬ್ದಾರಿ, 14ನೇ ತಂಡಕ್ಕೆ ತಾಯಿ ಮತ್ತು ಮಗುವಿನ ಆರೋಗ್ಯ ಸೇವಾ ಕಾರ್ಯಕ್ರಮ ಜವಾಬ್ದಾರಿ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.