ಉಡುಪಿಯಲ್ಲಿ 45 ಮಂದಿಗೆ ಸೋಂಕು

corona
Published on

ಉಡುಪಿ: ಜಿಲ್ಲೆಯಲ್ಲಿ ಕರೊನಾ ಕಾಟ ಮುಂದುವರಿದಿದೆ. ಭಾನುವಾರ 45 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಸ್ಥಳೀಯ ಪ್ರಾಥಮಿಕ ಸಂಪರ್ಕದಿಂದ ಹಲವು ಪ್ರಕರಣ ವರದಿಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.

ಸ್ಥಳೀಯ ಪ್ರಾಥಮಿಕ ಸಂಪರ್ಕದಿಂದ 22 ಮಂದಿ ಸೋಂಕು ಹಬ್ಬಿರುವುದು ಭಾನುವಾರ ಪತ್ತೆಯಾಗಿದೆ. ಈಗಾಗಲೇ ಕೋಟದ ಹೋಟೆಲೊಂದರ ಮಾಲೀಕರಿಗೆ ಸೋಂಕು ತಗುಲಿತ್ತು. ಅವರ ಸಂಪರ್ಕದಿಂದ ನೌಕರನಿಗೆ, ಪಕ್ಕದ ಅಂಗಡಿ ಮತ್ತವರ ಕುಟುಂಬ ಸದಸ್ಯರಿಗೆ ಸೋಂಕು ಹರಡಿರುವುದು ದೃಢಪಟ್ಟಿದ್ದು 9 ಮಂದಿಗೆ ಸೋಂಕು ವ್ಯಾಪಿಸಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

45 ಮಂದಿಯಲ್ಲಿ ಮಹಾರಾಷ್ಟ್ರದಿಂದ ಬಂದವರು 20, ಚಿತ್ರದುರ್ಗದ ಒಬ್ಬರು ಸೇರಿದ್ದಾರೆ. ಇದರಲ್ಲಿ 5 ಮಕ್ಕಳು ಸಹಿತ 18 ಪುರುಷರು, 22 ಮಹಿಳೆಯರಿದ್ದು, ಉಡುಪಿಯ 22 ಮಂದಿ, ಕುಂದಾಪುರ 17 ಮಂದಿ, ಕಾರ್ಕಳದ ಆರು ಜನರಿದ್ದಾರೆ.

518 ಮಂದಿಯ ವರದಿ ನೆಗೆಟಿವ್ ಬಂದಿದ್ದು, ಕೋವಿಡ್ ಸೋಂಕು ಸಂಪರ್ಕ ಇರುವ 137 ಮಂದಿ, ಹಾಟ್‌ಸ್ಪಾಟ್ ಪ್ರದೇಶದಿಂದ ಆಗಮಿಸಿದ 76 ಮಂದಿ, ಉಸಿರಾಟ ಸಮಸ್ಯೆ 5, ಕೋವಿಡ್-19 ಲಕ್ಷಣ 25 ಮಂದಿ, ಇಲ್‌ನೆಸ್ 36 ಮಂದಿ ಸೇರಿದಂತೆ 279 ಮಂದಿಯ ಮಾದರಿ ಸಂಗ್ರಹಿಸಲಾಗಿದೆ. ಸೋಂಕಿತರ ಸಂಖ್ಯೆ 1322ಕ್ಕೆ ಏರಿಕೆಯಾಗಿದ್ದು, ಭಾನುವಾರ 22 ಮಂದಿ ಸೋಂಕಿತರು ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದೂವರೆಗೆ 1136 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 183 ಸಕ್ರಿಯ ಪ್ರಕರಣಗಳಿವೆ.

ಹೆಡ್‌ಕಾನ್‌ಸ್ಟೆಬಲ್‌ಗೆ ವೈರಾಣು ಬಾಧೆ

ಕುಂದಾಪುರ: ನಗರದ ಸಂಚಾರಿ ಠಾಣೆ ಹೆಡ್‌ಕಾನ್‌ಸ್ಟೆಬಲ್ ಒಬ್ಬರಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದ್ದು, ಅವರನ್ನು ಕುಂದಾಪುರ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. 59 ವರ್ಷದ ಹೆಡ್‌ಕಾನ್‌ಸ್ಟೆಬಲ್‌ಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಕೋವಿಡ್-19 ತಪಾಸಣೆ ನಡೆಸಲಾಗಿತ್ತು. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯನ್ನು ಎರಡು ದಿನ ಮುಚ್ಚಿ ಸ್ಯಾನಿಟೈಸಿಂಗ್ ಮಾಡಲಾಗುತ್ತದೆ. ಎರಡು ದಿನ ಸಮೀಪದ ಪ್ರವಾಸಿ ಮಂದಿರ (ಐಬಿ) ಯಲ್ಲಿ ಸಂಚಾರಿ ಠಾಣೆ ಕಾರ್ಯ ನಿರ್ವಹಿಸಲಿದೆ. ಸಂಚಾರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿ ಹಾಗೂ ಸಿಬ್ಬಂದಿಗೆ 15 ದಿನ ಹೋಂ ಕ್ವಾರಂಟೈನ್ ಮಾಡಲಾಗುತ್ತದೆ. ಹೆಡ್‌ಕಾನ್‌ಸ್ಟೆಬಲ್ ಇದ್ದ ಪೊಲೀಸ್ ಕ್ವಾರ್ಟರ್ಸ್ ಕೂಡ ಸೀಲ್ಡೌನ್ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net