

ಉಡುಪಿ: ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದಾಗ ಸೋಂಕು ಹರಡದಂತೆ ಕ್ರಮ ಕೈಗೊಂಡು ಯಶಸ್ವಿಯಾಗಿದ್ದ ಉಡುಪಿ ಜಿಲ್ಲೆಯಲ್ಲಿ ಈಗ ಅಂತಾರಾಷ್ಟ್ರೀಯ ಮತ್ತು ಹೊರರಾಜ್ಯಗಳಿಂದ ಆಗಮಿಸಿದವರಿಂದಾಗಿ ದಿನೇದಿನೆ ಕರೊನಾ ಕೇಸ್ ಹೆಚ್ಚುತ್ತಿದೆ.
ಬುಧವಾರ ಜಿಲ್ಲೆಯಲ್ಲಿ ಆರು ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಎಲ್ಲರೂ ಮುಂಬೈಯಿಂದ ವಾಪಸ್ಸಾದವರು. ಇತ್ತೀಚೆಗೆ ಮುಂಬೈಯಿಂದ ಆಗಮಿಸಿ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಕರೊನಾದಿಂದ ಮರಣ ಹೊಂದಿದ್ದ 54 ವರ್ಷದ ವ್ಯಕ್ತಿಯ ಜತೆಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ, ಕುಂದಾಪುರದಲ್ಲಿ ಕ್ವಾರಂಟೈನ್‌ಲ್ಲಿದ್ದ 47 ವರ್ಷದ ಮಹಿಳೆ ಮತ್ತು 15 ವರ್ಷದ ಹುಡುಗಿಗೆ ಕರೊನಾ ಪಾಸಿಟಿವ್ ಬಂದಿದೆ.
ಬೈಂದೂರಿನಲ್ಲಿ ಕ್ವಾರಂಟೈನ್‌ನಲ್ಲಿದ್ದ 55 ವರ್ಷದ ಪುರುಷ, 74 ವರ್ಷದ ಪುರುಷ, ಹೆಬ್ರಿಯಲ್ಲಿ ಕ್ವಾರಂಟೈನ್‌ನಲ್ಲಿದ್ದ 31 ವರ್ಷದ ಮಹಿಳೆ ಹಾಗೂ 4 ವರ್ಷದ ಮಗು ಮಾದರಿ ವರದಿ ಪಾಸಿಟಿವ್ ಬಂದಿದೆ. ಎಲ್ಲರನ್ನೂ ಜಿಲ್ಲಾ ಕೇಂದ್ರದಲ್ಲಿರುವ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
100 ಮೀಟರ್ ಸೀಲ್‌ಡೌನ್: ಕ್ವಾರಂಟೈನ್‌ನಲ್ಲಿದ್ದವರಿಗೆ ಕರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಕುಂದಾಪುರ, ಬೈಂದೂರು, ಹೆಬ್ರಿಯಲ್ಲಿ ಇವರು ವಾಸವಿದ್ದ ಕ್ವಾರಂಟೈನ್ ಕೇಂದ್ರಗಳ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯನ್ನು ಸೀಲ್‌ಡೌನ್ ಮಾಡಲಾಗಿದೆ.
ಒಟ್ಟು ಪ್ರಕರಣ 21: ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಈ ಪೈಕಿ ಮೂವರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಓರ್ವ ಮೃತಪಟ್ಟಿದ್ದಾರೆ, 17 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಕ್ರಿಯ ಪ್ರಕರಣಗಳಲ್ಲಿ 6 ಅಂತಾರಾಷ್ಟ್ರೀಯ ಪ್ರಯಾಣ ಹಾಗೂ 11 ಮಂದಿಗೆ ಅಂತಾರಾಜ್ಯ ಪ್ರಯಾಣದ ಹಿನ್ನೆಲೆ ಇದೆ. ಕ್ಯಾನ್ಸರ್ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಾಗಿರುವ ಯುವತಿ ಕರೊನಾ ಪಾಸಿಟಿವ್ ಹೊಂದಿದ್ದು, ಚಿತ್ರದುರ್ಗ ಜಿಲ್ಲಾಡಳಿತ ಮನವಿ ಮೇರೆಗೆ ಜಿಲ್ಲೆಯಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿದೆ.