ಬಳಕೆದಾರರ ವೇದಿಕೆಯ ಸಂಚಾಲಕ ಎ.ಪಿ. ಕೊಡಂಚ ನಿಧನ

Kodancha
Published on

ಸಾವಿರಾರು ಸಂತ್ರಸ್ತರಿಗೆ ನೆರವಾಗಿದ್ದ ಜನಸೇವಕ

ವಿಜಯವಾಣಿ ಸುದ್ದಿಜಾಲ ಉಡುಪಿ

ಬಳಕೆದಾರರ ವೇದಿಕೆಯ ಸಂಚಾಲಕರಾಗಿದ್ದ ಎ.ಪದ್ಮನಾಭ ಕೊಡಂಚ (89) ಕೊಳ್ಳೆಗಾಲದಲ್ಲಿರುವ ಪುತ್ರಿಯ ಮನೆಯಲ್ಲಿ ಆಗಸ್ಟ್​ 31ರ ರಾತ್ರಿ ನಿಧನರಾದರು. ಮೃತರಿಗೆ ಪತ್ನಿ,ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

ಕಾರ್ಪೊರೇಷನ್​ ಬ್ಯಾಂಕ್​ನ ನಿವೃತ್ತ ಅಧಿಕಾರಿಯಾಗಿದ್ದ ಅವರು 29 ವರ್ಷದಿಂದ ಬಳಕೆದಾರರ ವೇದಿಕೆಯಲ್ಲಿ ಸೇವೆ ಸಲ್ಲಿಸುತ್ತ, ಸಾವಿರಾರು ಸಂತ್ರಸ್ತರಿಗೆ ಸೂಕ್ತ ಮಾರ್ಗದರ್ಶನದೊಂದಿಗೆ ನೆರವು ನೀಡಿದ್ದರು.

ಬಳಕೆದಾರರಿಗಾಗಿ ಅನೇಕ ಕಮ್ಮಟ-ಕಾರ್ಯಾಗಾರ ನಡೆಸುತ್ತಿದ್ದ ಅವರು, ಗ್ರಾಹಕ ಜಾಗೃತಿ ಕೃತಿಗಳನ್ನೂ ಪ್ರಕಟಿಸಿದ್ದಾರೆ. ಕೊಡಂಚ ಅವರ ಸಾಮಾಜಿಕ ಸೇವೆ ಗಮನಿಸಿ ಯಕ್ಷಗಾನ ಕಲಾರಂಗವು ಕಳೆದ ಫೆ.28ರಂದು ಸೇವಾಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್​, ಕಾರ್ಯದರ್ಶಿ ಮುರಲಿ ಕಡೆಕಾರ್​ ತಿಳಿಸಿದ್ದಾರೆ.

ಕಾರ್ಪೊರೇಷನ್​ ಬ್ಯಾಂಕ್​ನಲ್ಲಿ 39 ವರ್ಷ ಸೇವೆ ಸಲ್ಲಿಸಿ, ಜನರಲ್​ ಮೆನೇಜರ್​ ಹುದ್ದೆ ನಿರ್ವಹಿಸಿ ನಿವೃತ್ತರಾದ ನಂತರ ಉಡುಪಿ ಬಳಕೆದಾರರ ವೇದಿಕೆಯಲ್ಲಿ ವಿಶ್ವಸ್ಥರಾಗಿ ಸೇವೆ ಸಲ್ಲಿಸಿದ್ದರು. ಬಳಕೆದಾರರ ವೇದಿಕೆ ಪತ್ರಿಕೆಯಲ್ಲಿ 10 ವರ್ಷಗಳಿಗೂ ಮಿಕ್ಕಿದ ಗ್ರಾಹಕ ಸಮಸ್ಯೆಗಳ ಕುರಿತಾಗಿ ಅವರು ಬರೆಯುತ್ತಿದ್ದ ಪ್ರಶೋತ್ತರ ಅಂಕಣವು ಪ್ರಸಿದ್ಧವಾಗಿತ್ತು. ದೂರದರ್ಶನದಲ್ಲಿ ಗ್ರಾಹಕ ಸ್ನೇಹಿ ಸಂದರ್ಶನವೂ ಪ್ರಸಾರಗೊಂಡಿತ್ತು. ಹಿರಿಯ ನಾಗರಿಕರ ವೇದಿಕೆ, ಅಂಚೆ ಸಲಹಾ ಸಮಿತಿ, ಪಾವನ ಪರಿಷತ್​ ಸದಸ್ಯರಾಗಿಯೂ ಸೇವೆ ಸಲ್ಲಿಸಿ ಜನಮನ್ನಣೆಗೆ ಪಾತ್ರರಾಗಿದ್ದರು ಎಂದು ಬಳಕೆದಾರರ ವೇದಿಕೆಯ ವಿಶ್ವಸ್ಥ ಎನ್​. ರಾಮ ಭಟ್​ ತಿಳಿಸಿದ್ದಾರೆ.

ಮೃತರ ಅಂತ್ಯ ಸಂಸ್ಕಾರವು ಉಡುಪಿಯ ಬೀಡಿನಗುಡ್ಡೆಯಲ್ಲಿ ಸೆಪ್ಟೆಂಬರ್​ 1ರಂದು ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net