ನಗದು ರಹಿತ ಸೇವೆ ನೀಡದ ವಿಮಾ ಕಂಪೆನಿಗೆ ದಂಡ ವಿಧಿಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯ

consumer-court-
Published on

ಉಡುಪಿ: ಪಾಲಿಸಿ ಶರತ್ತಿನ ಪ್ರಕಾರ ನಗದು ರಹಿತ ಸವಲತ್ತು ನೀಡದ ಸ್ಟಾರ್ ಹೆಲ್ತ್ ಮತ್ತು ಆಲೈಡ್ ಇನ್ನೂರೆನ್ಸ್ ಕಂಪೆನಿಗೆ ಆಸ್ಪತ್ರೆ ಬಿಲ್ ಮೊತ್ತ ಜೊತೆಗೆ ಶೇ. 10 ಬಡ್ಡಿ ಪಾವತಿಸುವಂತೆ ಜಿಲ್ಲಾ ಗ್ರಾಹಕ ನ್ಯಾಯಾಲಯ ತೀರ್ಪು ನೀಡಿದೆ.

ದೂರಿಗೆ ಸಂಬಂಧಿಸಿದಂತೆ 13 ದಾಖಲೆಗಳನ್ನು ಸಾಕ್ಷಿಯಾಗಿ ನ್ಯಾಯಾಲಯಕ್ಕೆ ನೀಡಲಾಗಿದ್ದು, ವಿಮಾ ಕಂಪನಿ ಕ್ಲೈಮಿನ ಮೊತ್ತ ರೂ. 54,017 ಹಾಗೂ 2021ರಿಂದ ಈವರೆಗೆ ಶೇ. 10 ಬಡ್ಡಿ ರೂ. 25,000 ಮತ್ತು ಕಾನೂನು ವ್ಯವಹಾರ ಖರ್ಚಿಗಾಗಿ 10,000 ರೂ. 30 ದಿನಗಳೊಳಗೆ ಪಾಲಿಸಿದಾರರಿಗೆ ಕೊಡಬೇಕೆಂದು ತೀರ್ಪು ನೀಡಿದೆ.

ಏನಿದು ಪ್ರಕರಣ
ಉಡುಪಿಯ ಆರ್.ವಸಂತ ಎಂಬುವವರು ಪತ್ನಿಗೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ಸೆ.9, 2021ರಂದು ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಿದ್ದರು. ನಂತರ ಅದೇ ದಿನ ಬಿಡುಗಡೆಗೊಳಿಸಿದ್ದರು. ಆಸ್ಪತ್ರೆ ಬಿಲ್ ಮೊತ್ತ 54,017 ರೂ. ಮೆಡಿಕಲ್ ಕ್ಲೈಮಿಗೆ ಹಾಕಿದಾಗ ವಿಮಾ ಕಂಪೆನಿ ಬಿಲ್ ತಿರಸ್ಕರಿಸಿತ್ತು. ವಸಂತ್ 4 ವರ್ಷಗಳಿಂದ ಸ್ಟಾರ್ ಹೆಲ್ತ್ ಮತ್ತು ಆಲೈಡ್ ಇನ್ನೂರೆನ್ಸ್ ಕಂಪೆನಿಯಲ್ಲಿ ರೂ. 4 ಲಕ್ಷ ಮೊತ್ತಕ್ಕೆ ವೈದ್ಯಕೀಯ ವಿಮೆ ಪಡೆದಿದ್ದು, ಹಿಂದಿನ ಮೂರು ವರ್ಷ ಯಾವ ಕ್ಲೈಮೂ ಮಾಡಿರಲಿಲ್ಲ. ಪಾಲಿಸಿ ಶರ್ತದ ಪ್ರಕಾರ ವಿಮಾ ಕಂಪೆನಿ ನಗದು ರಹಿತ ಸವಲತ್ತು ಪಡೆಯಲು ಅರ್ಹರಾಗಿದ್ದರು.
ವಿಮಾ ಕಂಪನಿ ಪ್ರಕಾರ, ದೂರುದಾರರ ಪತ್ನಿ 2014ರಲ್ಲಿ ಎದೆ ನೋವೆಂದು ಇದೇ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಕೊಂಡಿದ್ದು, ವಿಮಾ ಕಂಪನಿಗೆ ಮೊದಲೇ ತಿಳಿಸದೆ ಇರುವುದರಿಂದ ಪೂರ್ವ ಅನಾರೋಗ್ಯ ಕಾಯಿಲೆ. ಹೀಗಾಗಿ ಕಂಪನಿಯ ಶರತ್ತಿನ ಪ್ರಕಾರ ಈ ಕ್ಲೈಮು ಅನರ್ಹ ಎಂದಿತ್ತು. ವಿಮಾ ಕಂಪನಿ ಸತತವಾಗಿ ಕ್ಲೈಮು ತಿರಸ್ಕರಿಸಿದ್ದರಿಂದ ಗ್ರಾಹಕರು ಉಡುಪಿ ಬಳಕೆದಾರರ ವೇದಿಕೆಯನ್ನು ಸಂಪರ್ಕಿಸಿದ್ದು, ವೇದಿಕೆಯ ಪರವಾಗಿ ವಕೀಲೆ ಸೆಲೆಸ್ಟಿನ್ ಪುಷ್ಪ ವಾದಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net