

ಕಾರ್ಕಳ: ದೇಶದಲ್ಲಿ ಅವೈಜ್ಞಾನಿಕ ರೀತಿಯ ತೆರಿಗೆ ಹೇರಿಕೆಯ ಪರಿಣಾಮವಾಗಿ ತೈಲ ಬೆಲೆ ಏರಿಕೆ ಆಗಿದೆಯೇ ಹೊರತು, ಯುಪಿಎ ಅವಧಿಯ ಇಂಧನ ಬಾಂಡ್‌ಗಳ ಸಾಲ ತೀರಿಸುವ ಕಾರಣಕ್ಕಾಗಿ ಅಲ್ಲ. ಬಿಜೆಪಿ ತನ್ನ ಮಾನ ಉಳಿಸಿಕೊಳ್ಳಲು ಕಾಂಗ್ರೆಸ್‌ನ ಮೇಲೆ ಗೂಬೆ ಕೂರಿಸಿ ಜನರ ದಿಕ್ಕು ತಪ್ಪಿಸಲು ಯತ್ನಿಸುತ್ತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಆರೋಪಿಸಿದ್ದಾರೆ.
ಆಡಳಿತಾರೂಢ ಸರ್ಕಾರಗಳು ಜನರ ಅನುಕೂಲಕ್ಕಾಗಿ ಮಾಡುವ ಬೆಲೆ ನಿಯಂತ್ರಣ, ಸಬ್ಸಿಡಿ ಕಾರಣದಿಂದಾಗಿ ಉಂಟಾಗುವ ವಿತ್ತೀಯ ಕೊರತೆ ಸರಿದೂಗಿಸಲು ಕೆಲವೊಂದು ಕ್ಷೇತ್ರಗಳಲ್ಲಿ ಇಂತಹ ಬಾಂಡ್ ರೂಪದ ಸಾಲಗಳು ಒಂದು ಸಹಜ ಪ್ರಕ್ರಿಯೆ. ಯುಪಿಎ ಆಡಳಿತಾವಧಿಯಲ್ಲಿ ಕಚ್ಚಾ ತೈಲ ಬೆಲೆ ಚಾರಿತ್ರಿಕ ದಾಖಲೆ ಏರಿಕೆ ಕಂಡಿತ್ತು. ಪರಿಣಾಮವಾಗಿ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಪೆಟ್ರೋಲ್ ನೀಡುವ ಗುರಿಯೊಂದಿಗೆ ವಿವಿಧ ಹಂತಗಳಲ್ಲಿ ಒಟ್ಟು 1,44,186 ಕೋಟಿ ರೂ. ಪೆಟ್ರೋಲ್ ಉತ್ಪನ್ನ ಸಂಸ್ಥೆಗಳಿಂದ ಆಯಿಲ್ ಬಾಂಡ್ ನೀಡಿ ಸಾಲ ಮಾಡಿತ್ತು. ಇದರಲ್ಲಿ 9,763 ಕೋಟಿ ರೂ. ಅದೇ ಅವಧಿಯಲ್ಲಿಯೇ ಸಂದಾಯವಾಗಿತ್ತು. 2013-14ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಒಟ್ಟು ಆಯಿಲ್ ಬಾಂಡ್ ಸಾಲದ ಮೊತ್ತ 1,34,423 ಕೋಟಿ ರೂ. ಗೆ ಇಳಿಕೆಯಾಗಿತ್ತು. ಆದರೆ ಬಿಜೆಪಿ ಪೆಟ್ರೋಲ್ ಬೆಲೆ ಏರಿಕೆಗೆ ಯುಪಿಎ ಅವಧಿಯ ಆಯಿಲ್ ಬಾಂಡನ್ನೇ ಕಾರಣವಾಗಿಸಿ ಕಾಂಗ್ರೆಸ್ಸಿನ ತೇಜೋವಧೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.