ಉಡುಪಿ ಪ್ರಕರಣ ಉನ್ನತಮಟ್ಟದ ತನಿಖೆಯಾಗಲಿ: ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಆಗ್ರಹ

1 (3)
Published on

ಮಂಡ್ಯ: ಉಡುಪಿಯ ಕಾಲೇಜಿನ ಶೌಚಗೃಹದಲ್ಲಿ ಹಿಂದು ವಿದ್ಯಾರ್ಥಿನಿಯರ ನಗ್ನ ವೀಡಿಯೋ ಚಿತ್ರೀಕರಣ ಮಾಡಿ ಇನ್ನೊಂದು ಕೋಮಿನ ಯುವಕರಿಗೆ ನೀಡಿರುವ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಉಡುಪಿ ಘಟನೆಯಿಂದಾಗಿ ವಿದ್ಯಾರ್ಥಿನಿಯರು ನೆಮ್ಮದಿಯಾಗಿ ಕಾಲೇಜಿನಲ್ಲಿ ಶೌಚಗೃಹಕ್ಕೆ ಹೋಗುವ ವಾತಾವರಣ ಇಲ್ಲದಂತಾಗಿದೆ. ಇದು ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ. ಶೌಚಗೃಹದಲ್ಲಿ ಕ್ಯಾಮೆರಾ ಇಟ್ಟು ವಿಡಿಯೋ ಮಾಡಿ ಅದನ್ನು ತಮ್ಮ ನೆಟ್‌ವರ್ಕ್‌ಗಳಿಗೆ ಕಳುಹಿಸುವುದು ನಾಚಿಕೆಗೇಡಿನ ಸಂಗತಿ. ಈ ಬಗ್ಗೆ ಸಂಬಂಧಿಸಿದ ಕಾಲೇಜಿನ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿನಿಯರ ವಿರುದ್ಧ ಪ್ರಕರಣ ದಾಖಲಿಸದೆ ಸಂಪೂರ್ಣ ಪ್ರಕರಣವನ್ನೇ ಮುಚ್ಚಿಹಾಕುವಂತಹ ತಂತ್ರವನ್ನು ರಾಜ್ಯ ಸರ್ಕಾರ ಮತ್ತು ಗೃಹ ಸಚಿವರು ಮಾಡುತ್ತಿರುವುದು ಖಂಡನೀಯ ಎಂದು ದೂರಿದರು.

ವಿಡಿಯೋ ಮಾಡಿದ ಮೂವರು ವಿದ್ಯಾರ್ಥಿನಿಯರನ್ನು ಇನ್ನೂ ಬಂಧಿಸಿಲ್ಲ. ಸರ್ಕಾರ ಅವರ ಮೇಲೆ ಎಫ್‌ಐಆರ್ ಮಾಡಲು ಆರಂಭದಲ್ಲಿ ಮೀನಾ ಮೇಷ ಎಣಿಸುತ್ತಿತ್ತು. ಈ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾದ ನಂತರ ಪ್ರಕರಣ ದಾಖಲಿಸಿರುವುದು ಮಹಿಳೆಯರ ಮೇಲೆ ರಾಜ್ಯ ಸರ್ಕಾರಕ್ಕೆ ಇರುವ ಗೌರವವನ್ನು ಎತ್ತಿ ತೋರಿಸುತ್ತದೆ ಎಂದು ಟೀಕಿಸಿದ್ದಾರೆ.

ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜೆ. ಹಳ್ಳಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಅಮಾಯಕರು ಅವರ ಮೇಲೆ ಸುಳ್ಳು ಮೊಕದ್ದಮೆ ದಾಖಲು ಮಾಡಿದ್ದಾರೆ ಎಂದು ಗೃಹ ಸಚಿವರೇ ಸರ್ಕಾರಕ್ಕೆ ಶಿಫಾರಸು ಮಾಡಿರುವುದು ಖಂಡನೀಯ. ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ನಡೆಸಿ, ಸರ್ಕಾರಿ ವಾಹನಗಳನ್ನು ಧ್ವಂಸ ಮಾಡಿ ಬೆಂಕಿ ಹಚ್ಚಿರುವವರು ಅಮಾಯಕರೇ ಎಂದು ಪ್ರಶ್ನಿಸಿದ ಅವರು, ಇಂತಹ ಕೃತ್ಯವನ್ನು ನಾಗರೀಕ ಸಮಾಜ ಅತ್ಯಂತ ಕಟು ಪದಗಳಿಂದ ಖಂಡಿಸುತ್ತದೆ. ಆದರೆ ಕಾಂಗ್ರೆಸ್ ಸರ್ಕಾರ ಇದನ್ನು ಲಘುವಾಗಿ ಪರಿಗಣಿಸಿದೆ. ಪಿಎಫ್‌ಐ ಸಂಘಟನೆ ಮೇಲಿನ ಎಲ್ಲ ಕೇಸ್‌ಗಳನ್ನು ವಾಪಸ್ ಪಡೆಯುವ ಮೂಲಕ ಹಲವು ಜನರನ್ನು ಪ್ರಕರಣದಿಂದ ಕೈಬಿಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಇಂತಹ ಸಮಾಜಘಾತುಕ ವ್ಯಕ್ತಿಗಳ ಮೇಲಿನ ಮೊಕದ್ದಮೆಗಳನ್ನು ಕೈ ಬಿಟ್ಟಲ್ಲಿ ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಮತ್ತಷ್ಟು ವಿಧ್ವಂಸಕ ಕೃತ್ಯಗಳು ನಡೆಯಲು ಸರ್ಕಾರವೇ ಕಾರಣವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net