

ಉಡುಪಿ: ಜಿಲ್ಲಾ ಖಜಾನೆ ಮುಂಭಾಗದ ವೃತ್ತಕ್ಕೆ ವೀರ ಸಾರ್ವಕರ್ ಹೆಸರಿಡಲು ಮಂಗಳವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯಕೈಗೊಳ್ಳಲಾಯಿತು.
ಪೌರಾಯುಕ್ತ ಡಾ.ಉದಯ್ ಶೆಟ್ಟಿ ವಿಷಯ ಪ್ರಸ್ತಾವಿಸಿ, ಬ್ರಹ್ಮಗಿರಿ ವೃತ್ತದಲ್ಲಿ ಸ್ವಾತಂತ್ರೃ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಪುತ್ಥಳಿ ನಿರ್ಮಾಣಕ್ಕೆ ಹಿಂದೂ ಜಾಗಣ ವೇದಿಕೆ ಮತ್ತು ಅಖಿಲ ಭಾರತ ಹಿಂದೂ ಮಹಾಸಭಾ ಮನವಿ ಸಲ್ಲಿಸಿದ್ದು, ಶಾಸಕ ರಘುಪತಿ ಭಟ್ ಜಿಲ್ಲಾ ಖಜಾನೆ ವೃತ್ತಕ್ಕೆ ಸಾವರ್ಕರ್ ಹೆಸರಿಡಲು ಕೋರಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಸಭಾ ವ್ಯಾಪ್ತಿಯಲ್ಲಿ ಪುತ್ಥಳಿ ನಿರ್ಮಾಣಕ್ಕೆ ಅವಕಾಶವಿಲ್ಲ. ಬ್ರಹ್ಮಗಿರಿ ವೃತ್ತಕ್ಕೆ ಅಶ್ವಿನಿ ಶೆಟ್ಟಿ-ಆಸ್ಕರ್ ಫೆರ್ನಾಂಡಿಸ್ ವೃತ್ತ ನಾಮಕರಣಕ್ಕೆ ಈಗಾಗಲೇ ನಿರ್ಣಯ ಮಾಡಲಾಗಿದ್ದು, ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು. ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಹಳೆ ತಾಲೂಕು ಆಫೀಸ್ ಜಾಗದಲ್ಲಿ ಶೀಘ್ರದಲ್ಲಿ ನಗರಸಭೆ ನೂತನ ಕಟ್ಟಡ ನಿರ್ಮಾಣವಾಗಲಿದ್ದು, ಈಗಿನ ಲಯನ್ಸ್ ವೃತ್ತಕ್ಕೆ ಸಾವರ್ಕರ್ ಹೆಸರಿಡುವುದು ಸೂಕ್ತ ಎಂದು ಹೇಳಿದರು. ಇದಕ್ಕೆ ಪಕ್ಷಾತೀತವಾಗಿ ಸದಸ್ಯರು ಒಪ್ಪಿಗೆ ಸೂಚಿಸಿದರು.
ಉಡುಪಿ ನಗರಸಭೆ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿವಾಸಿಗಳಿಗೆ ನಗರ ಸಭೆಯಿಂದ ನೀಡುವ ಆರೋಗ್ಯ ವಿಮೆ 50 ಸಾವಿರ ರೂ. ನಿಂದ 1 ಲಕ್ಷಕ್ಕೆ ಏರಿಕೆ ಮಾಡುವ ನಿರ್ಣಯ ಕೈಗೊಳ್ಳಲಾಯಿತು. ಉಪಾಧ್ಯಕ್ಷೆ ಮಂಜುಕೊಳ, ಸ್ಥಾಯೀ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.