ಸರ್ಕಾರಿ ಬಸ್​ ಹೆಚ್ಚಳಕ್ಕೆ ಅಧಿವೇಶನದಲ್ಲಿ ಪ್ರಸ್ತಾಪ

udp-yashpal suvarna
Published on

ಉಡುಪಿ: ನಮ್​ರ್ ಬಸ್​ಗಳ ಸಂಖ್ಯೆ 46 ರಿಂದ 26ಕ್ಕೆ ಇಳಿಕೆಯಾಗಿದ್ದು, ಅನೇಕ ಕಡೆಗಳಿಂದ ಬಸ್​ಗಾಗಿ ಬೇಡಿಕೆ ಇದೆ. ಆರ್​ಟಿಒ ಪರವಾನಿಗೆ ನೀಡಿದರೂ ಕೆಎಎಸ್​ಆರ್​ಟಿಸಿ ಬಳಿ ಓಡಿಸಲು ಬಸ್​ಗಳಿಲ್ಲ. ಹೀಗಾಗಿ ಎಷ್ಟು ಮಾರ್ಗಗಳಲ್ಲಿ ಬಸ್​ಗಳ ಅಗತ್ಯವಿದೆ ಎಂಬ ಬಗ್ಗೆ ಸಾರಿಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕು. ಮುಂದಿನ ಅಧಿವೇಶನದಲ್ಲಿಯೂ ವಿಷಯ ಪ್ರಸ್ತಾಪ ಮಾಡಲಾಗುವುದು ಎಂದು ಶಾಸಕ ಯಶ್ಪಾಲ್​ ಸುವರ್ಣ ಹೇಳಿದರು.

ನಗರಸಭೆ ಸತ್ಯಮೂರ್ತಿ ಸಭಾಂಗಣದಲ್ಲಿ ಶುಕ್ರವಾರ ಸಾರಿಗೆ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಅಂಬಾಗಿಲು, ಗುಂಡಿಬೈಲು, ಕಲ್ಸಂಕ ರೂಟ್​ ಪರ್ಮಿಟ್​ ಹೊಂದಿರುವ ಬಸ್​ಗಳು ನಿಯಮಪ್ರಕಾರ ಸಂಚರಿಸುತ್ತಿಲ್ಲ. ಹೀಗಾಗಿ ಜನರು ಅಂಬಾಗಿಲಿನಿಂದ ಕಲ್ಸಂಕಕ್ಕೆ ರಿಕ್ಷಾದಲ್ಲಿ ಬರಬೇಕಾದ ಪರಿಸ್ಥಿತಿ ಇದೆ. ಮಲ್ಪೆ&ಕಡೆಕಾರ್​&ಕಿದಿಯೂರು ಮಾರ್ಗದಲ್ಲಿಯೂ ಬಸ್​ ಸಂಚಾರ ಸಮರ್ಪಕವಾಗಿಲ್ಲ. ಕನಿಷ್ಠ ಬೆಳಗ್ಗೆ ಮತ್ತು ಸಾಯಂಕಾಲ ಶಾಲಾ ವೇಳೆಯಲ್ಲಿ ಎಲ್ಲಾ ಬಸ್​ ಗಳು ಕಡ್ಡಾಯವಾಗಿ ಸಂಚಾರ ನಡೆಸಬೇಕು. ಈ ಬಗ್ಗೆ ಆರ್​ ಟಿ ಒ ಸೂಚನೆ ನೀಡಬೇಕು ಎಂದರು.

ನಗರ ಮತ್ತು ಗ್ರಾಮೀಣ ಭಾಗದಲ್ಲಿ 10ಕ್ಕೂ ಅಧಿಕ ಮಾರ್ಗಗಳಲ್ಲಿ ಬಸ್​ಗೆ ಬೇಡಿಕೆ ಇದೆ. ಈ ಬಗ್ಗೆ ಕೆಎಸ್​ ಆರ್​ ಟಿಸಿ ಯಾವುದೇ ಕ್ರಮ ವಹಿಸಿಲ್ಲ. ಜನಸಂಖ್ಯೆ ಆಧಾರದಲ್ಲಿ ಬಸ್​ ಓಡಿಸಬೇಕು. ಕೆಎಸ್​ ಆರ್​ಟಿಸಿ ಗೆ ಸಾಧ್ಯವಾಗದಿದ್ದರೆ ಖಾಸಗಿ ಬಸ್​ ಸಂಚಾರಕ್ಕೆ ವ್ಯವಸ್ಥೆ ಮಾಡುತ್ತೇವೆ. ನಂತರ ಅದೇ ಸಮಯಕ್ಕೆ ಅದೇ ದಾರಿಯಲ್ಲಿ ನಿಮ್ಮ ಓಡಿಸಿ ಜನರಿಗೆ ತೊಂದರೆ ಉಂಟು ಮಾಡಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಆರ್​ ಟಿ ಒ ಎಲ್​.ಪಿ. ನಾಯಕ್​, ಕೆಎಸ್​ಆರ್​ಟಿಸಿ ಡಿಪೋ ಮ್ಯಾನೇಜರ್​ ಶಿವರಾಮ ನಾಯ್ಕ, ಪೌರಾಯುಕ್ತ ರಾಯಪ್ಪ, ನಗರಸಭಾ ಸದಸ್ಯ ಪ್ರಭಾಕರ ಪೂಜಾರಿ, ಗಿರಿಧರ್​ ಆಚಾರ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net